Advertisement

ಶ್ರುತಿಹರಿಹರನ್‌ ವಿರುದ್ಧ ಜಗ್ಗೇಶ್‌ ಗರಂ

12:32 PM Oct 24, 2018 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದಲ್ಲೀಗ ಮಿ ಟೂ ಅಭಿಯಾನ ಜೋರು ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಪರ, ವಿರೋಧ ಹೇಳಿಕೆಗಳು ಜೋರಾಗುತ್ತಿವೆ. ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆ ಕಲಾವಿದರು ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.

Advertisement

ಮಂಗಳವಾರ ಜಗ್ಗೇಶ್‌ ಕೂಡ ಶ್ರುತಿಹರಿಹರನ್‌ ಅವರು ಅರ್ಜುನ್‌ ಸರ್ಜಾ ಅವರ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. “ಡಾ. ರಾಜಕುಮಾರ್‌, ವಿಷ್ಣುವರ್ಧನ್‌ ನಂತರ ನಾನು ಹತ್ತಿರದಿಂದ ಕಂಡಂತೆ ಅರ್ಜುನ್‌ ಸರ್ಜಾ ಅವರು ಅತ್ಯಂತ ಸಭ್ಯ, ಸರಳ ಸುಸಂಸ್ಕೃತ ನಟ.

ಪ್ರತಿಯೊಬ್ಬರನ್ನು ಗೌರವಿಸುವ, ಏಕ ವಚನದಲ್ಲಿ ಕೂಡ ಯಾರನ್ನೂ ಕರೆಯದವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾರೆಂದರೆ, ಅದಕ್ಕೆ ಏನನ್ನಬೇಕು? ಮೂವತ್ತೈದು ವರ್ಷಗಳ ಅರ್ಜುನ್‌ ಸರ್ಜಾ ಅವರ ಸಿನಿಮಾ ಕೃಷಿಯನ್ನು ಶ್ರುತಿ ಹರಿಹರನ್‌ ಒಂದೇ ದಿನದದಲ್ಲಿ ಹಾಳು ಮಾಡಿದಂತಾಗಿದೆ. ಇದು ಅವರನ್ನು ಕೊಲೆ ಮಾಡಿದ ಹಾಗೆ’ ಎಂದು ಜಗ್ಗೇಶ್‌ ಹೇಳಿದ್ದಾರೆ.

ಇನ್ನು, ನಟಿ ಖುಷೂº ಕೂಡ ಅರ್ಜುನ್‌ ಪರ ಮಾತನಾಡಿದ್ದಾರೆ. “ನಾನು ಮೊದಲು ನಾಯಕಿಯಾಗಿ ಅಭಿನಯಿಸಿದ್ದೆ ಅರ್ಜುನ್‌ ಸರ್ಜಾ ಅವರ ಸಿನಿಮಾದಲ್ಲಿ. ಅವರೊಬ್ಬ ಜೆಂಟಲ್‌ಮ್ಯಾನ್‌. ಅವರ ಜೊತೆ ಅಭಿನಯಿಸಿದ್ದು, ಅವರ ಸ್ನೇಹ ಸಂಪಾದಿಸಿದ್ದೆ ನನಗೊಂದು ಹೆಮ್ಮೆ. ನನಗೆ ಹತ್ತಿರದಿಂದ ಗೊತ್ತಿರುವಂತೆ ಅಂದು ಅರ್ಜುನ್‌ ಸರ್ಜಾ ಹೇಗಿದ್ದರೊ, ಈಗಲೂ ಹಾಗೆ ಇದ್ದಾರೆ. ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟರೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ’ ಎಂದು ಖುಷೂº ಹೇಳಿದ್ದಾರೆ.

ಇತ್ತ ಪ್ರಕಾಶ್‌ ರೈ , ಶ್ರುತಿ ಹರಿಹರನ್‌ ಬೆಂಬಲಕ್ಕೆ ನಿಂತಿದ್ದಾರೆ. “ಒಬ್ಬಳು ಹೆಣ್ಣು ತನಗಾದ ಅನ್ಯಾಯದ ವಿರುದ್ಧ ತಿರುಗಿ ನಿಂತರೆ ಇಡೀ ಜಗತ್ತೆ ಅವಳ ವಿರುದ್ಧ ಎದ್ದು ಕೂರುತ್ತದೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ, ಅವಳ ಬಾಯಿ ಮುಚ್ಚಿಸುವುದಕ್ಕೆ ನೋಡುತ್ತದೆ. ಆಮೇಲೆ ಅವಳೊಬ್ಬಳೆ ಅಲ್ಲ, ಯಾವ ಹೆಣ್ಣು ಮಗಳೂ ಬಾಯಿ ತೆರೆಯಬಾರದು.

