ಮೈಸೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಜೆಎಸ್‌ಎಸ್ ಮಹಾ ವಿದ್ಯಾಪೀಠದಿಂದ ಸುತ್ತೂರು ಶ್ರೀಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಜ್ಞಾನ ಸಂಪನ್ಮೂಲ ಕೇಂದ್ರವನ್ನು ಸುತ್ತೂರು ಶ್ರೀಕ್ಷೇತ್ರದಲ್ಲಿ ಗುರುವಾರ ನಡೆದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ನಾಗರಿಕರಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವುದು ಈ ಕೇಂದ್ರದ ಉದ್ದೇಶವಾಗಿದೆ.
ಈ ಕೇಂದ್ರವು ಮಲ್ಟಿಮೀಡಿಯಾ, ವೈಜ್ಞಾನಿಕ ಚಿತ್ರಪ್ರದರ್ಶನ, ವಿಜ್ಞಾನ ಮತ್ತು ತಂತ್ರಜ್ಞಾನ ಗ್ಯಾಲರಿ, ಹೊರಾಂಗಣ ವಿಜ್ಞಾನ ಉದ್ಯಾನ, ವೈಜ್ಞಾನಿಕ ಪ್ರಯೋಗಾಲಯ, ವಿಜ್ಞಾನ ವಿನ್ಯಾಸ ಮತ್ತು ಆವಿಷ್ಕಾರಗಳ ಕಾರ್ಯಾಗಾರ, ತಾರಾ ಮಂಡಲ, ಗ್ರಾಮೀಣ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಾನ, ವೈಜ್ಞಾನಿಕ ಗ್ರಂಥಾಲಯ ಹಾಗೂ ಗಣಕಯಂತ್ರ ಕೇಂದ್ರ ಮೊದಲಾದವುಗಳನ್ನು ಹೊಂದಿರುತ್ತದೆ.
ಈ ಕೇಂದ್ರದಲ್ಲಿ ಕಲಿಕಾ ಸಾಮಗ್ರಿಗಳನ್ನು ತಯಾರಿಸುವ ನೈಪುಣ್ಯತೆ ಹೊಂದಿದ ಪರಿಣಿತ ತಂಡದವರಿರುತ್ತಾರೆ. ರಾಜ್ಯಸರ್ಕಾರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುತ್ತಿರುವ ವಿಜ್ಞಾನಕೇಂದ್ರಗಳಿಗೆ ಅಗತ್ಯವಿರುವ ಪ್ರಾತ್ಯಕ್ಷಿಕ ಮಾದರಿಗಳನ್ನು ಸಿದ್ಧಪಡಿಸಿ ಇಲ್ಲಿಂದ ಒದಗಿಸಲಾಗುತ್ತದೆ.
ಜೊತೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾದರಿ ತಯಾರಿಸುವ ತರಬೇತಿಯನ್ನೂ ನೀಡಲಾಗುತ್ತದೆ. ಜೆಎಸ್‌ಎಸ್ ಜ್ಞಾನ ಸಂಪನ್ಮೂಲ ಕೇಂದ್ರ ನಿರ್ಮಾಣಕ್ಕೆ 2016ರ ಜನವರಿ 02ರಂದು ಪ್ರಧಾನಿ ನರೇಂದ್ರಮೋದಿ ಅವರು ಮೈಸೂರಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.