Advertisement

ಪತ್ರಕರ್ತ ಹೇಮಂತ್‌ ಕುಮಾರ್‌ ಬಂಧನ

11:22 PM Apr 27, 2019 | Lakshmi GovindaRaj |

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಗೃಹಸಚಿವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿರುವ ಆರೋಪದಡಿ ಮತ್ತೋರ್ವ ಪತ್ರಕರ್ತ ಹೇಮಂತ್‌ ಕುಮಾರ್‌ರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು ಎನ್ನಲಾದ ನಕಲಿ ಪತ್ರ ಪ್ರಕಟಿಸಿದ ಆರೋಪದಡಿ ಸಿಐಡಿ ಪೊಲೀಸರು ಈ ಹಿಂದೆ ಪೋಸ್ಟ್‌ ಕಾರ್ಡ್‌ ವೆಬ್‌ಪೋರ್ಟಲ್‌ ಸಂಪಾದಕ ಮಹೇಶ್‌ ವಿಕ್ರಂ ಹೆಗ್ಡೆಯನ್ನು ಬಂಧಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ಆರೋಪಿ ನೀಡಿದ ಮಾಹಿತಿಯ ಆಧಾರದಲ್ಲಿ ಸಿಐಡಿ ಪೊಲೀಸರು ಶನಿವಾರ ಪತ್ರಕರ್ತ ಎಸ್‌.ಎ.ಹೇಮಂತ್‌ ಕುಮಾರ್‌ರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯವು ಏ.30ರವರೆಗೆ ಪೊಲೀಸ್‌ ವಶಕ್ಕೆ ನೀಡಿದೆ.

ದ್ವೇಷ ರಾಜಕಾರಣ ಬಿಜೆಪಿ ಆರೋಪ: ಈ ಮಧ್ಯೆ, ಪತ್ರಕರ್ತ ಎಸ್‌.ಎ.ಹೇಮಂತ ಕುಮಾರ್‌ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ. ಪೊಲೀಸ್‌ ಇಲಾಖೆ ಗೃಹಸಚಿವರ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಹೇಮಂತ್‌ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ವಕ್ತಾರರಾದ ಎಸ್‌. ಸುರೇಶ್‌ ಕುಮಾರ್‌, ಅಶ್ವತ್ಥ ನಾರಾಯಾಣಗೌಡ, ಸಹ ವಕ್ತಾರ ಎ.ಎಚ್‌.ಆನಂದ್‌ ಅವರನ್ನೊಳಗೊಂಡ ರಾಜ್ಯ ಬಿಜೆಪಿ ನಿಯೋಗ ಬೆಂಗಳೂರಿನಲ್ಲಿರುವ ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿತ್ತು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಬಿಜೆಪಿ ಬೆಂಬಲಿಸುವವರನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುವ ಕೆಲಸ ಗೃಹ ಸಚಿವರ ನಿರ್ದೇಶನದಂತೆ ನಡೆಯುತ್ತಿದೆ. ಮಹೇಶ್‌ ಹೆಗ್ಡೆ ನಂತರ ಶೃತಿ ಬೆಳ್ಳಕ್ಕಿ, ಇದೀಗ ಹೇಮಂತ್‌ ವಿರುದ್ಧ ಸೇಡಿನ ಕ್ರಮ ಮುಂದುವರಿದಿದೆ. ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದ ಬೇಳೂರು ಗೋಪಾಲಕೃಷ್ಣ ಅವರಿಗೆ ನೋಟಿಸ್‌ ಸಹ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖೆಯ ನೇತೃತ್ವ ವಹಿಸಿರುವ ಪೊಲೀಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌, ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆಯಲ್ಲೂ ಇದೇ ರೀತಿ ನಡೆದುಕೊಂಡಿದ್ದರು ಎಂದು ಆರೋಪಿಸಿದರು. ರಾಜಕೀಯದಲ್ಲಿ ಆಸಕ್ತಿ ಇದ್ದರೆ ಖಾಕಿ ತೊರೆದು, ಖಾದಿ ತೊಟ್ಟು ಬನ್ನಿ. ರಾಜಕೀಯ ಅಧಿಕಾರ ಬಳಸಿಕೊಂಡು ಇಲಾಖೆಗೆ ಕಳಂಕ ತರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next