ನವದೆಹಲಿ: ಭಾರತದಲ್ಲಿ 5 ಜಿ ವೈರ್ ಲೆಸ್ ನೆಟ್ ವರ್ಕ್ ಸ್ಥಾಪಿಸುವುದರ ವಿರುದ್ಧ ನಟಿ, ಪರಿಸರವಾದಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ(ಜೂನ್ 04) ವಜಾಗೊಳಿಸಿದೆ. ಅಲ್ಲದೇ ಅರ್ಜಿದಾರರು ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿ ನಟಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ಮೊದಲ ಡೋಸ್ ಲಸಿಕೆ ಪಡೆದಿದ್ದರೂ ಬದುಕುಳಿಯಲಿಲ್ಲ ನಟಿ ರಿಂಕು ಸಿಂಗ್
ದೇಶದಲ್ಲಿ 5ಜಿ ನೆಟ್ ವರ್ಕ್ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಕೋರಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ , ಈ ಅರ್ಜಿ ದೋಷಯುಕ್ತವಾಗಿದೆ ಮತ್ತು ಇದೊಂದು ಮಾಧ್ಯಮ ಪ್ರಚಾರಕ್ಕಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಆರ್.ಮಿಧಾ, ಜೂಹಿ ಚಾವ್ಲಾ ತಮ್ಮ ಹಕ್ಕುಗಳ ಬಗ್ಗೆ ಮೊದಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬೇಕಿತ್ತು. ಒಂದು ವೇಳೆ ಸರ್ಕಾರ ಮಾಹಿತಿ ನೀಡಲು ನಿರಾಕರಿಸಿದ್ದರೆ ಆಗ ನ್ಯಾಯಾಲಯದ ಮೆಟ್ಟಿಲು ಏರಬಹುದಾಗಿತ್ತು ಎಂದು ತಿಳಿಸಿದ್ದರು.
ಅರ್ಜಿ ವಿಚಾರಣೆ ವೇಳೆ 1993ರಲ್ಲಿ ತೆರೆಕಂಡ ಹಮ್ ಹೈ ರಾಹಿ ಪ್ಯಾರ್ ಕೆ ಚಿತ್ರದ ಗೀತೆಯನ್ನು ಹಾಡಿ ಪ್ರಕ್ರಿಯೆಗೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಗುರುತಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.