Advertisement

ಟೋಕಿಯೋ ಒಲಿಂಪಿಕ್ಸ್‌ ಪದಕಕ್ಕಾಗಿ ಬಳ್ಳಾರಿಯಲ್ಲಿ ಕ್ರೀಡಾ ಗಣಿಗಾರಿಕೆ

10:46 AM Jun 17, 2017 | Karthik A |

ಬೆಂಗಳೂರು: ಫ‌ುಟ್‌ಬಾಲ್‌ಗೆ ಪ್ರೋತ್ಸಾಹ ನೀಡುತ್ತಿರುವ ಜಿಂದಾಲ್‌ ಸ್ಟೀಲ್‌ ವರ್ಕ್‌ ಸಂಸ್ಥೆ (ಜೆಎಸ್‌ಡಬ್ಲ್ಯೂ) ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಮಹತ್ವದ ಯೋಜನೆಯೊಂದನ್ನು ರೂಪಿಸಲು ಹೊರಟಿದೆ. ಗಣಿಗಾರಿಕೆಯ ಕೇಂದ್ರ ನಗರಿ ಬಳ್ಳಾರಿಯ ತೋರಣಗಲ್ಲು ಗ್ರಾಮದಲ್ಲಿ ವಿಶ್ವದರ್ಜೆಯ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ. ಸೆಪ್ಟೆಂಬರ್‌ – ಅಕ್ಟೋಬರ್‌ ವೇಳೆಗೆ ಈ ಅಕಾಡೆಮಿ ಕಾರ್ಯಾಚರಣೆ ಶುರುವಾಗುವ ಸಾಧ್ಯತೆಯಿದೆ. ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಕುಸ್ತಿ ತಾರೆ ಸಾಕ್ಷಿ ಮಲಿಕ್‌, ಕಾಮನ್‌ವೆಲ್ತ್‌ ಕುಸ್ತಿಯಲ್ಲಿ ಚಿನ್ನ ಗೆದ್ದಿರುವ ಗೀತಾ ಫೊಗಾಟ್‌, ಬಬಿತಾ ಫೊಗಾಟ್‌ ಸೇರಿದಂತೆ ದೇಶದ ಖ್ಯಾತ 40 ಕ್ರೀಡಾ ತಾರೆಯರು ಈ ಅಕಾಡೆಮಿಗೆ ಪ್ರತಿಭೆಗಳನ್ನು ಶೋಧಿಸಿ ತರಲಿದ್ದಾರೆ.

Advertisement

ಟೋಕಿಯೋ ಒಲಿಂಪಿಕ್ಸ್‌ ಗುರಿ: ಭಾರತ ಈಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಕ್ರೀಡಾಪಟುಗಳ ಹುಡುಕಾಟದಲ್ಲಿದೆ. ಅಂತಹ ಪ್ರತಿಭೆಗಳನ್ನು ಗುರ್ತಿಸಿ ತರಬೇತಿ ನೀಡುವುದು ಜಿಂದಾಲ್‌ ಉದ್ದೇಶ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಪದಕ ಗೆಲ್ಲುವಂತಾಗಬೇಕು ಎನ್ನುವುದು ಈ ಕಂಪನಿಯ ಆಶಯ. ಇದು ಜಿಂದಾಲ್‌ನ ಮಹತ್ವದ ಯೋಜನೆಯಾಗಿದ್ದು, ಕೋಟ್ಯಂತರ ರೂ. ವೆಚ್ಚವಾಗಲಿದೆ. ಇದನ್ನು ಜಿಂದಾಲ್‌ನ ಉನ್ನತ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.

ಅಕಾಡೆಮಿ ಎಲ್ಲಿ?: ವಿಶ್ವ ದರ್ಜೆಯ ಕ್ರೀಡಾ ಅಕಾಡೆಮಿ ಬಳ್ಳಾರಿ ನಗರದಿಂದ 41 ಕಿ.ಮೀ. ದೂರವಿರುವ ತೋರಣಗಲ್ಲು ಗ್ರಾಮದಲ್ಲಿ ತಲೆ ಎತ್ತಲಿದೆ. ಇಲ್ಲಿ ಜಿಂದಾಲ್‌ ಒಟ್ಟು 8 ಸಾವಿರ ಎಕರೆಗೂ ಹೆಚ್ಚು ಭೂಮಿ ಹೊಂದಿದೆ. ಇದರ ಒಂದು ಭಾಗದಲ್ಲಿ ಅಕಾಡೆಮಿ ಆರಂಭಿಸಲು ನೀಲನಕ್ಷೆ ಸಿದ್ಧವಾಗುತ್ತಿದೆ.

