ಬೆಂಗಳೂರು: ಕಳೆದ 14 ವರ್ಷಗಳಿಂದ ಹೈಕೋರ್ಟ್ ನ್ಯಾಯಾಮೂರ್ತಿಗಳಾಗಿ ಸೇವೆ ಸಲ್ಲಿಸಿದ ಬಿ.ಎಸ್.ಪಾಟೀಲ್ ಅವರು ಗುರುವಾರ ನಿವೃತ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸೇರಿ ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ವಕೀಲ ಸಮೂಹ ಆತ್ಮೀಯವಾಗಿ ಬೀಳ್ಕೊಟ್ಟರು.
ಕೋರ್ಟ್ ಹಾಲ್ ಸಂಖ್ಯೆ-1ರಲ್ಲಿ ಹೈಕೋರ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಇತರೆ ನ್ಯಾಯಮೂರ್ತಿಗಳು ಪಾಲ್ಗೊಂಡು ನ್ಯಾ.ಬಿ.ಎಸ್.ಪಾಟೀಲರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದರು.
ನಂತರ ಬೆಂಗಳೂರು ವಕೀಲರ ಸಂಘದ ವಕೀಲರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಕೀಲರು ಸನ್ಮಾನ ಮಾಡಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾ. ಬಿ.ಎಸ್.ಪಾಟೀಲ್, ಹೈಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಾಂಗದ ಘನತೆ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನ್ಯಾಯಮೂರ್ತಿಯಾಗಿ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಬೆಂಗಳೂರು ವಕೀಲರ ಸಂಘವು ದೇಶದಲ್ಲೇ ಒಳ್ಳೆಯ ಘನತೆ ಹೊಂದಿದೆ ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮಾತನಾಡಿ, ಬಿ.ಎಸ್. ಪಾಟೀಲ ಅವರು 14 ವರ್ಷಗಳ ಕಾಲ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಉತ್ತಮ ತೀರ್ಪುಗಳನ್ನು ನೀಡುವ ಮೂಲಕ ನ್ಯಾಯಾಂಗಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ನಿವೃತ್ತಯ ನಂತರವೂ ಅವರ ಸೇವೆ ನ್ಯಾಯಾಂಗಕ್ಕೆ ಸಿಗಲಿ. ಹಾಗೆಯೇ, ಅವರ ನಿವೃತ್ತಿ ನಂತರದ ಜೀವನ ಸುಖವಾಗಿರಲಿ ಎಂದು ಆಶಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಗಂಗಾಧರಯ್ಯ ಹಾಗೂ ರಾಜ್ಯ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.