ಕಲಬುರಗಿ: ಇಂದಿನ ದಿನಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡುವಾಗ ತುಂಬಾ ಎಚ್ಚರಿಕೆ ಮತ್ತು ಪ್ರಜ್ಞೆಬೇಕು. ಪತ್ರಿಕಾ ವೃತ್ತಿ ಇತರೆ ವೃತ್ತಿಗಳಂತೆ ಮಾಡುವಂತಿಲ್ಲ. ದೀಕ್ಷೆ ತೊಟ್ಟಂತೆ ಕೆಲಸ ಮಾಡಬೇಕು. ತುಂಬಾ ಕ್ರೇಜ್ ಇರುವ ಕ್ಷೇತ್ರ ಎಂದು ಹಿರಿಯ ಪತ್ರಕರ್ತ ಎಸ್.ಆರ್.ಮಣ್ಣೂರ ಹೇಳಿದರು.
ನಗರದ ವೀರೇಂದ್ರ ಪಾಟೀಲ ಬಡಾವಣೆಯ ತಮ್ಮ ಮನೆಯಲ್ಲಿ ಮಂಗಳವಾರ ಜಿಲ್ಲಾ ಪತ್ರಕರ್ತರ ಸಂಘದಿಂದ ಸನ್ಮಾನಿತರಾಗಿ ಅವರು ಮಾತನಾಡಿದರು. ಪತ್ರಕರ್ತನಿಗೆ ನಿವೃತ್ತಿ ಎಂಬುದಿಲ್ಲ. ಪತ್ರಕರ್ತನಿಗೆ ಸಂಬಳ ಮುಖ್ಯವಲ್ಲ. ಪತ್ರಿಕಾ ವೃತ್ತಿ ಆತ್ಮ ಸಂತೃಪ್ತಿಯ ಕೆಲಸ ಎಂದ ಅವರು, ನಾನು ನಿವೃತ್ತಿ ನಂತರ ದೆಹಲಿಯ ಪತ್ರಿಕೆಯೊಂದಕ್ಕೆ ಆನ್‌ಲೈನ್‌ನಲ್ಲಿ ವರದಿಗಾರಿಕೆ ಮಾಡುತ್ತಾ ಕಾಲ ಕಳೆಯುತ್ತಿದ್ದೇನೆ ಎಂದರು.
ಈ ವೇಳೆ ತಮ್ಮ ವೃತ್ತಿ ದಿನಗಳನ್ನು ನೆನಪಿಸಿಕೊಂಡ ಅವರು, ಅಕ್ಕರೆಯಿಂದ ನೆನಪುಗಳನ್ನು ಹೆಕ್ಕಿ ಯುವ ಪತ್ರಕರ್ತರ ಮುಂದೆ ಇಟ್ಟರು. ಟೈಪಿಸ್ಟ್ ಆಗಿದ್ದ ನಾನು 1973ರಲ್ಲಿ “ಸಂಯುಕ್ತ ಕರ್ನಾಟಕ’ ಪತ್ರಿಕೆ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟೆ. ಆಗ ತಿಂಗಳಿಗೆ ಕೇವಲ 80ರೂ. ಸಂಬಳವಿತ್ತು. ನಾನು ಪತ್ರಿಕಾ ಕ್ಷೇತ್ರಕ್ಕೆ ಕಾಲಿಡಲು ಆಗ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಸಂಪಾದಕರಾಗಿದ್ದ “ರಂಗನಾಥ ದಿವಾಕರ’ ಮತ್ತು “ಕಾಗಲಕರ್’ ಅವರೇ ಮೂಲ ಕಾರಣ ಎಂದು ತಮಗೆ ಅನ್ನ ನೀಡಿದ ಹಿರಿಯರನ್ನು ಸ್ಮರಿಸಿದರು.
ವೃತ್ತಿ ಬದುಕಿನಲ್ಲಿ ಹಲವಾರು ಏರಿಳಿತ ಕಂಡಿದ್ದೇನೆ. ಕೃಷಿ ಹಾಗೂ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಬರೆದು ಜನರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸಿದ ಸಂತೃಪ್ತಿ ನನ್ನಲ್ಲಿ ಈಗಲೂ ಇದೆ. ಆಗ ಪತ್ರಿಕಾ ವೃತ್ತಿಗೆ ಸಾಮಾಜಿಕ ಜವಾಬ್ದಾರಿ, ಕಾಳಜಿ ಇತ್ತು. ಆದರೆ ಈಗ ಅದು ಉದ್ಯಮವಾಗಿರುವುದರಿಂದ ಮಾಧ್ಯಮಗಳಲ್ಲಿ ಗುಣಮಟ್ಟ ಕುಸಿದಿದೆ. ಸೇವೆ ಎಂಬುದು ಮಾಯವಾಗಿದೆ. ಇನ್‌ವೆಸ್ಟಿಗೇಷನ್ ಜರ್ನಲಿಸಂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲೂ
ಪತ್ರಕರ್ತರು ವಿಷಯಾಧಾರಿತ ಪತ್ರಿಕೋದ್ಯಮದ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ|ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜು ಕೋಷ್ಠಿ ಮತ್ತು ಪದಾಧಿಕಾರಿಗಳು ಇದ್ದರು.
ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಲಬುರಗಿಯ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲು ಪತ್ರಕರ್ತ ಸಂಘ ಯೋಜಿಸಿದೆ. ಈ ನಿಟ್ಟಿನಲ್ಲಿ ಹಿರಿಯರು, ಮಾರ್ಗದರ್ಶಕರು ಆಗಿರುವ ಎಸ್.ಆರ್.ಮಣ್ಣೂರು ಅವರನ್ನು ಸನ್ಮಾನಿಸಲಾಗಿದೆ. ಮಣ್ಣೂರು ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಬುರಗಿ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರು.
ಬಾಬುರಾವ್ ಯಡ್ರಾಮಿ
ಅಧ್ಯಕ್ಷರು, ಪತ್ರಕರ್ತರ ಸಂಘ