Advertisement

ಪತ್ರಕರ್ತರಿಗೆ ಶಿಕ್ಷೆ; ವಿಧಾನಸಭೆಯಲ್ಲಿ ಚರ್ಚಿಸಿಲ್ಲ: ಶೆಟ್ಟರ

03:03 PM Jun 28, 2017 | Team Udayavani |

ಹುಬ್ಬಳ್ಳಿ: ವಿಧಾನಸಭೆಯಲ್ಲಿ ಚರ್ಚೆಯಾಗದೆ, ವಿಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಹಕ್ಕು ಬಾಧ್ಯತಾ ಸಮಿತಿ ಶಿಕ್ಷೆ ವಿಧಿಸಿದ್ದು ಖಂಡನೀಯವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ತಿಳಿಸಿದರು. 

Advertisement

ಇಲ್ಲಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ ಪತ್ರಕರ್ತ ರವಿ ಬೆಳಗೆರೆ ಅವರನ್ನು ಮಂಗಳವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಮನೆ ರತ್ನಾಕರ ಅಧ್ಯಕ್ಷತೆಯಲ್ಲಿನ ಹಕ್ಕುಬಾಧ್ಯತಾ ಸಮಿತಿ ವರದಿಯಲ್ಲೂ ರವಿ ಬೆಳಗೆರೆ ಹೆಸರು ಇರಲಿಲ್ಲ. 

ಯಾರೋ ಒಬ್ಬ ಶಾಸಕರು ಅವರ ಹೆಸರು ಪ್ರಸ್ತಾಪಿಸಿದ ತಕ್ಷಣ ಅವರ ವಿರುದ್ಧ ಈ ರೀತಿ ಕ್ರಮ ಕೈಗೊಂಡಿದ್ದು ತಪ್ಪು. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಮಾಧ್ಯಮವನ್ನು ಹತ್ತಿಕ್ಕುವ ಕೆಲಸ ಸರಕಾರದಿಂದ ನಡೆಯುತ್ತಿದೆ ಎಂದರು. ರವಿ ಬೆಳಗೆರೆ ಅವರು ಪಿ.ಲಂಕೇಶ ಅವರ ರೀತಿ ವೈಚಾರಿಕ ಹಿನ್ನೆಲೆಯಲ್ಲಿ ಪತ್ರಿಕಾರಂಗ ಬೆಳೆಸಿದವರು.

ಒಳ್ಳೆಯ ಹೆಸರು ಮಾಡಿದವರು. ಅವರ ಮೇಲೆ ಕ್ರಮ ಕೈಗೊಂಡಿದ್ದು ಆಘಾತವಾಗಿದೆ. ವಿಧಾನಸಭೆ ಸಭಾಪತಿ ಅವರು ಕೂಡಲೇ ತಮ್ಮ ಆದೇಶ ಮರುಪರಿಶೀಲಿಸಿ ತಮ್ಮ ನಿರ್ಧಾರ ಹಿಂಪಡೆಯಬೇಕು. ಸಿಎಂ ಮಧ್ಯಸ್ಥಿಕೆ ವಹಿಸಿ ಪ್ರಕರಣ ವಾಪಸ್‌ ಪಡೆಯಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಾಲ್ಕು ಅಂಗಗಳು ಸುಗಮವಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದರು. 

ಸಾಲ ಮನ್ನಾಗೆ ಷರತ್ತು ಸಲ್ಲ: ರಾಜ್ಯ ಸರಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಕೇವಲ 50 ಸಾವಿರ ರೂ. ಮಾತ್ರ ಮಾಡಿದ್ದಲ್ಲದೇ ಕೆಲವು ಷರತ್ತುಗಳನ್ನು ವಿಧಿಸಿದ್ದು ಖಂಡನೀಯ. ಇದರಿಂದ ರೈತರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಅಸಲು ಪಾವತಿಸಿದವರಿಗೆ ಮಾತ್ರ ಸಾಲಮನ್ನಾ ಅನ್ವಯಿಸುತ್ತದೆ ಎಂಬುದು ಸರಿಯಲ್ಲ. ಷರತ್ತುಗಳನ್ನು ಹಿಂಪಡೆದು ಮೊದಲು ಸಾಲ ಮನ್ನಾ ಮಾಡಲಿ. 

Advertisement

ಪ್ರಾಮಾಣಿಕವಾಗಿ ಸಾಲ ಪಾವತಿಸಿದವರಿಗೆ ಸಾಲಮನ್ನಾ ನಗದು ವಾಪಸು ನೀಡಬೇಕು ಎಂದು ಅವರು ಒತ್ತಾಯಿಸಿದರು. ಮೈಸೂರಿನ ಕಲಾಮಂದಿರದ ಮನೆ ಆವರಣದಲ್ಲಿ ನಡೆದ ಸರಕಾರದ ಕಾರ್ಯಕ್ರಮವೊಂದರಲ್ಲಿ ಗೋಮಾಂಸ ಭಕ್ಷಿಸಿದ್ದು ಖಂಡನೀಯ. ಬುದ್ಧಿಜೀವಿಗಳೆಂಬುವವರು ತಮ್ಮ ಮನೆಯಲ್ಲಿ ಇಲ್ಲವೆ ಬೇರೆ ಕಡೆಗೆ ಹೋಗಿ ತಿನ್ನಲಿ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next