ಹುಬ್ಬಳ್ಳಿ: ಮಹದಾಯಿ ಹೋರಾಟ ಕಡೆಗಣಿಸಿದ ಹಾಗೂ ಯೋಜನೆ ಅನುಷ್ಠಾನದಲ್ಲಿ ರಾಜಕಾರಣ ಮಾಡುತ್ತಿರುವ ಪ್ರಹ್ಲಾದ ಜೋಶಿಯವರನ್ನು ಸೋಲಿಸುವ ಕಾರಣಕ್ಕೆ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಬೆಂಬಲಿಸಲು ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನಿರ್ಧರಿಸಲಾಗಿದೆ ಎಂದು ಸಮಿತಿ ಸಂಚಾಲಕ ಅಮೃತ ಇಜಾರಿ ತಿಳಿಸಿದರು.
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲು ಹೋದ ರೈತರು, ಹೋರಾಟಗಾರರ ಮೇಲೆ ಸಂಸದರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹದಾಯಿ ಹೋರಾಟಗಾರರು ನಮ್ಮನ್ನು ಏನೂ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಿಂದಿಸಿದ್ದಾರೆ. ಇಂತಹ ಸಂಸದರಿಗೆ ತಕ್ಕ ಪಾಠ ಕಲಿಸಲು ರೈತರು ನಿರ್ಧರಿಸಿದ್ದು, ನಾಲ್ಕು ಜಿಲ್ಲೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಶಿವಣ್ಣ ಹುಬ್ಬಳ್ಳಿ, ಡಿ.ಜಿ. ಜಂತ್ಲಿ, ಸುರೇಶಗೌಡ ಪಾಟೀಲ, ಎಂ.ಎಚ್. ಮುಲ್ಲಾ, ವಿನಯ ಗೋಕಾವಿ, ನಾಗರಾಜ ಬಡಿಗೇರ, ನಾಗಭೂಷಣ ಕಾಳೆ ಇನ್ನಿತರರಿದ್ದರು.
Advertisement
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ವಿಚಾರದಲ್ಲೂ ಬಿಜೆಪಿ ರಾಜಕಾರಣ ಮಾಡಿರುವುದು ಈ ಭಾಗದ ರೈತರಲ್ಲಿ ಆಕ್ರೋಶ ಮೂಡಿಸಿದೆ. ಇವರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಕಳೆದ ಚುನಾವಣೆಯಲ್ಲಿ ನೋಟಾ ಹಾಗೂ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದೆವು. ಇದರಿಂದ ಯಾವುದೇ ಪ್ರಯೋಜನವಾಗದು ಎನ್ನುವ ಕಾರಣದಿಂದ ನಮ್ಮ ಹೋರಾಟಕ್ಕೆ ಸಹಕಾರ ನೀಡಿದ ಪಕ್ಷಕ್ಕೆ ಬೆಂಬಲಿಸಬೇಕೆಂದು ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು.