ಜೋಯಿಡಾ: ರಾಮನಗರ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇನ್ನೂ ಮುಗಿಯದೆ ಉಳಿದಿದ್ದು, ಕೆಲಸ ಪೂರ್ಣಗೋಳಿಸಿ ಕೊಟ್ಟರೆ ಮಾತ್ರ ಗ್ರಾಪಂ ಹಸ್ತಾಂತರಿಸಿಕ್ಕೊಳ್ಳುವುದಾಗಿ ಗ್ರಾಪಂ ಪ್ರತಿನಿಧಿಗಳು ಇಲಾಖೆಗೆ ಎಚ್ಚರಿಸಿದ ಘಟನೆ ತಾಪಂ ಕೆಡಿಪಿ ಸಭೆಯಲ್ಲಿ ನಡೆಯಿತು.
ರಾಮನಗರ ಕುಡಿಯುವ ನೀರಿನ ಯೋಜನೆಯಲ್ಲಿ ಅಧಿಕಾರಿ ಸುಳದಾಳ ಸರಿಯಾಗಿ ಕೆಲಸ ಮಾಡದೆ ನಿರ್ಲಕ್ಷಿಸಿದ್ದಾರೆ. ಯೋಜನೆಯಂತೆ ಇಲ್ಲಿ ಕಾಮಗಾರಿ ಕಳಪೆಯಾಗಿದ್ದು ಹಣದ ದುರುಪಯೋಗ ಆಗಿದ್ದ ಬಗ್ಗೆ ಜನಪ್ರತಿನಿಧಿಗಳೇ ದೂರಿದ್ದರು. ಅದಾಗ್ಯೂ ಈ ಯೋಜನೆಯನ್ನು ಗ್ರಾಪಂಗೆ ಹಸ್ತಾಂತರಿಸಿಕೊಳ್ಳುವಂತೆ ಮೇಲಾಧಿಕಾರಿಗಳಿಂದ ಒತ್ತಡ ಬಂದಿದ್ದರು ಗ್ರಾಪಂ ಒಪ್ಪಿರಲಿಲ್ಲ. ಈಗ ಮತ್ತೆ ಇದೇ ವಿಷಯದಲ್ಲಿ ಚರ್ಚೆ ನಡೆದಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂಬಳೆ ಹಾಗೂ ತಾ.ಪಂ ಸದಸ್ಯ ಸರತ್ ಗುರಜರ ಸಭೆಯಲ್ಲಿ ಅಧಿಕಾರಿಗಳಿಗೆ ಕೆಲಸ ಪೂರ್ಣಗೊಳಿಸಿಕೊಡದೆ ಹಸ್ತಾಂತರಿಸುವ ಪ್ರಶ್ನೆಯಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದರು.
ಜಿಪಂ ಸದಸ್ಯ ಸಂಜಯ ಹಣಬರ ಕೆಲಸ ಪೂರ್ಣಗೊಳಿಸಿ ಕೂಡಲೆ ಸಮಸ್ಯೆ ಬಗೆಹರಿಸಿ ಕೊಡಿ ಎಂದು ಅಧಿಕಾರಿಗೆ ತಿಳಿಸಿದರು. ತಾಲೂಕಿನಾದ್ಯಂತ ಸ್ವತ್ಛತಾ ಅಭಿಯಾನ ಕಾಟಾಚಾರಕ್ಕೆ ನಡೆಯುತ್ತಿದೆ ಎಂದು ಪತ್ರಿಕೆ ವರದಿ ಮಾಡಿರುವುದನ್ನು ಸಭೆಯ ಗಮನಕ್ಕೆ ತಂದ ಇಒ, ಸ್ವತ್ಛತೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು. ತಾಲೂಕಿನಲ್ಲಿ ವೈದ್ಯರ ಕೊರತೆ ಇದ್ದು ಕೂಡಲೇ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕೆಂದು ತಾಲೂಕು ವೈದ್ಯಾಧಿ ಕಾರಿ ಸುಜಾತಾ ಉಕ್ಕಲಿ ಸಭೆಗೆ ವಿನಂತಿಸಿದರು.
ರಾಮನಗರದ ಬಡ ಜನ ಈ ಹೆದ್ದಾರಿ ಪಕ್ಕದಲೇ ಅಂಗಡಿ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ ಹಾಗಾಗಿ ಅವರ ಬದುಕಿಗೆ ಆಸರೆ ದೊರಕುವಂತೆ ರಾಮನಗರ ಹೆದ್ದಾರಿ ಅಭಿವೃದ್ಧಿ ಮುಂದುವರಿಸಬೇಕು ಎಂದು ಸದಸ್ಯ ಶರತ ಗುರ್ಜರ ಅಧಿಕಾರಿಗಳಿಗೆ ಒತ್ತಾಯಿಸಿದರು.
ಬೆವರಿಳಿಸಿದ ಸಭಾಂಗಣ: ತಾಪಂ ಪ್ರಗತಿ ಪರಿಶೀಲನಾ ಸಭೆ ನಡೆಯುವ ಸಭಾಂಗಣ ಗೋಡಾನ್‌ನಂತಿದ್ದು, ವಿದ್ಯುತ್ ಇಲ್ಲದಾಗ ಬಿಸಿಲಿನ ತಾಪಕ್ಕೆ ಬೆಂದು ಹೋಗುವಷ್ಟು ವೇದನೆ ಉಂಟುಮಾಡುತ್ತಿತ್ತು. ಪ್ರತಿನಿತ್ಯ ಎ.ಸಿ. ಚೆಂಬರನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳಿಗೆ ಬೆವರಿನಿಂದ ಬಸವಳಿಯುವಂತೆ ಮಾಡುತ್ತಿತ್ತು. ಮೈಕ್ ಇಲ್ಲದೆ ವರದಿ ವಾಚಿಸುವಲ್ಲಿ ಕೆಲ ಅಧಿಕಾರಿಗಳೂ ಇದೆ ಸೂಕ್ತ ಸಮಯ ಅಂತ ಸಣ್ಣದಾಗಿ ಗೊಣಗುಟ್ಟು ಹೋಗಲು ಅನುಕೂಲ ಕೂಡಾ ಆಗಿದ್ದು ವಿಶೇಷ. ಅಧ್ಯಕ್ಷೆ ನರ್ಮದಾ ಪಾಕ್ಲೃಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತಹಶೀಲ್ದಾರ್ ಸಂಜಯ ಕಾಂಬಳೆ, ಜಿಪಂ ಸದಸ್ಯ ರಮೇಶ ನಾಯ್ಕ, ತಾಪಂ ಉಪಾಧ್ಯಕ್ಷ ವಿಜಯ ಪಂಡಿತ ಹಾಗೂ ಸದಸ್ಯರು, ಗ್ರಾಪಂ ಸದಸ್ಯರು ಹಾಜರಿದ್ದರು.