Advertisement

ಕಸದಿಂದಲೇ ಕಸದಿಂದಲೇ ರಸ

11:39 AM May 05, 2019 | pallavi |

ಕಸದಿಂದ ಏನು ಮಾಡಲು ಸಾಧ್ಯ ಎನ್ನುವವರೇ ಹೆಚ್ಚು. ಆದರೆ, ಅದೇ ಕಸದಿಂದ ವಿದ್ಯುತ್‌, ಗ್ಯಾಸ್‌, ಗೊಬ್ಬರ ತಯಾರಿಸಿ ರಾಜ್ಯದಲ್ಲೇ ಮಾದರಿ ಘಟಕ ನಿರ್ವಹಿಸುವ ಕೆಲಸ ಇಲ್ಲಿನ ಬಾಗಲಕೋಟೆ ನಗರಸಭೆ ಮಾಡಿದೆ. ವಿದ್ಯುತ್‌ ಉತ್ಪಾದನೆಯಿಂದ ವಾರ್ಷಿಕ 4 ಲಕ್ಷದಷ್ಟು ಹೊರೆ ನಗರಸಭೆಗೆ ಕಡಿಮೆಯಾದರೆ, ಗೊಬ್ಬರ ಉತ್ಪಾದನೆಯಿಂದ ರೈತರಿಗೂ ಗುಣಮಟ್ಟದ ಸಾವಯವ ಗೊಬ್ಬರ ನೀಡುವ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದೆ. ನಗರಸಭೆ ಕೈಗೊಳ್ಳುತ್ತಿರುವ ಈ ಕಾರ್ಯದ ವಿವರ ಇಲ್ಲಿದೆ

Advertisement

ಬಾಗಲಕೋಟೆ: ಕಸದಿಂದ ರಸ ತೆಗೆಯುವುದು ಎಂದರೆ ಇದೆ ಇರಬೇಕು. ಮನೆ-ಮನೆಯಿಂದ ತರುವ ಕಸದಿಂದ ವಿದ್ಯುತ್‌, ಬಯೋಗ್ಯಾಸ್‌ ಹಾಗೂ ಸಾವಯವ ಗೊಬ್ಬರ ಉತ್ಪಾದನೆ ಮಾಡುವ ನಗರಸಭೆಯ ಪ್ರಯತ್ನ ಸಫಲಗೊಂಡಿದೆ. ಬಾಗಲಕೋಟೆ ನಗರಸಭೆಯ ಈ ಪ್ರಯತ್ನವನ್ನು ಕಣ್ಣಾರೆ ಕಂಡು ಅಧ್ಯಯನ ಮಾಡಲು ರಾಜ್ಯದ ವಿವಿಧ ನಗರ ಪಾಲಿಕೆಗಳ ಅಧಿಕಾರಿಗಳ ವರ್ಗ ಈಗ ಬಾಗಲಕೋಟೆಯತ್ತ ಬರುತ್ತಿದ್ದಾರೆ!

ಹೌದು, ಇಲ್ಲಿನ ಬಾಗಲಕೋಟೆ ನಗರಸಭೆಯಿಂದ ಹಳೆಯ ಎಪಿಎಂಸಿ ಬಳಿ ಇರುವ ಘನ ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ನಿತ್ಯ ನಗರದಲ್ಲಿ 50 ಟನ್‌ ಕಸ ಸಂಗ್ರಹವಾಗುತ್ತದೆ. ಅದರಲ್ಲೇ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ, ಹಸಿ ಕಸದಿಂದ ವಿದ್ಯುತ್‌,
ಬಯೋಗ್ಯಾಸ್‌ ಮತ್ತು ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ.

2 ಟನ್‌ ಹಸಿ ಕಸ ಬಳಕೆ: ನಗರದ ಮನೆ-ಮನೆ, ಹೊಟೇಲ್‌ ಗಳಿಂದ ಸಂಗ್ರಹಿಸುವ ಒಟ್ಟು ಕಸದಲ್ಲಿ ಹಸಿ ಕಸವನ್ನು ನಗರಸಭೆ ಕಾರ್ಮಿಕರು ವಿಂಗಡಣೆ ಮಾಡುತ್ತಾರೆ. ಆ ಹಸಿ ಕಸವನ್ನು 47.50 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ಬಯೋಗ್ಯಾಸ್‌ ಪ್ಲಾಂಟ್‌ ಯಂತ್ರಕ್ಕೆ ಹಾಕಲಾಗುತ್ತದೆ. ನಿತ್ಯ 2 ಟನ್‌ ಹಸಿ
ಕಸವನ್ನು ಈ ಯಂತ್ರಕ್ಕೆ ಹಾಕಿ, 160 ಕಿಲೋ ವ್ಯಾಟ್‌ ವಿದ್ಯುತ್‌, 50 ಕ್ಯೂಬಿಕ್‌ ಮೀಟರ್‌ ಬಯೋಗ್ಯಾಸ್‌ ಹಾಗೂ 20ರಿಂದ 25 ಕೆ.ಜಿ. ಸಾವಯವ ಗೊಬ್ಬರ ಉತ್ಪಾದನೆಯಾಗುತ್ತಿದೆ.

