Advertisement
ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಈ ಸಂಬಂಧ ಪ್ರಕಟಣೆಯೊಂದನ್ನು ನೀಡಿದ್ದು, ಚೀನದ ರಾಯಭಾರ ಕಚೇರಿಯಿಂದ ಪ್ರತಿಷ್ಠಾನಕ್ಕೆ ನೀಡಲಾದ 1.45 ಕೋಟಿ ರೂ.ಗಳ ದೇಣಿಗೆಯನ್ನು ದಿವ್ಯಾಂಗರ ಕಲ್ಯಾಣಕ್ಕಾಗಿ ಮತ್ತು ಭಾರತ-ಚೀನ ಸಂಬಂಧಗಳ ಸಂಶೋಧನಾ ಅಧ್ಯಯನಕ್ಕಾಗಿ ಬಳಸಲಾಗಿದೆ. ಇನ್ನು, ಪ್ರತಿಷ್ಠಾನಕ್ಕೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೀಡಲಾಗಿರುವ 20 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅನುದಾನವನ್ನು ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಗಳಿಗಾಗಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಬಿಜೆಪಿ ಅಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ನಡ್ಡಾ ಅವರ ಆರೋಪದಲ್ಲಿ ಅರ್ಧ ಸತ್ಯವಿದೆ. ಯಾವುದೇ ಪ್ರತಿಷ್ಠಾನ, ಚಿಂತಕರ ವೇದಿಕೆಗಳು ದೇಣಿಗೆ ಹಣದಿಂದಲೇ ನಡೆಯುತ್ತವೆ ಎಂಬುದು ಸಾಮಾನ್ಯ ಸಂಗತಿ. ರಾಜೀವ್‌ಗಾಂಧಿ ಪ್ರತಿಷ್ಠಾನದ ದೇಣಿಗೆ ವಿಚಾರದಲ್ಲಿ ಎಲ್ಲವೂ ಕಾನೂನುಬದ್ಧವಾಗಿಯೇ ಇವೆ ಎಂದು ತಿರುಗೇಟು ನೀಡಿದ್ದಾರೆ. ಒಂದು ವೇಳೆ, ಚೀನದಿಂದ ಪಡೆದ ದೇಣಿಗೆಯನ್ನು ಪ್ರತಿಷ್ಠಾನ ಹಿಂತಿರುಗಿಸಿದರೆ, ಚೀನ ತನ್ನ ಸೇನೆಯನ್ನು ಲಡಾಖ್ ಗಡಿಭಾಗದಿಂದ ಹಿಂತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿಯವರು ದೇಶಕ್ಕೆ ಭರವಸೆ ನೀಡಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.