Advertisement

ಬಹುಬೇಡಿಕೆಯ ಬಾಲನಟಿಗೆ ತಂದೆ ಗುಂಡು ಹೊಡೆದು ಬೆಂಕಿ ಹಚ್ಚಿ ಬಿಟ್ಟಿದ್ದ

04:52 PM Apr 26, 2018 | Sharanya Alva |

ಇತ್ತೀಚೆಗಷ್ಟೇ ಹೃದಯಾಘಾತದಿಂದ ಮರೆಯಾದ ಮೋಹಕ ತಾರೆ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ್ದರು. 90ರ ದಶಕದಲ್ಲಿ ಬೇಬಿ ಶ್ಯಾಮಿಲಿ ಬಾಲನಟಿಯಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾದಲ್ಲಿ ಬಾಲ ನಟಿಯಾಗಿ ಮಿಂಚಿದ್ದಳು…ಅದೇ ರೀತಿ ಹಾಲಿವುಡ್ ನಲ್ಲಿ 80ರ ದಶಕದಲ್ಲಿ ಬೊಗಸೆ ಕಂಗಳ ಪುಟ್ಟ ಚೆಲುವೆ ಜುಡಿತ್ ಇವಾ ಬರ್ಸಿ ಎಲ್ಲರ ಗಮನ ಸೆಳೆದಿದ್ದಳು.

Advertisement

ಐದನೇ ವಯಸ್ಸಿನಲ್ಲಿಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಜುಡಿತ್ ಟೆಲಿವಿಷನ್ ನಲ್ಲಿ ಹಲವಾರು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರ ಮಾಡಿದ್ದಳು. ಬಳಿಕ ದ ರಿವೇಂಜ್, ದಿ ಲ್ಯಾಂಡ್ ಬಿಫೋರ್ ಟೈಮ್ ಹಾಗೂ ಆಲ್ ಡಾಗ್ಸ್ ಗೋ ಟು ಹೆವೆನ್ ಎಂಬ ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಳು!

ಹೀಗೆ ಬೇಡಿಕೆಯ ಬಾಲನಟಿಯಾಗಿದ್ದ ಬರ್ಸಿ ವರ್ಷಕ್ಕೆ ಗಳಿಸುತ್ತಿದ್ದ ಆದಾಯ ಬರೋಬ್ಬರಿ ಒಂದು ಲಕ್ಷ ಡಾಲರ್! ಆಕೆಯ ಆದಾಯದಿಂದ  ಬರ್ಸಿ ಪೋಷಕರು ಲಾಸ್ ಏಂಜಲ್ಸ್ ನ ವೆಸ್ಟ್ ಹಿಲ್ಸ್ ನಲ್ಲಿ ಮೂರು ಬೆಡ್ ರೂಂನ ಮನೆಯೊಂದನ್ನು ಖರೀದಿಸಿದ್ದರು. ಇದು ಬಾಲ ನಟಿಯ ಕುರಿತ ಕಥೆಯಾಯ್ತು…

ಈಕೆಯ ತಂದೆ, ತಾಯಿ ಬಗ್ಗೆ ಹೇಳಬೇಕು, 1956ರಲ್ಲಿ ಸೋವಿಯಟ್ ಆಕ್ರಮಣದ ಬಳಿಕ ಕಮ್ಯುನಿಷ್ಟ್ ಕಪಿಮುಷ್ಟಿಯಲ್ಲಿದ್ದ ಹಂಗೇರಿ ದೇಶದಿಂದ ಜೋಸೆಫ್ ಪಲಾಯನಗೈದು ನ್ಯೂಯಾರ್ಕ್ ಬಂದಿದ್ದರು.ಅಲ್ಲಿಂದ ಕ್ಯಾಲಿಫೋರ್ನಿಯಾಗೆ ಬಂದ ಜೋಸೆಫ್ ಗೆ ಹಂಗೇರಿಯಾದಿಂದ ವಲಸೆ ಬಂದಿದ್ದ ಮರಿಯಾ ವಿರೋವಾಕ್ಜ್ ಎಂಬಾಕೆಯ ಪರಿಚಯವಾಗುತ್ತದೆ.

