Advertisement

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ

08:56 PM Sep 05, 2017 | Karthik A |

ಬೆಂಗಳೂರು: ಕನ್ನಡ ನಾಡು ಕಂಡ ಹಿರಿಯ ಪತ್ರಕರ್ತ ಹಾಗೂ ತಮ್ಮ ಅನುಯಾಯಿಗಳ ಪಾಲಿಗೆ ಮೇಷ್ಟ್ರು ಎಂದೇ ಹೆಸರುವಾಸಿಯಾಗಿದ್ದ ದಿ. ಲಂಕೇಶ್‌ ಅವರ ಪುತ್ರಿ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಅಪರಿಚಿತ ದುಷ್ಕರ್ಮಿಗಳು ಇಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

Advertisement

ಗೌರಿ ಲಂಕೇಶ್‌ ಅವರು ಮನೆಯ ಹೊರಗೆ ನಿಂತಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಗೌರಿ ಅವರ ಹಣೆ ಮತ್ತು ಎದೆ ಭಾಗವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರು. ದಾಳಿಗೊಳಗಾದ ತಕ್ಷಣವೇ ಗೌರಿ ಅವರು ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಗೌರಿ ಅವರು ಕನ್ನಡದ ಪ್ರಸಿದ್ಧ ವಾರಪತ್ರಿಕೆ ‘ಲಂಕೇಶ್‌ ಪತ್ರಿಕೆ’ಯ ಸಂಪಾದಕಿಯಾಗಿದ್ದರು. ತಮ್ಮ ವೈಚಾರಿಕ ಮನೋಭಾವಗಳಿಂದಾಗಿ ಅವರು ಹಲವು ಸಮಯಗಳಿಂದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಮಾತ್ರವಲ್ಲದೇ ನಕ್ಸಲ್‌ ಹೋರಾಟಗಾರರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗೌರಿ ಅವರು ಪ್ರಮುಖವಾದ ಪಾತ್ರವನ್ನು ವಹಿಸಿದ್ದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ನಂತರ ಗೌರಿ ಲಂಕೇಶ್‌ ಅವರ ಮುಂದಾಳತ್ವದಲ್ಲಿ ಹಲವಾರು ನಕ್ಸಲ್‌ ಹೋರಾಟಗಾರರು ಸಮಾಜದ ಮುಕ್ಯವಾಹಿನಿಗೆ ಸೇರ್ಪಡೆಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೆಲವು ವರ್ಷಗಳ ಹಿಂದೆ ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರು ಹತ್ಯೆಗೀಡಾದ ರೀತಿಯಲ್ಲಿಯೇ ಗೌರಿ ಲಂಕೇಶ್‌ ಅವರು ಹತ್ಯೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಆಘಾತಕಾರಿ ಘಟನೆ ಕನ್ನಡ ಸಾಹಿತ್ಯ ಹಾಗೂ ಪ್ರಗತಿಪರ ಚಿಂತಕ ವಲಯವದಲ್ಲಿ ಆಘಾತವುಂಟುಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next