ಸುರಪುರ: ಕೆಂಭಾವಿ ಪಟ್ಟಣದ ಪತ್ರಕರ್ತ ಡಿ.ಸಿ. ಪಾಟೀಲ ಅವರಿಗೆ ಜೀವ ಬೆದರಿಕೆ ಪತ್ರ ಬರೆದ ಆರೋಪಿಯನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ ಪದಾಧಿಕಾರಿಗಳು ಮತ್ತು ಸದಸ್ಯರು ಆಗ್ರಹಿಸಿದರು.
ಇಲ್ಲಿಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಹಶೀಲ್ದಾರ್‌ಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ ಸಂಘದ ಸದಸ್ಯರು, ಪತ್ರಕರ್ತನಿಗೆ ಅನಾಮಿಕ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಪತ್ರ ಬರೆದು ಮನಗೆ ಕಳುಹಿಸಿರುವುದನ್ನು ಪತ್ರಕರ್ತರ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದರು.
ಸಾಮಾಜಿಕ ಜವಾಬ್ದಾರಿಯುಳ್ಳ ಪತ್ರಕರ್ತರ ಮೇಲೆ ದಬ್ಟಾಳಿಕೆ, ದೌರ್ಜನ್ಯ ಬೆದರಿಕೆ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿವೆ. ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ಯಾವುದೇ ಧಕ್ಕೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಪತ್ರಕರ್ತರಿಗೆ ರಕ್ಷಣೆ ನೀಡಬೇಕು.
ಪೊಲೀಸ್ ಇಲಾಖೆ ಆರೋಪಿಯನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ಸಲ್ಲಿಸಿದರು. ಹುಣಸಗಿ ತಹಶೀಲ್ದಾರ್ ಸುರೇಶ ಚವಲ್ಕರ್ ಇದ್ದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಗಿರೀಶ ಶಾಬಾದಿ, ಅಧ್ಯಕ್ಷ ಪವನ ಕುಲಕರ್ಣಿ, ಕಾರ್ಯದರ್ಶಿ ವಿಜಯಚಾರ್ಯ ಪುರೋಹಿತ, ಪತ್ರಕರ್ತ ಗವಿಸಿದ್ದೇಶ ಹೊಗರಿ, ಸಿದ್ದಯ್ಯ ಪಾಟೀಲ, ಮಲ್ಲು ಗುಳಗಿ, ಕೆ.ಕೆ. ಫರೀದಿ, ರಾಜು ಕುಂಬಾರ, ಮಲ್ಲು ಬಾದ್ಯಾಪುರ, ಮಲ್ಲಿಕಾರ್ಜುನ ತಳಳ್ಳಿ, ಶ್ರೀಕರ ಜೋಶಿ, ವೀರಣ್ಣ ಕಲಕೇರಿ, ಡಿ.ಸಿ. ಪಾಟೀಲ, ಬಸನಗೌಡ ಪಾಟೀಲ, ವಿರೇಶರಡ್ಡಿ ಯಾಳಗಿ, ರವಿರಾಜ ಕಂದಳ್ಳಿ ಇದ್ದರು.