ಬೆಳ್ತಂಗಡಿ: ರಾಜಕಾರಣಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರೆ, ಅಧಿಕಾರಿಗಳು ಹಣ ಮಾಡುವುದೇ ತಮ್ಮ ಉದ್ದೇಶವೆಂದು ತಿಳಿದುಕೊಂಡಂತಿದೆ. ಹೀಗಾಗಿ ಇವರಿಬ್ಬರಿಂದಲೂ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂಬುದು ನಿಶ್ಚಿತ. ಹೀಗಾಗಿ ಇಂದು ಸಮಾಜ ಪತ್ರಕರ್ತರ ಕಡೆಗೆ ನೋಡುತ್ತಿದೆ. ಉತ್ತಮ ಸಮಾಜ ಕಟ್ಟಲು ನಾವು ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸದಾಶಿವ ಶೆಣೈ ಹೇಳಿದರು. ಅವರು ಶನಿವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಂಗಣದಲ್ಲಿ ಬೆಳ್ತಂಗಡಿ ತಾ| ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಹ ಇಂದಿನ ಸನ್ನಿವೇಶದಲ್ಲಿ ಪತ್ರಕರ್ತರು ಚಳವಳಿಗಾರ, ಹೋರಾಟಗಾರರಾಗಿ ಗುರುತಿಸಿಕೊಳ್ಳುವ ಅಗತ್ಯವಿದೆ. ನ್ಯಾಯಾಂಗ, ಶಾಸಕಾಂಗದಲ್ಲೂ ಒಳ್ಳೆಯವರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಸಮಾಜದ ರೋಗವನ್ನು ನಿವಾರಿಸುವ ಕಾರ್ಯ ನಾವು ಮಾಡಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು, ಮೂವತ್ತೈದು ವರ್ಷಗಳ ಹಿಂದಿನ ವರದಿಗಾರಿಕೆಗೂ ಇಂದಿನದಕ್ಕೂ ಬಹಳಷ್ಟು ವ್ಯತ್ಯಾಸಗಳನ್ನು ಕಂಡಿದೆ. ಇಂದು ಸ್ವಂತಿಕೆ ಇಲ್ಲದ ವರದಿಗಾರಿಕೆಯೇ ಹೆಚ್ಚಾಗಿದೆ. ಅಚ್ಚುಕಟ್ಟುತನ, ಸ್ವಾತಂತ್ರ್ಯ, ಸಮಚಿತ್ತತೆಯಿಂದ, ಬದ್ಧತೆಯಿರುವ ಬರವಣಿಗೆಯೇ ಇಲ್ಲವಾಗಿದೆ. ಪತ್ರಕರ್ತನಿಗೆ ಸಹಜ ಕುತೂಹಲ ಇರಬೇಕೇ ಹೊರತು ಕೆಟ್ಟ ಕುತೂಹಲ ಇರಬಾರದು. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಅವಕಾಶ ಇದೆ. ಸ್ವಂತ ವ್ಯಾಖ್ಯಾನಕ್ಕೆ ಅವಕಾಶವಿದ್ದರೂ ಯಾಕೆ ಬರೆಯಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಉದಯವಾಣಿಯ ಬೆಳ್ತಂಗಡಿಯ ವಿಶ್ರಾಂತ ಹಿರಿಯ ಪತ್ರಕರ್ತ ಅಶೋಕ್ ಪಿ.ಎಸ್. ಅವರನ್ನು ಸಮ್ಮಾನಿಸಲಾಯಿತು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಅಭ್ಯಾಗತರಾಗಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮನೋಹರ ಬಳಂಜ ವಹಿಸಿದ್ದರು. ಈ ಸಂದರ್ಭ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದ ಗುರುವಾಯನಕರೆ ಪ್ರೌಢ ಶಾಲೆ ಹಾಗೂ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಬ್ಬಿಣದ ಕಪಾಟುಗಳನ್ನು ಕೊಡುಗೆಯಾಗಿ ನೀಡಲಾಯಿತು. ಹಾಗೆಯೇ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಚ್ಚಿನದ ನವೀನ್, ಮಚ್ಚಿನ ಪ್ರೌಢಶಾಲೆಯ ಸಫ್ರಿನಾ ಬಾನು, ಕಾಶೀಪಟ್ಣ ಪ್ರೌಢಶಾಲೆಯ ಪ್ರಜೇಶ್ ಹಾಗೂ ಗೇರುಕಟ್ಟೆ ಪ್ರೌಢಶಾಲೆಯ ಮೋಹಿನಿ ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಶಿಬಿ ಧರ್ಮಸ್ಥಳ ಸ್ವಾಗತಿಸಿದರು. ಕೋಶಾಧಿಕಾರಿ ದೀಪಕ್ ಆಠವಳೆ ಉಪನ್ಯಾಸಕರ ಪರಿಚಯ ಮಾಡಿದರು. ಜತೆ ಕಾರ್ಯದರ್ಶಿ ಪದ್ಮನಾಭ ಕುಲಾಲ್ ವಂದಿಸಿದರು. ಉಪಾಧ್ಯಕ್ಷ ಭುವನೇಶ್ ಗೇರುಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
ಪತ್ರಕರ್ತ ವಸ್ತುವಲ್ಲ
ಪ್ರಾಮಾಣಿಕತೆ, ಬದ್ಧತೆ, ಸಮಚಿತ್ತತೆ ಇಲ್ಲದಿರುವವನು ಉತ್ತಮ ಪತ್ರಕರ್ತನಾಗಲು ಸಾಧ್ಯವಿಲ್ಲ. ಜಾಹೀರಾತಿನ ಪ್ರಭಾವದಿಂದಾಗಿ ಪತ್ರಿಕೆಯ ಸಂಪಾದಕನ ಗೌರವ, ಘನತೆಯೇ ಹೋಗಿದೆ. ಪತ್ರಿಕೆಗೆ ಹಾಕಿದ ಬಂಡವಾಳ ಹಿಂತಿರುಗುವ ಬಗ್ಗೆ ಚಿಂತೆ ಇರುವುದೇ ದುರಂತ. ಪತ್ರಕರ್ತ ಎಂಬುದು ವಸ್ತುವಲ್ಲ. ಆತ ಅದರಂತೆ ವರ್ತಿಸುವುದೂ ಸರಿಯಲ್ಲ.
– ಚಿದಂಬರ ಬೈಕಂಪಾಡಿ