Advertisement

6ರಿಂದ ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ

12:50 PM Jan 04, 2017 | |

ಹುಬ್ಬಳ್ಳಿ: ಕಲಾ ಧರೋಹರದ ವತಿಯಿಂದ 9ನೇ ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ ಜ.6ರಿಂದ 8ರವರೆಗೆ ನ್ಯೂ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಕಲಾ ಧರೋಹರದ ಸಹ ಉಪಾಧ್ಯಕ್ಷ ವಿವೇಕ ಪವಾರ ಮಾತನಾಡಿ, ಜ.6ರಂದು ಸಂಜೆ 5:15ಕ್ಕೆ ಅಂತಾರಾಷ್ಟ್ರೀಯ ಕೊಳಲು ಕಲಾವಿದ ಪಂ| ರಾಕೇಶ ಚೌರಾಸಿಯಾ ಅವರಿಂದ ಕೊಳಲು ವಾದನವಿದೆ.

Advertisement

ನಂತರ ಮುಂಬೈನ ಗಾಯಕಿ ವಿದುಷಿ ದೇವಕಿ ಪಂಡಿತ ಅವರಿಂದ ಶಾಸ್ತ್ರೀಯ ಗಾಯನ ನಡೆಯುವುದು ಎಂದರು. ಜ.7ರಂದು ಸಂಜೆ 5:15ಕ್ಕೆ ಖ್ಯಾತ ತಬಲಾ ವಾದಕ ಪುಣೆಯ ಪಂ| ರಾಮದಾಸ ಪಸಪುಳೆ ಅವರಿಂದ ತಬಲಾ ಸೋಲೊ ನಡೆಯಲಿದ್ದು, ನಂತರ ಕೋಲ್ಕತ್ತದ ಅಭಿಸೇಕ್‌ ಲಹರಿ ಅವರಿಂದ ಸರೋದ ವಾದನ ನಡೆಯುವುದು. 

ಜ.8ರಂದು ಬೆಳಗ್ಗೆ 9ಕ್ಕೆ ಪ್ರಸಿದ್ಧ ಗಾಯಕ, ಭೀಮಸೇನ ಜೋಶಿ ಅವರ ಶಿಷ್ಯ ಪುಣೆಯ ಪಂ| ಆನಂದ ಭಾಟೆ ಅವರಿಂದ ಶಾಸ್ತ್ರೀಯ ಗಾಯನ ನಡೆಯಲಿದೆ. ಸಂಜೆ 5:15ಕ್ಕೆ ಕೀ ಬೋರ್ಡ್‌ ಮಾತ್ರಿಕ ಎಂದೇ ಖ್ಯಾತಿ ಪಡೆದಿರುವ ಮುಂಬೈನ ಅಭಿಜೀತ್‌ ಪೋಹಣಕ ಕೀಬೋರ್ಡ್‌ ಮೇಲೆ ಶಾಸ್ತ್ರೀಯ ಸಂಗೀತ ನುಡಿಸುವರು.

ಇದೇ ಸಂದರ್ಭದಲ್ಲಿ ಅವರಿಗೆ ಪ್ರಸಕ್ತ ಗಂಗೂಬಾಯಿ ಹಾನಗಲ್ಲ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರ 1 ಲಕ್ಷ ರೂ. ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ. ನಂತರ ಪುರಸ್ಕೃತ ಪಂಡಿತ ಅಜಯ ಪೋಹಣಕರ ಅವರಿಂದ ಶಾಸ್ತ್ರೀಯ ಗಾಯನ ಜರುಗಲಿದೆ ಎಂದರು. 

ಸಂಗೀತ ಮಹೋತ್ಸವಕ್ಕೆ ಸಹ ಕಲಾವಿದರಾಗಿ ಪಂ| ರಾಮದಾಸ ಪಸಪುಳೆ, ಪಂ| ರವೀಂದ್ರ ಯಾವಗಲ್‌, ಪಂ| ವಿಶ್ವನಾಥ ನಾಕೋಡ, ಶ್ರೀಧರ ಮಾಂಡ್ರೆ (ತಬಲಾ), ಪಂ| ವ್ಯಾಸಮೂರ್ತಿ ಕಟ್ಟಿ, ಅಭಿಷೇಕ ಶಿಂಕರ, ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ) ಸಾಥ್‌ ನೀಡುವರು. 

Advertisement

ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಸಂಗೀತ ಮಹೋತ್ಸವದ ಪ್ರಾಯೋಜಕತ್ವ ವಹಿಸಲಿದೆ ಎಂದು ತಿಳಿಸಿದರು. ಸಂಗೀತ ಮಹೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ದೇಶಪಾಂಡೆ ನಗರದ ಡಾ| ಗಂಗೂಬಾಯಿ ಹಾನಗಲ್ಲ ಅವರ ನಿವಾಸದಲ್ಲಿ ಪ್ರವೇಶ ಪಾಸ್‌ಗಳನ್ನು ನೀಡಲಾಗುತ್ತಿದೆ ಎಂದರು. 

ಕಲಾ ಧರೋಹರ ಕಳೆದ 9 ವರ್ಷಗಳಿಂದ ಸಂಗೀತ ಮಹೋತ್ಸವ ಆಯೋಜಿಸುತ್ತಿದೆ. ಮನೆ-ಮನೆಗಳಲ್ಲಿ ಶಾಸ್ತ್ರೀಯ ಸಂಗೀತದ ಬೈಠಕ್‌ಗಳನ್ನು ಆಯೋಜಿಸುವ ಮೂಲಕ ಸಂಪ್ರದಾಯಕ್ಕೆ ಮರುಜೀವ ತುಂಬಲಾಗುತ್ತಿದೆ. 

ಶಾಲಾ-ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದಲ್ಲದೇ ಶಾಸ್ತ್ರೀಯ ಸಂಗೀತ ತರಬೇತಿ ನೀಡಲಾಗುತ್ತಿದೆ. ಯುವ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ವಿವರಿಸಿದರು. ದಿನೇಶ ಹಾನಗಲ್ಲ, ಸುಪ್ರಿಯಾ ಆಚಾರ್ಯ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next