ಬೆಂಗಳೂರು: ಗುತ್ತಿಗೆ ನೌಕರರೊಬ್ಬರಿಗೆ ಸಿಗಬೇಕಾದ ನ್ಯಾಯಬದ್ಧ ಬಾಕಿಯನ್ನು ಪಾವತಿಸಬೇಕು ಹಾಗೂ ಅವರಿಗೆ ಪುನಃ ಕೆಲಸ ನೀಡಬೇಕು ಎಂಬ ಆದೇಶ ಪಾಲಿಸದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹೈಕೋರ್ಟ್ ಗುರುವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು.
ಈ ಕುರಿತಂತೆ ತುಮಕೂರು ಜಿಲ್ಲೆಯ ಗುಬ್ಬಿಯ ನಿವಾಸಿ ಚಿಕ್ಕಹನುಂತರಾಯ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾ. ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರಣ್ಯ ಇಲಾಖೆಯ ಕಾರ್ಯದರ್ಶಿ, ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರಣ್ಯ ಇಲಾಖೆಯಲ್ಲಿ ಸುಮಾರು 18 ವರ್ಷ ಗುತ್ತಿಗೆ ಆಧಾರದ ಮೇಲೆ ವಾಚ್‌ಮನ್ ಆಗಿ ಕೆಲಸ ಮಾಡಿದಾತನಿಗೆ ನ್ಯಾಯಬದ್ಧವಾಗಿ ಬಾಕಿ ಪಾವತಿಸಬೇಕು ಮತ್ತು ಅವರನ್ನು ಮತ್ತೆ ಕೆಲಸ ನೀಡಬೇಕು ಎಂಬ ಹೈಕೋರ್ಟ್‌ನ ಏಕಸದಸ್ಯಪೀಠ ಈ ಹಿಂದೆ ಆದೇಶ ನೀಡಿತ್ತು. ಅದನ್ನು ಪಾಲಿಸದ ಕಾರಣಕ್ಕೆ ಇದೀಗ ವಿಭಾಗೀಯ ನ್ಯಾಯಪೀಠ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 1990ರಿಂದ 2008ರವರೆಗೆ ಚಿಕ್ಕಹನುಮಂತರಾಯ ಅವರು ಗುತ್ತಿಗೆ ಆಧಾರದ ಮೇಲೆ ವಾಚ್‌ಮನ್ ಆಗಿ ಗುಬ್ಬಿ ಸಾಮಾಜಿಕ ಅರಣ್ಯದಲ್ಲಿ , ಚಿಕ್ಕಮಗಳೂರು ಹಾಗೂ ತಿಪಟೂರಿನಲ್ಲಿ ಕೆಲಸ ಮಾಡಿದ್ದಾರೆ. 2006ರಲ್ಲಿ ಇಲಾಖೆಯಲ್ಲಿ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ವಾಚ್‌ಮನ್‌ಗಳ ಸೇವೆ ಕಾಯಂ ಮಾಡಲಾಗಿತ್ತು. ಆದರೆ ಅರ್ಜಿದಾರರ ಸೇವೆ ಕಾಯಂಗೊಳಿಸಲಿಲ್ಲ ಎಂದರು.
ಆ ಕ್ರಮ ಪ್ರಶ್ನಿಸಿ ಕಾರ್ಮಿಕ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯ ಅರ್ಜಿದಾರರ ಪರ ತೀರ್ಪು ನೀಡಿತ್ತು. ಆನಂತರ ಹೈಕೋರ್ಟ್ ಕೂಡ 2017ರ ಜ.25ರಂದು ಅರ್ಜಿದಾರರಿಗೆ ಕೂಡಲೇ ಶೇ.50ರಷ್ಟು ಹಿಂಬಾಕಿ ನೀಡಬೇಕು ಮತ್ತು ಸೇವೆಗೆ ತೆಗೆದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಆ ಆದೇಶವನ್ನೂ ಸಹ ಇಲಾಖೆ ಪಾಲನೆ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.