Advertisement

ಪತ್ರಿಕೋದ್ಯಮ ಮತ್ತು ಸಂಪಾದಕೀಯ ಒಂದು ನಾಣ್ಯದ ಎರಡು ಮುಖ 

04:42 PM Mar 29, 2018 | |

ಮುಂಬಯಿ: ಸಂಪಾದಕನ ಕ್ರಿಯೆ ಸಂಪಾ ದಕೀಯ. ಸಂಪಾದಕೀಯ ನಿಷ್ಪಕ್ಷ ಪಾತವಾಗಿರಬೇಕು. ಯಾವುದೇ ವಿಷಯದ ಕುರಿತು ವಿಮರ್ಶಿಸುವ ಶಕ್ತಿ ಸಂಪಾದಕೀಯಕ್ಕಿರಬೇಕು. ಸಂಪಾದಕನಾದವನಿಗೆ ಬದ್ಧತೆ, ಶಿಸ್ತು, ಸಂಯಮ, ಜವಾಬ್ದಾರಿ ಇರಬೇಕು. ಸಮಾಜ ಕಟ್ಟುವ ಜವಾಬ್ದಾರಿ ಸಂಪಾದಕೀಯದಲ್ಲಿದೆ. ಅದು ಚರ್ಚೆಗೆ ಪೂರಕವಾಗಿರಬೇಕು. ಸ್ಪಷ್ಟವಾದ ದೃಷ್ಟಿಕೋನವಿರಬೇಕು. ಅದರಂತೆ ಸುತ್ತಮುತ್ತಲಿನ ಆಗು-ಹೋಗುಗಳ ಕುರಿತು ಸೂಕ್ಷ್ಮಾವಲೋಕನವಿರಬೇಕು.  ಪತ್ರಿಕೆ, ಪತ್ರಿಕೋದ್ಯಮ, ಸಂಪಾದಕೀಯ ಏಕಕಾಲಕ್ಕೆ ಒಟ್ಟೊಟ್ಟಿಗೆ ನಡೆಯುತ್ತಾ ಹೋಗುವ ಕ್ರಿಯೆ. ದೊಡ್ಡ ಪತ್ರಿಕೆಗಳಲ್ಲಿ ಪ್ರತಿ ವಿಭಾಗಕ್ಕೆ  ಹಲವು ಉಪ ಸಂಪಾದಕರು ಇರುತ್ತಾರೆ. ಒಂದೊಂದು ಪುಟಗಳಿಗೂ ಕೆಲವು ಉಪ ಸಂಪಾದಕರಿರುವುದೂ ಇದೆ. ಪತ್ರಿಕೋದ್ಯಮ ಮತ್ತು ಸಂಪಾದಕೀಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ  ಚಂದ್ರಶೇಖರ ಪಾಲೆತ್ತಾಡಿ ಅವರು ಅಭಿಪ್ರಾಯಪಟ್ಟರು.

Advertisement

ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಂಪಾದಕೀಯ ಬರೆಹ ಎಂಬ ವಿಷಯದ ಕುರಿತು ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಈಗ ಪತ್ರಿಕೆಗಳ ಆವೃತ್ತಿಗಳು ವಿಕೇಂದ್ರೀಕರಣಗೊಂಡಿವೆ. ಆದ್ದರಿಂದ ಓದುಗರಿಗೆ ಸಮಗ್ರ ಸುದ್ದಿಗಳನ್ನು ತಲುಪಿಸಲಾಗುತ್ತಿಲ್ಲ. ಒಂದು ಜಿಲ್ಲೆಯಲ್ಲಿನ ಸುದ್ದಿಗಳು ಇನ್ನೊಂದು ಜಿಲ್ಲೆಗೆ ಪಸರಿಸುತ್ತಿಲ್ಲ. ಆಯಾಯ ಪ್ರದೇಶದ ಸುದ್ದಿಗಳಿಗೇ ಹೆಚ್ಚು ಮಹತ್ವ ನೀಡುಲಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಜಾಹೀರಾತು ಕೂಡ ಆಗಿದೆ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಸುವುದೂ ಕೂಡಾ ಕಷ್ಟ. ಒಮ್ಮೊಮ್ಮೆ ಜಾಹೀರಾತು ಇಲ್ಲದಿದ್ದಾಗ ಪುಟ ತುಂಬಿಸುವ ಕಾರ್ಯವನ್ನೂ ಮಾಡಬೇಕಾಗುತ್ತದೆ ಎಂದು ಅವರು ನುಡಿದರು. ವಿಭಾಗದ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆದ ಡಾ| ಜಿ. ಎನ್‌. ಉಪಾಧ್ಯ ಅವರು  ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಸುದೀರ್ಘ‌ವಾದ ಇತಿಹಾಸವಿದೆ. ಕರ್ನಾಟಕ ಮಲ್ಲ ಪತ್ರಿಕೆಯ ಮೂಲಕ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ಗೈದ ಕನ್ನಡ ನುಡಿಸೇವೆ ಅನುಪಮವಾದುದು. ಪಾಲೆತ್ತಾಡಿ ಅವರು ಬರೆದ ಸಂಪಾದಕೀಯ ಹಾಗೂ ಇದು ಭಾರತ ಅಂಕಣಗಳ ಸಂಖ್ಯೆ ಹತ್ತಿರ ಹತ್ತಿರ ಒಂಬತ್ತು ಸಾವಿರ. ನೇರ ನಡೆ ನುಡಿಗೆ ಹೆಸರಾದ ಪಾಲೆತ್ತಾಡಿ ಅವರ ಬರವಣಿಗೆ ಸಮಚಿತ್ತದಿಂದ ಕೂಡಿದ್ದು ಓದುಗರನ್ನು ಚಿಂತನೆಗೆ ಹಚ್ಚುತ್ತಲೇ ಬಂದಿರುವುದು ಗಮನೀಯ ಅಂಶ. ಸಂಪಾದಕೀಯ ಪತ್ರಿಕೆಯೊಂದರ ಅಭಿರುಚಿ, ಮನೋಧರ್ಮವನ್ನು ಎತ್ತಿ ಹಿಡಿಯುತ್ತದೆ. ಎಂಎ ವಿದ್ಯಾರ್ಥಿ ಗಳು ಒಳ್ಳೆಯ ಲೇಖಕರಾಗಿ  ಹೊರ ಹೊಮ್ಮಿದರೆ ನಮ್ಮ ಶ್ರಮ ಸಾರ್ಥಕ ಎಂದು ನುಡಿದು, ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರ ಶೈಲಿಯನ್ನು ಕೊಂಡಾಡಿದರು.

ಸಂಶೋಧನ ಸಹಾಯಕರಾದ ರಮಾ ಉಡುಪ, ಮಧುಸೂದನ್‌ ರಾವ್‌, ಶಿವರಾಜ್‌ ಎಂ.ಜಿ., ಸುರೇಖಾ ದೇವಾಡಿಗ, ನಳಿನಾ ಪ್ರಸಾದ್‌, ಸುರೇಖಾ ಶೆಟ್ಟಿ, ಜ್ಯೋತಿ ಶೆಟ್ಟಿ, ದಿನಕರ್‌ ಚಂದನ್‌, ಪಾಲನ್‌, ಸುಧೀರ್‌ ದೇವಾಡಿಗ, ಗಣಪತಿ ಮೊಗವೀರ, ಉದಯ ಶೆಟ್ಟಿ, ಕರುಣಾಕರ, ಮೊದಲಾದವರು ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು. ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next