ರಾಯಚೂರು: ಪ್ರಜಾಪ್ರಭುತ್ವ, ಪತ್ರಿಕೋದ್ಯಮ ಒಬ್ಬರಿಂದ ಹುಟ್ಟಿ ಕೊಂಡಿದ್ದಲ್ಲ. ಈ ಎರಡು ರಂಗಗಳು ಆರಂಭದಿಂದ ಈವರೆಗೆ ಬದಲಾಗುತ್ತಲೇ ಇದ್ದು, ಪತ್ರಕರ್ತರು ಅದಕ್ಕೆ ಹೊಂದಿಕೊಳ್ಳುವ ಗುಣ ಬೆಳೆಸಿ ಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಹೇಳಿದರು. ನಗರದ ಸ್ಪಿಲ್ ಪತ್ರಿಕೋದ್ಯಮ ಕಾಲೇಜಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಗುರುವಾರ ನಡೆದ ಮಾಧ್ಯಮ ಹಬ್ಬದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿ ಅದಕ್ಕೆ ತಕ್ಕಂತೆ ಶ್ರಮಿಸಬೇಕು. ತಂತ್ರಜ್ಞಾನ ಬೆಳೆದಂತೆ
ಸುದ್ದಿಯ ನಿಖರತೆ ಕಡಿಮೆ ಆಗುತ್ತಿದೆ ಎಂದು ವಿಷಾದಿಸಿದ ಅವರು, ಸಮಯಪ್ರಜ್ಞೆ, ಸಂಯಮದಿಂದ ಕೆಲಸ ಮಾಡುವ ರೂಢಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮದಲ್ಲಿ ಸಾಕಷ್ಟು ಹುದ್ದೆಗಳು ಸೃಷ್ಟಿಯಾಗುತ್ತಿವೆ. ಅದನ್ನು ಕೇವಲ ವೃತ್ತಿ ಎಂದು ಭಾವಿಸದೇ, ಮಹತ್ತರ ಹೊಣೆ, ಗೌರವದ ಹುದ್ದೆ ಎಂಬ ಪ್ರಜ್ಞೆ ಇರಲಿ. 1959ರಲ್ಲಿ ದೂರದರ್ಶನ ಪರಿಚಯವಾದಾಗ ದೇಶದಲ್ಲಿ ಕೇವಲ 26 ಟಿವಿಗಳಿದ್ದವು.
ಆದರೆ, ಇಂದು 18 ಕೋಟಿ ಟಿವಿಗಳಿವೆ. ಭಾರತ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದೆ. ಇಂಥ ಕಾಲಘಟ್ಟದಲ್ಲಿ ಪತ್ರಿಕೋದ್ಯಮವನ್ನು ಸವಾಲೆಂದು ತಿಳಿದು ಕೆಲಸ ಮಾಡಿ ಎಂದರು.
ನಗರಸಭೆ ಪ್ರಭಾರ ಅಧ್ಯಕ್ಷ ಜಯಣ್ಣ ಮಾತನಾಡಿ, ಪತ್ರಕರ್ತರು ಬದ್ಧತೆ, ಆತ್ಮಸಾಕ್ಷಿಯಿಂದ ಕಾರ್ಯ ನಿರ್ವಹಿಸಬೇಕು. ಪ್ರಜ್ಞಾಪೂರ್ವಕವಾಗಿ ಬರೆಯುವ ಮೂಲಕ ಬರವಣಿಗೆ ಪಕ್ವ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ನಾಗತಿಹಳ್ಳಿ ನಾಗರಾಜ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಬಾಲಂಕು ಆಸ್ಪತ್ರೆಯ ಡಾ| ಶ್ರೀಧರರೆಡ್ಡಿ ಮಾತನಾಡಿದರು. ಹಿರಿಯ ಪರ್ತಕರ್ತ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಬಿ.ವೆಂಕಟಸಿಂಗ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯೆ ಪ್ರಭಾವತಿ, ಉಪನ್ಯಾಸಕ
ಚನ್ನಬಸವಣ್ಣ, ಆಂಜನೇಯ, ಸಾಹಿತಿ ಅಯ್ಯಪ್ಪ ತುಕ್ಕಾಯಿ, ಅಯ್ಯಪ್ಪಯ್ಯ ಹುಡಾ, ಬಿ.ಜಿ. ಹುಲಿ ಸೇರಿ ಇತರರು
ಉಪಸ್ಥಿತರಿದ್ದರು.