ಪಣಜಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಪತ್ರಕರ್ತರು ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ದಿನಪತ್ರಿಕೆಗಳ ಶೀರ್ಷಿಕೆಯನ್ನು ನಗರದಿಂದ ನೀಡಲಾಗಿದ್ದರೂ, ಹೆಚ್ಚಿನ ಸುದ್ಧಿಗಳು ಗ್ರಾಮೀಣ ಪ್ರದೇಶದಿಂದ ಬರುತ್ತಿವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಗೋವಾದ ಸಾಖಳಿಯ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ಅಖಿಲ ಗೋವಾ ಪತ್ರಕರ್ತರ ಸಂಘದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪೂರ್ಣಾವಧಿಯಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಸರ್ಕಾರದ ವಿವಿಧ ಯೋಜನೆಗಳ ಲಾಭ ಸಿಗಲಿದೆ. ಸರ್ಕಾರಿ ಅಥವಾ ಖಾಸಗಿ ಉದ್ಯೋಗಗಗಳ ಮೂಲಕ ಅರೆಕಾಲಿಕ ಪತ್ರಿಕೋದ್ಯಮದಲ್ಲಿ ತೊಡಗಿರುವ ನಿವೃತ್ತರು ಮತ್ತು ಇತರ ಉದ್ಯೋಗಿಗಳು ಮತ್ತು ಹವ್ಯಾಸಿ ಪತ್ರಕರ್ತರಿಗೆ ಸರ್ಕಾರದ ಈ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.
ಚುನಾವಣೆಯ ಅವಧಿಯಲ್ಲಿ ಅನೇಕ ಕಾಲೋಚಿತ ಪತ್ರಕರ್ತರು ಸೃಷ್ಠಿಯಾಗುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ನೈಜ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಪತ್ರಕರ್ತರಿಗೆ ಅನ್ಯಾಯವಾಗುತ್ತದೆ. ಇದಕ್ಕಾಗಿ ಮೊದಲನೆಯದಾಗಿ ಕಾಲೋಚಿತ ಪತ್ರಕರ್ತರನ್ನು ನಿಷೇಧಿಸುವುದು ಅವಶ್ಯಕ. ನಮ್ಮ ಸುತ್ತಮುತ್ತ ನಡೆಯುವ ಒಳ್ಳೆಯ ಘಟನೆಯನ್ನು ಪತ್ರಿಕೆಯಲ್ಲಿ ವರದಿ ಮಾಡಬೇಕು. ಯುವ ಪೀಳಿಗೆ ಪತ್ರಿಕೆ ಓದುವ ಆಸಕ್ತಿ ಬೆಳೆಸುವ ರೀತಿಯಲ್ಲಿ ಬರವಣಿಗೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕಿ ಡಾ.ದಿವ್ಯಾ ರಾಣೆ, ಶಾಸಕ ಚಂದ್ರಕಾಂತ ಶೇಟಯೆ, ನಗರಾಧ್ಯಕ್ಷೆ ರಶ್ಮಿ ದೇಸಾಯಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕ ದೀಪಕ್ ಬಾಂದೇಕರ್, ಗೋವಾ ಪತ್ರಕರ್ತ ಸಂಘದ ಪ್ರತಿನಿಧಿ ಸಂದೇಶ ಪ್ರಭುದೇಸಾಯಿ, ಗ್ರಾಮೀಣ ಪತ್ರಕರ್ತರ ಸಂಘದ ಅಧ್ಯಕ್ಷ ಉದಯ ಸಾವಂತ್ ಉಪಸ್ಥಿತರಿದ್ದರು.