ನಂತರ ಇಬ್ಬರೂ ಮದುವೆಯಾಗಿ ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾದಲ್ಲಿ ಬದುಕನ್ನು ಕಟ್ಟಿಕೊಳ್ಳತೊಡಗಿದ್ದರು. 1978ರ ಜೂನ್ 6ರಂದು ಇದೇ ಪುಟಾಣಿ ಜುಡಿತ್ ಬರ್ಸಿ ಜನಿಸುತ್ತಾಳೆ.ಇಬ್ಬರೂ ಹಂಗೇರಿಯಲ್ಲಿ ಕಷ್ಟದ ದಿನಗಳನ್ನು ಕಳೆದಿದ್ದರಿಂದ ಸಹಜವಾಗಿಯೇ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿದ್ದರು. ಮಗಳು ಜನಿಸಿದ ಮೇಲೆ ಆಕೆಯನ್ನು ನಟಿಯನ್ನಾಗಿ ಮಾಡಬೇಕೆಂಬ ಮಹದಾಸೆ ಹೊಂದಿದ್ದು ತಾಯಿ ಮರಿಯ. ಆಕೆಯ ಕನಸಿನಂತೆ ಮಗಳು ಬರ್ಸಿ ಬಾಲ ನಟಿಯಾಗಿ ಮಿಂಚತೊಡಗಿದ್ದಳು..ಕೈತುಂಬಾ ಹಣ ಬರತೊಡಗಿತ್ತು. ಇದೇ ಬಾಲನಟಿಯ ಪಾಲಿಗೆ ಕಂಟಕವಾಗುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲವಾಗಿತ್ತು.

Advertisement

ಸಿನಿಮಾ ಕ್ಷೇತ್ರದಲ್ಲಿ ಮಗಳು ಬೆಳೆಯತೊಡಗುತ್ತಿದ್ದಂತೆಯೇ ತಂದೆ ಜೋಸೆಫ್ ವಿಚಿತ್ರವಾಗಿ ವರ್ತಿಸತೊಡಗುತ್ತಾನೆ. ಕುಡಿತದ ಚಟ ವಿಪರೀತವಾಗಿತ್ತು. ನಿನ್ನ(ಪತ್ನಿ) ಮತ್ತು ಮಗಳನ್ನು ಕೊಲ್ಲುವುದಾಗಿ ಗಂಡ ಬೆದರಿಕೆ ಹಾಕುತ್ತಿದ್ದ. ಕುಡಿದು ವಾಹನ ಚಲಾಯಿಸಿ ಮೂರು ಬಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಗಂಡನ ಕಿರುಕುಳ ತಾಳಲಾರದೆ ಮರಿಯ 1986ರಲ್ಲಿ ಪೊಲೀಸರಿಗೆ ದೂರು ನೀಡುತ್ತಾಳೆ. ಆದರೆ ದೈಹಿಕವಾಗಿ ಹಲ್ಲೆ ನಡೆಸಿದ ಯಾವುದೇ ಕುರುಹು ಇಲ್ಲ ಎಂಬುದು ಪೊಲೀಸರ ಗಮನಕ್ಕೆ ಬಂದಾಗ ಗಂಡನ ವಿರುದ್ಧ ಯಾವುದೇ ಆರೋಪ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರುತ್ತಾಳೆ. ಈ ಪ್ರಸಂಗದ ನಂತರ ಜೋಸೆಫ್ ಬರ್ಸಿ ಕುಡಿಯೋದನ್ನು ಬಿಟ್ಟು ಬಿಡುತ್ತಾನೆ. ಆದರೆ ಹೆಂಡತಿ ಮತ್ತು ಮಗಳಿಗೆ ಬೆದರಿಕೆ ಹಾಕೋದನ್ನು ಮಾತ್ರ ಮುಂದುವರಿಸುತ್ತಾನೆ! ಹೆಂಡತಿ ಮತ್ತು ಮಗಳು ಅಮೆರಿಕವನ್ನು ಬಿಟ್ಟು ಹೋಗಬಾರದು ಎಂಬ ಕಾರಣಕ್ಕಾಗಿಯೇ ಜೋಸೆಫ್, ಹಂಗೇರಿಯಲ್ಲಿ ಆಕೆಯ ಸಂಬಂಧಿ ತೀರಿಕೊಂಡಿದ್ದರು ಎಂಬ ಸುದ್ದಿಯನ್ನು ಹೊತ್ತು ತಂದಿದ್ದ ಟೆಲಿಗ್ರಾಮ್  ಪತ್ನಿ ಮರಿಯಾಗೆ ಸಿಗದಂತೆ ಮಾಡಿದ್ದ!

