ಬೆಳಗಾವಿ: ತಂತ್ರಜ್ಞಾನದ ಬೆಳವಣಿಗೆ, ಅಂತರ್ಜಾಲ ಸೌಲಭ್ಯ ಹಾಗೂ ಬದಲಾಗಿರುವ ಸನ್ನಿವೇಶದಲ್ಲಿ ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿದೆ. ಆದರೆ ಮೂಲತತ್ವ ಹಾಗೇ ಉಳಿದುಕೊಂಡಿರುವುದರಿಂದ ಬರವಣಿಗೆಯ ತುಡಿತ ಹೊಂದಿರುವವರಿಗೆ ಪತ್ರಿಕೋದ್ಯಮದಲ್ಲಿ ವಿಪುಲ ಅವಕಾಶಗಳಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹೇಳಿದರು.
ಗುರುವಾರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂವಹನ ಕೂಟ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಮತ್ತು 2019-20 ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಿಂದಾಗಿ ಪ್ರತಿಯೊಬ್ಬರಿಗೂ ಬರೆಯುವ ಅವಕಾಶವಿದೆ. ಇದನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ವೃತ್ತಿಜೀವನ ರೂಪಿಸಿಕೊಳ್ಳಬಹುದು ಎಂದರು.
ನೌಕರಿಗಾಗಿ ಶಿಕ್ಷಣ ಎಂಬ ಪರಿಸ್ಥಿತಿ ಈಗ ಉಳಿದಿಲ್ಲ. ನೌಕರಿ ಹಾಗೂ ಶಿಕ್ಷಣ ಎರಡು ಬೇರೆ ಬೇರೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದನ್ನು ಅರಿತುಕೊಂಡು ವೃತ್ತಿ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ವಿನೋದ ಗಾಯಕವಾಡ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಠ್ಯಕ್ರಮದ ಅಧ್ಯಯನದ ಜೊತೆಗೆ ಕ್ಷೇತ್ರ ಭೇಟಿ ಮತ್ತು ಬರವಣಿಗೆ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಬೇಕು ಎಂದು ಹೇಳಿದರು.
ಸಂವಹನ ಕೂಟದ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ| ಸತೀಶ ಇಟಗಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಪ್ರತಿವಾರ ಸಂವಹನ ಕೂಟಕ್ಕೆ ಆಹ್ವಾನಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ವಿಭಾಗದ ಉಪನ್ಯಾಸಕರಾದ ವಿದ್ಯಾಶ್ರೀ ಹಲಕೇರಿಮಠ, ಸುನಿತಾ ದಾಸರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಜಯ ಸ್ವಾಗತಿಸಿದರು, ಸಹನಾ ಭಜಂತ್ರಿ ನಿರೂಪಿಸಿದರು, ಪ್ರವೀಣ ಗೌಡರ ವಂದಿಸಿದರು.