Advertisement

ವಲಸೆ ಕಾರ್ಮಿಕರಿಗೆ ಆಹಾರ ಬಡಿಸಿದ ನ್ಯಾಯಾಧೀಶರು!

09:44 PM Apr 13, 2020 | Sriram |

ಮೂಡುಬಿದಿರೆ: ಲಾಕ್‌ಡೌನ್‌ನಿಂದಾಗಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿರುವ ಕೊಪ್ಪಳ ಜಿಲ್ಲೆಯ 62 ಮಂದಿ ಕೂಲಿ ಕಾರ್ಮಿಕರಿಗೆ ಸಮಾಜ ಮಂದಿರದ ವತಿಯಿಂದ ವಿವಿಧ ಸಂಘಟನೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಅನ್ನ ದಾಸೋಹದಲ್ಲಿ ಸೋಮವಾರ ಮೂಡುಬಿದಿರೆ ವಕೀಲರ ಸಂಘದವರು ಭೋಜನದೊಂದಿಗೆ ವಸ್ತ್ರದಾನವನ್ನೂ ಮಾಡಿದರು. ಸ್ವತಃ ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಕುಮಾರ್‌ ಅವರೇ ಬಡಿಸುವ ಮೂಲಕ ಭೋಜನ ವ್ಯವಸ್ಥೆಗೆ ಚಾಲನೆ ನೀಡಿದರು.

Advertisement

ದಾನಿಗೆ ದಾನ ಮಾಡಿದ ಪುಣ್ಯ ಖಂಡಿತಾ ಲಭಿಸುತ್ತದೆ. ಒಂದಲ್ಲ ಒಂದು ರೂಪದಲ್ಲಿ ಅದು ದಾನಿಗೇ ಬರುವಂತಾಗುತ್ತದೆ ಎಂಬುದು ನಂಬಿಕೆ. ಕೊರೊನಾ ಸಂದರ್ಭದಲ್ಲಿ ನಾವು ಸರಕಾರದ ಆದೇಶಗಳನ್ನು ಪಾಲಿಸಬೇಕು ಎಂದು ಯಶವಂತ ಕುಮಾರ್‌ ಹೇಳಿದರು.

ತಹಶೀಲ್ದಾರ್‌ ಅನಿತಾಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಎಂ. ಎಸ್‌. ತಂತ್ರಿ, ಮಾಜಿ ಅಧ್ಯಕ್ಷ, ಸಮಾಜ ಮಂದಿರದ ಜತೆ ಕಾರ್ಯದರ್ಶಿ ಕೆ. ಆರ್‌. ಪಂಡಿತ್‌, ಜಯಪ್ರಕಾಶ್‌ ಭಂಡಾರಿ, ಮನೋಜ್‌ ಶೆಣೈ, ಪದ್ಮಪ್ರಸಾದ್‌ ಜೈನ್‌ ಸಹಿತ ವಕೀಲರು, ನ್ಯಾಯಾಲಯದ ಸಿಬಂದಿ, ಕಂದಾಯ ಇಲಾಖೆಯ ಪ್ರಕಾಶ್‌, ಸಮಾಜ ಮಂದಿರದ ಅರುಣ್‌ ಉಪಸ್ಥಿತರಿದ್ದರು.

ಕಳೆದ 18 ದಿನಗಳಿಂದ ಬೆಳಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ. ನಮಗೆ ಮನೆಯ ವಾತಾವರಣವೇ ಇಲ್ಲಿದೆ ಎಂಬ ಅಭಿಪ್ರಾಯವನ್ನು ಕಾರ್ಮಿಕರು ವ್ಯಕ್ತಪಡಿಸುತ್ತಿ ದ್ದಾರೆ. ಈ ಕಾರ್ಮಿಕರು ರಾತ್ರಿ ಇಲ್ಲೇ ನಿದ್ರಿಸುತ್ತಾರೆ. ಇಲ್ಲಿ ಗದಗದ 9, ರಾಯಚೂರಿನ 11, ಕೊಪ್ಪಳ ಜಿಲ್ಲೆಯ 39, ದಾವಣಗೆರೆಯ ಇಬ್ಬರು ಸಹಿತ 62 ಮಂದಿ ಇಲ್ಲಿದ್ದಾರೆ.

ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಅವರೂ ನಿತ್ಯ ಬಂದು ಕಾರ್ಮಿಕರ ಊಟೋಪಹಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇವರನ್ನು ಹಾಗೂ ರಾಜ್ಯದ ವಿವಿಧೆಡೆ ಸಿಲುಕಿರುವ ಕಾರ್ಮಿಕರನ್ನು ಊರಿಗೆ ಕಳುಹಿಸಲೂ ಪ್ರಯತ್ನಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next