ತಂದೆ ತನಗೆ ಹೊಡೆಯುತ್ತಾರೆ ಎಂಬುದನ್ನು ಗೆಳೆಯರಲ್ಲಿ ಬರ್ಸಿ ಹೇಳಿಕೊಂಡಿದ್ದಳು. ಹೀಗೆ ದೂರಿದ್ದಕ್ಕೆ ಮತ್ತಷ್ಟು ಕ್ಷುದ್ರನಾದ ಜೋಸೆಫ್ ಮಗಳ ಕಣ್ಣಿನ ಕೂದಲನ್ನು ಕೀಳೋದು, ಆಕೆಯ ಮುದ್ದಿನ ಬೆಕ್ಕಿನ ಮೀಸೆಯ ಕೂದಲನ್ನು ಕಿತ್ತು ಹಿಂಸೆ ಕೊಡತೊಡಗಿದ್ದ. ಹೀಗೆ ಆಲ್ ಡಾಗ್ಸ್ ಗೋ ಟು ಹೆವನ್ ಹಾಡಿನ ಆಡಿಷನ್ ನಡೆಯುತ್ತಿದ್ದ ವೇಳೆ ಬರ್ಸಿ ಕುಸಿದು ಬಿದ್ದಿದ್ದಳು. ಕೂಡಲೇ ತಾಯಿ ಮಗಳನ್ನು ಮಕ್ಕಳ ಮಾನಸಿಕ ತಜ್ಞರ ಬಳಿ ಕರೆದೊಯ್ಯುತ್ತಾಳೆ. ಬರ್ಸಿಗೆ ಆಗಾಧ ದೈಹಿಕ ಮತ್ತು ಮಾನಸಿಕ ನೋವು ಇರುವುದನ್ನು ವೈದ್ಯರು ತಿಳಿಸುತ್ತಾರೆ.ಇದಾದ ಮೇಲೆ ಮರಿಯಾ ಜೋಸೆಫ್ ನಿಂದ ವಿಚ್ಛೇದನ ಪಡೆಯುವ ಪ್ರಕ್ರಿಯೆಗೆ ಮುಂದಾಗುತ್ತಾಳೆ, ಅಲ್ಲದೇ ತಾನು ಪನೋರಮಾ ನಗರದಲ್ಲಿ ಬಾಡಿಗೆಗೆ ಪಡೆದಿರುವ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಲು ನಿರ್ಧರಿಸುತ್ತಾಳೆ.

ಸಾವು ನೆರಳಿನಂತೆ ಹಿಂಬಾಲಿಸುತ್ತಿತ್ತು!
1988 ಜುಲೈ 25ರಂದು ಬರ್ಸಿ ಗಾಢ ನಿದ್ದೆಗೆ ಜಾರಿದ್ದಳು. ಈ ವೇಳೆಯಲ್ಲಿಯೇ ತಂದೆ ಜೋಸೆಫ್ ತಲೆಗೆ ಗುಂಡು ಹೊಡೆದು ಸಾಯಿಸಿದ್ದ, ಬಳಿಕ ಪತ್ನಿ ಮರಿಯಾಳನ್ನು ಹತ್ಯೆಗೈದುಬಿಟ್ಟಿದ್ದ! ಸುಮಾರು ಎರಡು ದಿನಗಳ ಕಾಲ ಜೋಸೆಫ್ ಮನೆಯ ಸುತ್ತ ಓಡಾಡಿಕೊಂಡಿದ್ದ. ಕೊನೆಗೆ ಮನೆಯೊಳಗೆ ಹೋಗಿ ಮಗಳು ಮತ್ತು ಪತ್ನಿಯ ಶವದ ಮೇಲೆ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿ ಸುಟ್ಟುಬಿಟ್ಟಿದ್ದ! ಇದಾದ ಮೇಲೆ ಜೋಸೆಫ್ ನೇರ ಗ್ಯಾರೇಜ್ ಗೆ ತೆರಳಿ ತನ್ನ ಹಣೆಗೆ 0.32 ಕ್ಯಾಲಿಬರ್ ಪಿಸ್ತೂಲ್ ನಿಂದ ಹಣೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next