160ಕಿಲೋ ವ್ಯಾಟ್‌ ವಿದ್ಯುತ್‌ಅನ್ನು, ಇಲ್ಲಿನ ಬಯೋಗ್ಯಾಸ್‌ ಪ್ಲಾಂಟ್‌ನ ಜನರೇಟರ್‌, ವಿವಿಧ ಹಂತದ 8
ಎಚ್‌ಪಿ ಸಾಮರ್ಥ್ಯದ ಮೋಟಾರ್‌ಗಳಿಗೆ ಬಳಸಲಾಗುತ್ತದೆ. ಜತೆಗೆ ಇಡೀ 16 ಎಕರೆ ಪ್ರದೇಶದ ಬೀದಿ ದೀಪಗಳಿಗೆ (250 ವ್ಯಾಟ್‌ನ 15 ಕಂಬಗಳಿವೆ) ಇದೇ ವಿದ್ಯುತ್‌ ಬಳಕೆ ಮಾಡುತ್ತಿದ್ದು, ಇದರಿಂದ ನಗರಸಭೆಗೆ ವಾರ್ಷಿಕ 4.20 ಲಕ್ಷ ರೂ. ವಿದ್ಯುತ್‌ (ಘಟಕ ಆರಂಭಗೊಂಡಾಗಿನಿಂದ ವಿದ್ಯುತ್‌ ಬಿಲ್‌ ಪಾವತಿಸುವ ಪ್ರಮೇಯ ಬಂದಿಲ್ಲ) ಬಿಲ್‌ ಉಳಿತಾಯವಾಗಿದೆ.

Advertisement

ಸಮರ್ಪಕ ನಿರ್ವಹಣೆ: ರಾಜ್ಯದಲ್ಲಿ ಮೈಸೂರು, ಬೆಂಗಳೂರು, ರಾಮನಗರ, ಮಂಗಳೂರು ಸೇರಿದಂತೆ
ಕೆಲವೇ ಕೆಲವು ಮಹಾನಗರಗಳಲ್ಲಿ ಇಂತಹ ಬಯೋಗ್ಯಾಸ್‌ ಪ್ಲಾಂಟ್‌ ಅಳವಡಿಸಿದ್ದು, ಕೆಲವೆಡೆ ಸೂಕ್ತ ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿವೆ. ಆದರೆ, ಬಾಗಲಕೋಟೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಈ ಘಟಕ ಸಮರ್ಪಕವಾಗಿ ನಡೆಯುತ್ತಿದ್ದು, ಸದ್ಯ 2 ಟನ್‌ ಸಾವಯವ ಗೊಬ್ಬರ ಉತ್ಪಾದನೆಯಾಗಿದೆ. ಇದು ರೈತರಿಗೆ ಅತ್ಯಂತ ಉಪಯುಕ್ತವಾದ ಗೊಬ್ಬರವಾಗಿದ್ದು, ಒಂದು ಕೆ.ಜಿ.ಗೆ 8 ರೂ.ಗೆ ಮಾರಾಟವಾಗುತ್ತದೆ.

