Advertisement

ಸ್ವೀಪ್‌ ಚಟುವಟಿಕೆಗೆ ಪತ್ರಕರ್ತರ ಕಿರುಚಿತ್ರ ಬಳಕೆ: ಡಿಸಿ

02:47 PM Mar 30, 2018 | Team Udayavani |

ರಾಯಚೂರು: ವೃತ್ತಿ ಬದುಕಿನ ಒತ್ತಡದ ಕಾರ್ಯಗಳ ಮಧ್ಯ ಸಾಮಾಜಿಕ ಜವಾಬ್ದಾರಿಗಳನ್ನು ಮೆರೆಯುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ಮತದಾನ ಜಾಗೃತಿ ಬಗ್ಗೆ ಸ್ವಯಂ ಪ್ರೇರಣೆಯಿಂದ ನಿರ್ಮಿಸಿದ ಕಿರುಚಿತ್ರವನ್ನು ಸ್ವೀಪ್‌ ಚಟುವಟಿಕೆಯಡಿ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು.

Advertisement

ಆಸಕ್ತ ಪತ್ರಕರ್ತರು ಸೇರಿ ನಿರ್ಮಿಸಿದ “ವೈಲೆಟ್‌ ಇಂಕ್‌’ ಎಂಬ ಕಿರುಚಿತ್ರವನ್ನು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಡ್ಡಾಯ ಮತದಾನದ ಬಗ್ಗೆ ಪತ್ರಕರ್ತರು ಜಾಗೃತಿ ಮೂಡಿಸಲು 10 ನಿಮಿಷಗಳ ಕಿರುಚಿತ್ರ ನಿರ್ಮಿಸಿರುವುದು ರಾಜ್ಯದಲ್ಲೇ ಇದೆ ಮೊದಲು. ಇಂಥ ಮಾಧ್ಯಮಗಳು ಮತದಾನ ಪ್ರಮಾಣ ಹೆಚ್ಚಿಸಲು ತುಂಬಾ ಸಹಕಾರಿ ಆಗಲಿವೆ. ಈ ಕಿರುಚಿತ್ರವನ್ನು ಚುನಾವಣಾ ಪ್ರಚಾರದ ದೃಷ್ಟಿಯಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರದರ್ಶಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ರಾಜ್ಯದಲ್ಲಿ ಯುವಕರು ಮುಖ್ಯವಾಗಿ ಸುಶಿಕ್ಷಿತರೇ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಅಂಥವರಿಗೆ ಇಂಥ ಕಿರುಚಿತ್ರ ಪ್ರೇರಣೆ ಆಗಬಹುದು. ಈ ನಿಟ್ಟಿನಲ್ಲಿ ಚಿತ್ರವನ್ನು ಸಾಧ್ಯವಾದಷ್ಟು ಪ್ರಚಾರ ಮಾಡಬೇಕು. ಇಂಟರ್‌ ನೆಟ್‌ಗೆ ಹರಿಬಿಡುವ ಮೂಲಕ ಎಲ್ಲರಿಗೂ ತಲುಪುವಂತೆ ಮಾಡಬೇಕು. ಅಲ್ಲದೇ, ಜಿಲ್ಲಾಡಳಿತದ ಅಂತರ್ಜಾಲ ಪುಟದಲ್ಲೂ ಇದನ್ನು ಪ್ರಚುರಪಡಿಸಲಾಗುವುದು ಎಂದರು.
 
ಜಿಪಂ ಸಿಇಒ ಅಭಿರಾಂ ಜಿ. ಶಂಕರ್‌ ಮಾತನಾಡಿ, ಚುನಾವಣೆ ವೇಳೆ ಇಂಥ ಕಿರುಚಿತ್ರ ನಿರ್ಮಿಸಿರುವುದು ಸಕಾಲಿಕ. ಮತದಾನ ಹೆಚ್ಚಳಕ್ಕೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ, ಯಾರ ನೆರವು ಪಡೆಯದೆ ಪತ್ರಕರ್ತರು ಇಂಥ ಜನಜಾಗೃತಿ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು. 

ಎಸ್ಪಿ ಡಿ.ಕಿಶೋರಬಾಬು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಿ.ವೆಂಕಟ್‌ಸಿಂಗ್‌, ಸದಸ್ಯ ಅರವಿಂದ ಕುಲಕರ್ಣಿ ಸೇರಿ ಪತ್ರಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಪತ್ರಕರ್ತ ವಿಜಯ್‌ ಜಾಗಟಗಲ್‌ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಹೂಗಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next