ಹೆಣ್ಣು ಅಬಲೆಯಲ್ಲ. ಆಕೆಯ ಮಾನ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಆಕೆಯ ವಿರಾಟ ರೂಪ ದರ್ಶನವಾಗುತ್ತದೆ. ಇಂಥದ್ದೊಂದು ಎಳೆಯನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಜೂಲಿಯೆಟ್ 2′.
ತನ್ನ ತಂದೆಯ ಸಾವಿನ ಬಳಿಕ ಅವರ ಕೊನೆಯ ಆಸೆಯನ್ನು ಈಡೇರಿಸಲು ಜೂಲಿಯೆಟ್, ತಾನು ಹುಟ್ಟಿ ಬೆಳೆದ ಊರಿಗೆ ಬರುತ್ತಾಳೆ. ಆದರೆ ಆಕೆ ಬರುವ ವೇಳೆಗೆ ಸಂಪೂರ್ಣ ಊರಿನ ಚಿತ್ರಣವೇ ಬದಲಾಗಿರುತ್ತದೆ. ತಾನು ಬೆಳೆದ ಆಟವಾಡಿ ಬೆಳೆದ ಮನೆಯಲ್ಲೇ ಆಕೆಯ ಮಾನ, ಪ್ರಾಣ ಎರಡಕ್ಕೂ ಕುಂದು ತರುವ ಘಟನೆಗಳು ಎದುರಾಗುತ್ತದೆ. ಇದೆಲ್ಲವನ್ನು ದಿಟ್ಟವಾಗಿ ಎದುರಿಸುವ ಜೂಲಿಯೆಟ್ ಅಂತಿಮವಾಗಿ, ತನ್ನ ತಂದೆಯ ಕನಸನ್ನು ಈಡೇರಿಸುತ್ತಾಳಾ? ಇಲ್ಲವಾ? ಎಂಬುದು “ಜೂಲಿಯೆಟ್ 2′ ಸಿನಿಮಾದ ಕಥಾಹಂದರ. ಅದು ಹೇಗಿದೆ ಎಂಬುದು ಕಣ್ಣಾರೆ ನೋಡಬೇಕು ಎಂಬ ಕುತೂಹಲವಿದ್ದರೆ, “ಜೂಲಿಯೆಟ್ 2′ ಕಡೆಗೆ ಮುಖ ಮಾಡಬಹುದು.
ಇನ್ನು ಸಿನಿಮಾದ ಟೈಟಲ್‌ನಲ್ಲಿರುವಂತೆ, “ಜೂಲಿಯೆಟ್ 2′ ಮಹಿಳಾ ಪ್ರಧಾನ ಕಥಾ ಹಂದರದ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಇಡೀ ಸಿನಿಮಾದ ಕಥೆ ನಾಯಕಿ “ಜೂಲಿಯೆಟ್’ ಸುತ್ತ ನಡೆಯುತ್ತದೆ. “ಜೂಲಿಯೆಟ್’ ಪಾತ್ರದಲ್ಲಿ ನಟಿ ಬೃಂದಾ ಆಚಾರ್ಯ ಅವರದ್ದು ಅಚ್ಚುಕಟ್ಟು ಅಭಿನಯ. ಆ್ಯಕ್ಷನ್, ಎಮೋಶನ್ಸ್ ಎಲ್ಲ ದೃಶ್ಯಗಳಲ್ಲೂ ಬೃಂದಾ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆ ಇತರ ಪಾತ್ರಗಳ ಬಗ್ಗೆ ಅಷ್ಟೇನೂ ಹೇಳುವಂತಿಲ್ಲ.
ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಹೈಲೈಟ್ಸ್ ಎನ್ನಬಹುದು. ಸುಂದರವಾದ ಲೊಕೇಶನ್ಸ್, ಕಡಿಮೆ ಅವಧಿಯಲ್ಲಿ ಸಿನಿಮಾ ಸಾಗುವ ರೀತಿ ಎಲ್ಲವೂ ಸಿನಿಮಾಕ್ಕೆ ಪ್ಲಸ್ ಆಗಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ನೋಡುವವರು ಒಮ್ಮೆ “ಜೂಲಿಯೆಟ್ 2′ ನೋಡಲು ಅಡ್ಡಿಯಿಲ್ಲ.
ಜಿಎಸ್‌ಕೆ