ಯಾವ್ಯಾವ ಕ್ರೀಡೆಗೆ ಆಧ್ಯತೆ: ಬಾಕ್ಸಿಂಗ್‌, ಕುಸ್ತಿ, ಜೂಡೋ, ಈಜು, ಅಥ್ಲೆಟಿಕ್ಸ್‌ನ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ವಿಭಾಗದಲ್ಲಿ ಅಥ್ಲೀಟ್‌ಗಳ ಆಯ್ಕೆ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಬರುವಂತಹ ಕ್ರೀಡೆಗಳ ಮೇಲೆ ಹೆಚ್ಚಿನ ಗಮನವನ್ನು ವಹಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?: ಸಾಕ್ಷಿ ಮಲಿಕ್‌, ಗೀತಾ ಫೊಗಾಟ್‌ ಸೇರಿದಂತೆ 40ಕ್ಕೂ ಹೆಚ್ಚು ಅನುಭವಿ ಮಾಜಿ, ಹಾಲಿ ಕ್ರೀಡಾಪಟುಗಳು ವಿವಿಧ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹಳ್ಳಿ ಹಳ್ಳಿಗಳಿಗೆ ತೆರಳಲಿದ್ದಾರೆ. ಯಾವ ಕ್ರೀಡೆ ಯಾವ ರಾಜ್ಯದಲ್ಲಿ ಹೆಚ್ಚು ಅಸ್ತಿತ್ವ ಹೊಂದಿದೆ ಎನ್ನುವುದನ್ನು ಮೊದಲಾಗಿ ತಜ್ಞರ ತಂಡ ಪಟ್ಟಿ ಮಾಡಿಕೊಳ್ಳುತ್ತದೆ. ಪ್ರತಿಭಾವಂತರ ಆಯ್ಕೆಯನ್ನು ಪಾರದರ್ಶಕವಾಗಿ ನಡೆಸಲಿದೆ.

Advertisement

ಅಕಾಡೆಮಿಯಲ್ಲಿರುವ ಸೌಲಭ್ಯಗಳೇನು?
ಆಯ್ದ ಕ್ರೀಡಾಪಟುಗಳಿಗೆ ಉಳಿದುಕೊಳ್ಳಲು ಇಲ್ಲಿ ಅತ್ಯಾಧುನಿಕ ಕೊಠಡಿಗಳ ವ್ಯವಸ್ಥೆ ಇರಲಿದೆ. ಒಲಿಂಪಿಕ್ಸ್‌ನಂತಹ ಕೂಟಗಳಲ್ಲಿ ಭಾಗವಹಿಸಿ ಅನುಭವವಿರುವ ನುರಿತ ತರಬೇತುದಾರರು ಲಭ್ಯರಿರಲಿದ್ದಾರೆ. ಜತೆಗೆ ವಿದೇಶಿ ಕೋಚ್‌ಗಳನ್ನು ಕರೆಸಿ ತರಬೇತಿ ನೀಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಯುತ್ತಿದೆ. ದೈನಂದಿನ ವ್ಯಾಯಾಮಕ್ಕೆ ಮಲ್ಟಿ ಜಿಮ್‌, ಯಾವ ಅಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ಮಾರ್ಗದರ್ಶನ ಮಾಡಲು ನ್ಯೂಟ್ರಿಷಿಯನ್‌ ಎಕ್ಸ್‌ ಪರ್ಟ್‌ ಇರುತ್ತಾರೆ. ಅಚ್ಚುಕಟ್ಟಾದ ಊಟ, ತಿಂಡಿ ವ್ಯವಸ್ಥೆ, ಕ್ರೀಡಾಪಟು ಗಳಿಗೆ ಉಚಿತ ಶಾಲಾ -ಕಾಲೇಜು ವ್ಯವಸ್ಥೆ ಇರಲಿದೆ.

ಫ‌ುಟ್ಬಾಲ್‌ ಅಕಾಡೆಮಿ ತರಬೇತಿ ಆರಂಭ
ತೋರಣಗಲ್ಲಿನಲ್ಲಿ ಜಿಂದಾಲ್‌ ಈಗಾಗಲೇ ಫ‌ುಟ್ಬಾಲ್‌ ಅಕಾಡೆಮಿಯನ್ನು ತೆರೆದಿದೆ. ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ 40ಕ್ಕೂ ಹೆಚ್ಚು ಕ್ರೀಡಾಪಟುಗಳು ಇಲ್ಲಿನ ಸೌಲಭ್ಯ ಪಡೆಯುತ್ತಿದ್ದಾರೆ. 15 ವರ್ಷ, 18 ವರ್ಷ ಹಾಗೂ 20 ವರ್ಷ ವಯೋಮಿತಿಯೊಳಗಿನ ಫ‌ುಟ್ಬಾಲ್‌ ಆಟಗಾರರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ. ಜಿಂದಾಲ್‌ ವಿದ್ಯಾಮಂದಿರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ, ಸಿಬಿಎಸ್‌ಸಿ ಪಠ್ಯ ಬೋಧನೆ ಸೌಲಭ್ಯವಿದೆ. ಜತೆಗೆ ಕಾಲೇಜು ವ್ಯವಸ್ಥೆ ಕೂಡ ಮಾಡಲಾಗಿದೆ. ಬೆಂಗಳೂರಿನ ಪ್ರಶಾಂತ್‌ ಕಲ್ಲಿಂಗ, ವಿಘ್ನೇಶ್‌, ಶೆಲ್ಟನ್‌ ಪಾಪ್‌ ಹಾಗೂ ವಿಜಯ್‌ ತರಬೇತಿ ಪಡೆಯುತ್ತಿದ್ದಾರೆ.

– ಹೇಮಂತ್‌ ಸಂಪಾಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next