ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಬಿ.ತಿಮ್ಮೇಗೌಡ ಅವರು ಸೋಮವಾರ ನಿವೃತ್ತಿಯಾಗಿದ್ದು, ತೆರವಾದ ಸ್ಥಾನಕ್ಕೆ ಹಂಗಾಮಿ ಕುಲಪತಿಯಾಗಿ ವಿವಿಯ ಹಿರಿಯ ಡೀನ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮಾಧ್ಯಮ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಜಗದೀಶ್ ಪ್ರಕಾಶ್ ಅವರನ್ನು ನೇಮಿಸಿ ರಾಜ್ಯಪಾಲರು ಆದೇಶಿಸಿದ್ದಾರೆ.
ಆದೇಶದ ಬೆನ್ನಲ್ಲೇ ಜಗದೀಶ್ ಪ್ರಕಾಶ್ ಸೋಮವಾರ ಜ್ಞಾನಭಾರತಿ ಕ್ಯಾಂಪಸ್‌ನ ವಿವಿಯ ಆಡಳಿತ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು, ನಿರ್ಗಮಿತ ಕುಲಪತಿ ಡಾ.ಬಿ.ತಿಮ್ಮೇಗೌಡ ಅವರು ಅಧಿಕಾರ ಹಸ್ತಾಂತರಿಸಿದರು.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ನಿಯಮಾವಳಿ ಪ್ರಕಾರ ಯಾವುದೇ ವಿವಿಯ ಕುಲಪತಿ ಹುದ್ದೆ ತೆರವಾದಾಗ ಪೂರ್ಣಾವಧಿ ಕುಲಪತಿ ನೇಮಕವಾಗುವವರೆಗೆ ವಿವಿಯ ಹಿರಿಯ ಡೀನ್ ಹಂಗಾಮಿ ಕುಲಪತಿಯಾಗಿ ನೇಮಕವಾಗುತ್ತಾರೆ. ಅದರಂತೇ ಜಗದೀಶ್ ಪ್ರಕಾಶ್ ನೇಮಕವಾಗಿದ್ದಾರೆ. ಜೆಪಿ ವಿರುದ್ಧ ವ್ಯಾಪಕ ಅಪಸ್ವರ : ಪ್ರೊ.ಜಗದೀಶ್ ಪ್ರಕಾಶ್ ಅವರ ನೇಮಕಕ್ಕೆ ವಿವಿಯ ಪ್ರಾಧ್ಯಾಪಕರ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬರುತ್ತಿವೆ.
“ಅವರು ಹಿರಿಯ ಡೀನ್ ಆಗಿರಬಹುದು. ಪಿಎಚ್‌ಡಿ ಪೂರ್ಣಗೊಳಿಸಿದ್ದು ಇತ್ತೀಚಿಗೆ. ಅಲ್ಲದೆ, ಅವರ ಮಾರ್ಗದರ್ಶನಲ್ಲಿನ ಪಿಎಚ್‌ಡಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಇನ್ನು ಪೇಪರ್ ಪಬ್ಲಿಕೇಷನ್, ರಿಸರ್ಚ್ ಪಬ್ಲಿಕೇಷನ್‌ಗಳನ್ನು ಪ್ರಕಟಿಸಿರುವುದೂ ಅಷ್ಟಕ್ಕಷ್ಟೆ. ಅಲ್ಲದೆ, ಮುಂದಿನ ತಿಂಗಳಾಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ. ಶೈಕ್ಷಣಿಕವಾಗಿ ಹೆಚ್ಚು ಸಾಧನೆ ಮಾಡಿರುವ ಸಾಕಷ್ಟು ಹಿರಿಯ ಡೀನ್‌ಗಳು ವಿವಿಯಲ್ಲಿದ್ದರು. ಅವರಿಗೆ ಹುದ್ದೆ ನೀಡಬಹುದಿತ್ತು,” ಎಂಬ ಮಾತು ವಿವಿಯ ಆವರಣದಲ್ಲಿ ಕೇಳಿಬರುತ್ತಿದೆ.
ಹಂಗಾಮಿ ಕುಲಪತಿಗಳ ನೇಮಕ ನಿಯಮಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಕೇವಲ ಶೈಕ್ಷಣಿಕ ವರ್ಷದ ದಾಖಲೆಗಳ ಹಿರಿತನ ಪರಿಗಣಿಸಿ ನೇಮಕಾತಿ ನಡೆಯಬಾರದು. ಶೈಕ್ಷಣಿಕ ಸಾಧನೆಯ ಅರ್ಹತೆಯನ್ನು ಪರಿಗಣಿಸಬೇಕಾಗುತ್ತದೆ ಎಂದು ವಿವಿಯ ಹಿರಿಯ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.