ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ 3ನೇ ಎಸಿಎಂಎಂ ನ್ಯಾಯಾಲಯ ಬುಧವಾರ ನ್ಯಾಯಾಂಗ ಬಂಧನವನ್ನು ಮತ್ತೆ ಹದಿನಾಲ್ಕು ದಿನ ವಿಸ್ತರಿಸಿದೆ.
ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮದ್ದೂರಿನ ಕೆ.ಟಿ.ನವೀನ್ ಕುಮಾರ್, ವಿಜಯಪುರದ ಪರಶುರಾಮ್ ವಾಗೊ¾àರೆ, ಮನೋಹರ್ ದುಂಡಪ್ಪ ಯಡವೆ, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಶಿಕಾರಿಪುರದ ಪ್ರವೀಣ್ ಅವರ ನ್ಯಾಯಾಂಗ ಬಂಧನ ಅವಧಿ ಮುಗಿದ ಕಾರಣ ಬುಧವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.
ಈ ವೇಳೆ “ಎಲ್ಲ ಆರೋಪಿಗಳನ್ನೂ ಒಟ್ಟಿಗೆ ಮತ್ತೆ ವಶಕ್ಕೆ ತೆಗೆದುಕೊಳ್ಳುತ್ತೀರಾ’ಎಂದು ಎಸ್‌ಐಟಿ ಅಧಿಕಾರಿಗಳನ್ನು ನ್ಯಾಯಾಧೀಶರು ಪ್ರಶ್ನಿಸಿ, ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಈ ಮಧ್ಯೆ, ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಜಾಮೀನು ಅರ್ಜಿ ವಿಚಾರಣೆ ಪ್ರಕ್ರಿಯೆಯೂ ಬುಧವಾರ ನಡೆಯಿತು. ನ್ಯಾಯಾಧೀಶರು, ಗುರುವಾರ ಸರ್ಕಾರಿ ಅಭಿಯೋಜಕರಿಗೆ ವಾದ ಮಂಡಿಸಲು ಸೂಚಿಸಿದರು.
ಮಂಪರು ಪರೀಕ್ಷೆಗೆ ಒಪ್ಪಿಗೆ: ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆಮಂಜ ಮಂಪರು ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಗುರುವಾರ ಆರೋಪಿ ಪರ ವಕೀಲ ವೇದಮೂರ್ತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಮೊದಲೇ ಆರೋಪಿ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿದ್ದ. ಆದರೆ, ಗುಜರಾತ್‌ಗೆ ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು ಆತನಿಗೆ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೆ, ವಕೀಲರ ಭೇಟಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಆತ ನಿರಾಕರಿಸಿದ್ದರಿಂದ ವಾಪಸ್ ಕರೆತರಲಾಗಿತ್ತು.
ಇದೀಗ , ತನಗೆ ಜಾಮೀನು ಪಡೆಯಲು ಅದೇ ತೊಡಕಾಗಿದೆ ಎಂಬ ಕಾರಣಕ್ಕೆ ಮಂಪರು ಪರೀಕ್ಷೆಗೆ ಒಪ್ಪಿದ್ದಾನೆ ಎಂದು ಆರೋಪಿ ಪರ ವಕೀಲ ವೇದಮೂರ್ತಿ “ಉದಯವಾಣಿ’ಗೆ ತಿಳಿಸಿದರು.