ಹುಬ್ಬಳ್ಳಿ: ಬಿಜೆಪಿ ಧಾರ್ಮಿಕ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ. ಈ ವಿಷಯಗಳ ಮೇಲೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಕುಟುಕಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕರಸೇವಕನ ಬಂಧನ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಇದರ ಹಿಂದೆ ಕೇಂದ್ರ ಸಚಿವ ಪ್ರಹ್ಲಾದದ ಜೋಶಿ ಕೈವಾಡವಿದ್ದು, ಲೋಕಸಭೆಗೆ ಇದರ ಲಾಭ ಪಡೆಯುವ ಹುನ್ನಾರ ಅವರದ್ದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಹಿಂದೆ ನಾನು ಮುಖ್ಯಮಂತ್ರಿ, ಸಚಿವನಾಗಿದ್ದಾಗ ಹಿಂದೂ, ಕರಸೇವಕರ ಮೇಲಿನ ಹೋರಾಟದ ಪ್ರಕರಣಗಳನ್ನು ವಜಾಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬಿಜೆಪಿ 7-8 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಆವಾಗಲೇ ಕರಸೇವಕರ ಮೇಲೆ ಅಭಿಮಾನವಿದ್ದರೆ ಕೇಸ್ ಗಳನ್ನು ವಜಾಗೊಳಿಸಬೇಕಿತ್ತು. ಇದಕ್ಕೆ ಅವರು ಉತ್ತರ ಕೊಡಬೇಕೆಂದು ಒತ್ತಾಯಿಸಿದರು.
ಶ್ರೀಕಾಂತ ಪೂಜಾರ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡುವ ಆರ್. ಅಶೋಕ ಗೃಹ ಸಚಿವರಾಗಿದ್ದಾಗ ಏಕೆ ಅವರ ವಿರುದ್ಧ ಕೇಸ್ ಹಿಂದೆ ಪಡೆಯಲಿಲ್ಲ. ಇದೀಗ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಇಂತಹ ವಿಷಯಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಲೋಕಸಭಾ ಚುನಾವಣೆ ಗಿಮಿಕ್. ಸದ್ಯ ಈ ಪ್ರಕರಣ ಕೋರ್ಟ್ ನಲ್ಲಿದ್ದು ಬಿಜೆಪಿಯವರು ಹೋರಾಟಗಾರರ ಮೇಲೆ ಕಾಳಜಿ ಇದ್ದರೆ ಬೇಲ್ ಕೊಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಬೀದಿಗೆ ಇಳಿದು ಹೋರಾಟ ಮಾಡುವುದು ಸರಿಯಲ್ಲ ಎಂದರು.
ಸಿ.ಟಿ ರವಿ ತಿರುಗೇಟು: ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿ.ಟಿ ರವಿ ಅವರು, ಜಗದೀಶ ಶೆಟ್ಟರ್ ರಾಮಸೇವೆಯ ಹೋರಾಟದಲ್ಲಿದ್ದವರು. ಈಗ ಪಕ್ಷ ಬದಲಾಯಿಸಿದ ತಕ್ಷಣ ಹೇಳಿಕೆ ಬದಲಾಯಿಸಬಾರದು ಎಂದಿದ್ದಾರೆ.