Advertisement

ಯಾವತ್ತೂ ತನಗೆ ಅನ್ಯಾಯವಾಗಿದೆ ಎಂದು ಹೇಳಿಕೊಳ್ಳಬಾರದು. ಒಂದು ಕೆಟ್ಟ ಸ್ಪರ್ಶವನ್ನು ಕೂಡ ಸಹಜ ಎಂಬಂತೆ ಸ್ವೀಕರಿಸಬೇಕು ಎಂಬಂತೆ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ನಡುವೆ, ಧ್ರುವಸರ್ಜಾ ಮತ್ತೆ  ಶ್ರುತಿ ಹರಿಹರನ್‌ ಕುರಿತು ಮಾತನಾಡಿದ್ದಾರೆ. “ಅವರು ಎರಡು ವರ್ಷದ ಹಿಂದಿನ ಘಟನೆ ಇಟ್ಟುಕೊಂಡು ಈಗ ಆರೋಪಿಸುತ್ತಿದ್ದಾರೆ.

ನನಗೆ ಗೊತ್ತಿರುವಂತೆ ಚೇತನ್‌ ಅವರ ಸಂಸ್ಥೆಗೆ ಶೃತಿ ಹರಿಹರನ್‌ ಮೆಂಬರ್‌ ಆಗಿ ಎಂಟು ತಿಂಗಳುಗಳಾಗಿವೆ. ಈ ಎಂಟು ತಿಂಗಳಲ್ಲಿ ಅರ್ಜುನ್‌ ಸರ್ಜಾ ಅವರ ಮೇಲೆ ಹೇಗೆಲ್ಲಾ ಆರೋಪ ಮಾಡಬಹುದು ಎಂದು ಸ್ಟಡಿ ಮಾಡಿ, ಈ ಥರದ ಆರೋಪ ಮಾಡಲಾಗುತ್ತಿದೆ ಎಂದು ಧ್ರುವಸರ್ಜಾ ಕಿಡಿಕಾರಿದ್ದಾರೆ.

ಧ್ರುವಸರ್ಜಾ ಸೇರಿದಂತೆ ಕೆಲವರ ಹೇಳಿಕೆಗಳನ್ನು ಗಮನಿಸಿದ ನಟ ಚೇತನ್‌, “ನಾವು ಇಲ್ಲಿ ಯಾರ ವಿರುದ್ಧ ಮಾತನಾಡುತ್ತಿದ್ದೇವೆ ಎಂಬುದಕ್ಕಿಂತ ಯಾರಿಗೆ ಬೆಂಬಲವಾಗಿದ್ದೇವೆ ಅನ್ನೋದು ಮುಖ್ಯ. ಯಾರು ಶೋಷಣೆಗೆ ಒಳಗಾಗಿದ್ದಾರೋ, ಅವರ ಪರ ನಮ್ಮ ಬೆಂಬಲ, ಹೋರಾಟ ಇದ್ದೇ ಇರುತ್ತದೆ.

ಅನ್ಯಾಯಕ್ಕೆ ಒಳಗಾದವರ ಪರ ಮಾತನಾಡುವುದೇ ತಪ್ಪು ಎನ್ನುವುದಾದರೆ, ಯಾರೂ ಅವರ ಪರ ನಿಲ್ಲುವುದಿಲ್ಲ. ಇಲ್ಲಿ ಯಾರು ಮಾಡಿದ್ದಾರೆ ಎನ್ನುವುದಕ್ಕಿಂತ, ಏನು ಮಾಡಿದ್ದಾರೆ, ಯಾರಿಗೆ ನ್ಯಾಯ ಸಿಗಬೇಕು ಅನ್ನೋದೆ ಮುಖ್ಯ’ ಎಂದು ಚೇನತ್‌ ಹೇಳಿದ್ದಾರೆ.

“ಮಹಿಳೆಯರನ್ನು ಗೌರವಿಸುವುದು ಸರಿ. ಆದರೆ ಕೆಲವು ನಟಿಯರು ತಾನು ಮಹಿಳೆ ಎಂಬುದನ್ನೇ ಬಳಸಿ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಅದಕ್ಕೊಂದು ಮಿತಿ ಇರುತ್ತದೆ. ಪ್ರತಿಷ್ಠಿತ ನಟರ ಹೆಸರನ್ನು ಒಂದೇ ಹೇಳಿಕೆ ಮೂಲಕ ಹಾಳು ಮಾಡುತ್ತಾರೆ. ನಾನು ಹತ್ತು ವರ್ಷದಿಂದ ಚಿತ್ರರಂಗವನ್ನು ಹತ್ತಿರದಿಂದ ನೋಡಿದ್ದೇನೆ. ಕೆಲವು ನಟಿಯರು ಮೇಲೆ ಬರಲು ಏನು ಬೇಕಾದರೂ ಮಾಡುತ್ತಾರೆ’.
-ಹರ್ಷಿಕಾ ಪೂಣಚ್ಚ, ನಟಿ

Advertisement

Udayavani is now on Telegram. Click here to join our channel and stay updated with the latest news.

Next