ಬಯೋಗ್ಯಾಸ್‌ ತಯಾರಿಕೆ: ಘನ ತ್ಯಾಜ್ಯ ನಿರ್ವಹಣೆಗಾಗಿ ಅಳವಡಿಸಿರುವ ಬಯೋಗ್ಯಾಸ್‌ ಪ್ಲಾಂಟ್‌ನಲ್ಲಿ ನಿತ್ಯ 50 ಕ್ಯೂಬಿಕ್‌ ಮೀಟರ್‌ ಗ್ಯಾಸ್‌ ತಯಾರಿಸಲಾಗುತ್ತಿದ್ದು, ಅದನ್ನು ನಗರಸಭೆ ವಿವಿಧ ಕಾರ್ಯಕ್ಕೆ ಬಳಕೆ ಮಾಡುತ್ತಿದೆ. ಅಲ್ಲದೇ ಈ ಘಟಕದ ಪಕ್ಕದಲ್ಲೇ ಕುಷ್ಠ ರೋಗಿಗಳ ಕಾಲೋನಿ ಇದ್ದು, ಅಲ್ಲಿನ ಜನರು, ಇದೇ ಗ್ಯಾಸ್‌ ಮೂಲಕ ಅಡುಗೆ ತಯಾರಿಕೆ ಸಹಿತ ವಿವಿಧಕ್ಕೂ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ನಗರಸಭೆ ಮನೆ-ಮನೆಯಿಂದ ಸಂಗ್ರಹಿಸುವ ಕಸದಿಂದ ವಿದ್ಯುತ್‌, ಗ್ಯಾಸ್‌ ಹಾಗೂ ಸಾವಯವ ಗೊಬ್ಬರ ಉತ್ಪಾದನೆ ಮಾಡಬೇಕೆಂಬುದು ಸರ್ಕಾರದ ಯೋಜನೆ. ಅದು ಬಾಗಲಕೋಟೆಯಲ್ಲಿ ಸಾಕಾರಗೊಳ್ಳಲು ಇಲ್ಲಿನ ನಗರಸಭೆಯ ಹಿಂದಿನ ಪೌರಾಯುಕ್ತ ಎಸ್‌.ಎನ್‌. ರುದ್ರೇಶ, ಈಗಿನ ಪರಿಸರ ಅಭಿಯಂತರ ಎಚ್‌.ವಿ. ಕಲಾದಗಿ ಅವರ ಪ್ರಯತ್ನ ಬಹಳಷ್ಟಿದೆ ಎನ್ನುತ್ತಾರೆ ನಗರಸಭೆಯ ಸಿಬ್ಬಂದಿ.

ಒಟ್ಟಾರೆ, ನಗರಸಭೆ ಕೈಗೊಂಡ ಈ ಪ್ರಯತ್ನ ಸದ್ಯಕ್ಕೆ ಅತ್ಯಂತ ಯಶಸ್ವಿ ಹಾಗೂ ಸಮರ್ಪಕವಾಗಿ ನಡೆಯುತ್ತಿದೆ. ಇದು ರಾಜ್ಯದ 10 ಮಹಾನಗರ ಪಾಲಿಕೆ, 58 ನಗರಸಭೆ, 116 ಪುರಸಭೆ ಹಾಗೂ 90 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪರಿಸರ ಶಾಖೆಯ ಅಧಿಕಾರಿಗಳಿಗೆ ಒಂದು ಪ್ರಾತ್ಯಕ್ಷಿಕೆ
ಕೂಡಾ ಆಗಿದೆ. ಕಸದಿಂದ ವಿದ್ಯುತ್‌, ಗ್ಯಾಸ್‌ ಹಾಗೂ ಗೊಬ್ಬರ ತಯಾರಿಕೆ ಕಾರ್ಯ ವೀಕ್ಷಣೆಗೆ ಪ್ರತಿ ತಿಂಗಳಿಗೊಮ್ಮೆ ಬೇರೆ-ಬೇರೆ ನಗರಸಭೆ, ಪುರಸಭೆ ಅಧಿಕಾರಿಗಳು ಇಲ್ಲಿ ಭೇಟಿ ಕೊಡುತ್ತಾರೆ.

ನಗರ, ನವನಗರ ಹಾಗೂ ವಿದ್ಯಾಗಿರಿ ಸೇರಿ ನಿತ್ಯ 50 ಟನ್‌ ಕಸ ಉತ್ಪಾದನೆಯಾಗುತ್ತದೆ. ಮನೆ-ಮನೆಯಿಂದ ಕಸ ಸಂಗ್ರಹಿಸಿ ತರುವ ವ್ಯವಸ್ಥೆ ನಮ್ಮಲ್ಲಿದ್ದು, ವಿದ್ಯುತ್‌, ಗ್ಯಾಸ್‌ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಹಸಿ ಕಸ ಮಾತ್ರ ಬಳಕೆ ಮಾಡುತ್ತಿದ್ದೇವೆ. ಜನರು, ತಮ್ಮ ಮನೆಯ ಎದುರು ಬರುವ ವಾಹನಗಳಿಗೆ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಹಾಕಿದರೆ, ನಮ್ಮ ಕಾರ್ಯಕ್ಕೆ ಇನ್ನಷ್ಟು ಸಹಕಾರ ಕೊಟ್ಟಂತೆ ಆಗುತ್ತದೆ. ಹಸಿ-ಒಣ ಕಸ ಒಟ್ಟಿಗೆ ಹಾಕುವುದರಿಂದ ಪ್ರತ್ಯೇಕಿಸಲು ಸಾಕಷ್ಟು ಸಮಯ-
ಕಾರ್ಮಿಕರ ಶ್ರಮ ವ್ಯರ್ಥ್ಯವಾಗುತ್ತಿದೆ.
ಎಚ್‌.ವಿ. ಕಲಾದಗಿ, ನಗರಸಭೆ ಪರಿಸರ ಅಭಿಯಂತರ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next