ಮಡಿಕೇರಿ: ಪ್ರಗತಿಪರ ಚಿಂತಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ತೋರಿದ ಅಗೌರವ ವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾದ ಎಚ್.ಎಸ್. ಪ್ರೇಮ್‌ಕುಮಾರ್, ದುಷ್ಕೃತ್ಯವೆಸಗಿದ ಹಂತಕರನ್ನು ತತ್‌ಕ್ಷಣ ಬಂಧಿಸಿ ಕಠಿನ ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೌರಿ ಲಂಕೇಶ್ ಅವರ ಹತ್ಯೆಯನ್ನು ಕಠೊರ ಶಬ್ದಗಳಿಂದ ಖಂಡಿಸಬೇಕಾಗಿದೆ, ಪ್ರಗತಿಪರ ಚಿಂತಕರ ಹತ್ಯೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹರೀಶ್‌ಗೆ ಪರಿಹಾರ ನೀಡಿ: ದಕ್ಷಿಣ ಕೊಡಗಿನ ಬಾಳೆೆಲೆಯಲ್ಲಿ ಸಾಲ ಮರುಪಾವತಿಸಲಿಲ್ಲ ಎನ್ನುವ ಕಾರಣಗಳ ಹಿನ್ನೆಲೆಯಲ್ಲಿ ದಲಿತ ಯುವಕ ಹರೀಶ್ ಎಂಬಾತನನ್ನು ನಾಯಿಗಳಿಂದ ಕಚ್ಚಿಸಿರುವ ಘಟನೆಯ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಕಷ್ಟಕ್ಕೆ ಸಿಲುಕಿರುವ ದಲಿತ ಯುವಕ ಹರೀಶ್‌ಗೆ ಪರಿಹಾರವನ್ನು ನೀಡಲು ಜಿಲ್ಲಾಡಳಿತ ಮುಂದಾಗಬೇಕು. ತಪ್ಪಿದ್ದಲ್ಲಿ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಗಡಿಪಾರು ಮಾಡಿ: ಸಿದ್ದಾಪುರದಲ್ಲಿ ಕೋಮು ಭಾವನೆ ಕೆರಳಿಸುವ ಭಾಷಣ ಮಾಡುವ ಮೂಲಕ ಶಾಂತಿ ಕದಡಲು ಯತ್ನಿಸಿರುವ ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಕಂಠಿ ಕಾರ್ಯಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಗಡಿಪಾರು ಮಾಡಬೇಕೆಂದು ಪ್ರೇಮ್ ಕುಮಾರ್ ಆಗ್ರಹಿಸಿದರು.
ಭಯೋತ್ಪಾದಕ ಕೃತ್ಯ: ಬಿಎಸ್‌ಪಿ ಜಿಲ್ಲಾ ಸಂಯೋಜಕ ರಫೀಕ್ ಖಾನ್ ಮಾತನಾಡಿ, ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಸಾಮಾಜಿಕ ಕಳಕಳಿಯ ಹೋರಾಟಗಳನ್ನು ಹತ್ತಿಕ್ಕಲು ಮನುವಾದಿಗಳು ಅಟ್ಟಹಾಸ ಮೆರೆದಿದ್ದಾರೆ ಎಂದು ಆರೋಪಿಸಿದರು. ದುಷ್ಕೃತ್ಯವನ್ನು ಭಯೋತ್ಪಾದನಾ ಕೃತ್ಯವನ್ನಾಗಿ ರಾಜ್ಯ ಸರಕಾರ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೌರಿ ಲಂಕೇಶ್ ಅವರಿಂದ ರೂಪುಗೊಳ್ಳುತ್ತಿದ್ದ ಸಾಮಾಜಿಕ ಕಳಕಳಿಯ ಹೋರಾಟಗಳನ್ನು ಇಲ್ಲದಂತೆ ಮಾಡುವ ಪ್ರಯತ್ನವಾಗಿ ಹತ್ಯೆ ನಡೆದಿದೆ. ಆದರೆ, ಇಂತಹ ಹತ್ಯೆಯಿಂದ ಹೋರಾಟ ನಿಲ್ಲುವುದಿಲ್ಲ. ಬದಲಾಗಿ ಹೋರಾಟದ ಶಕ್ತಿ ದುಪ್ಪಟ್ಟಾಗಲಿದೆ ಎಂದು ರಫೀಕ್ ಖಾನ್ ತಿಳಿಸಿದರು.ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದಾರ್ಶಿ ಮೊಹಮ್ಮದ್ ಕುಂಞಿ ಮಾತನಾಡಿ, ನೊಂದವರ ಧ್ವನಿಯಾಗಿ, ಕೋಮುವಾದದ ವಿರುದ್ಧ ಗೌರಿ ಲಂಕೇಶ್ ಹೋರಾಡಿದ್ದಾರೆ. ಇವರ ಹತ್ಯೆಯ ಸತ್ಯವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಜನರೇ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಮೊಣ್ಣಪ್ಪ ಮಾತನಾಡಿ, ಗೌರಿ ಲಂಕೇಶ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿ. ಪ್ರಗತಿಪರ ಚಿಂತಕರ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿ ಮಾಡುವ ಯತ್ನವಾಗಿದೆಯೆಂದರು. ಬಿಎಸ್‌ಪಿ ಪ್ರಮುಖರಾದ ದಿಲೀಪ್ ಹಾಗೂ ನಾಗಾರ್ಜುನ್ ಉಪಸ್ಥಿತರಿದ್ದರು.