ಧಾರವಾಡ: ಜಿಲ್ಲೆಯ ಸರಕಾರಿ ಶಾಲೆಗಳಿಗೆ ಬೇಕಾದ ಶೌಚಾಲಯ, ಸ್ಮಾರ್ಟ್‌ಕ್ಲಾಸ್ ಹಾಗೂ ಡೆಸ್ಕ್ಗಳ ಕುರಿತು ಪ್ರಸ್ತಾವನೆ ತಯಾರಿಸಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚಿಸಿದರು.
ನವಲೂರ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಎಸ್‌ಡಿಎಂಸಿ ಸಹಯೋಗದಲ್ಲಿ ಜರುಗಿದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಶಾಲೆಗಳಿಗೆ ಈಗಾಗಲೇ ಐದು ಸಾವಿರಕ್ಕೂ ಅಧಿಕ ಡೆಸ್ಕ್ ವಿತರಿಸಲಾಗಿದೆ. ಯಾವುದೇ ಮಕ್ಕಳು ನೆಲದ ಮೇಲೆ ಕುಳಿತು ಶಿಕ್ಷಣ ಪಡೆಯಬಾರದು. ಹೀಗಾಗಿ ಪ್ರತಿ ಶಾಲೆಗೆ ಡೆಸ್ಕ್ ವಿತರಿಸಲಿದ್ದು, ಅಧಿಕಾರಿಗಳು ಬೇಡಿಕೆ ಇರುವ ಸಂಖ್ಯೆ ನೀಡಬೇಕು. ಒಂದು ಶಾಲೆಗೆ ಕನಿಷ್ಠ ಒಂದು ಸ್ಮಾರ್ಟ್‌ಕ್ಲಾಸ್ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಜವಾಬ್ದಾರಿ ಅರಿತು ಶಿಕ್ಷಕ ಸಮೂಹ ನಡೆಯಬೇಕು. ಸಹಕಾರಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ದೇಶದಲ್ಲಿ 15 ಲಕ್ಷ ಸರ್ಕಾರಿ ಶಾಲೆಗಳಿವೆ. ಇದರಲ್ಲಿ 11ಲಕ್ಷ ಶಾಲೆಗಳು ಶೇ.33 ಫಲಿತಾಂಶ ಹೊಂದಿವೆ. ಶಿಕ್ಷಕರು ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದಿದ್ದರೆ, ಅನ್ನ ಕೊಡುವ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸದಿದ್ದರೆ ಮಕ್ಕಳಿಗಾಗಿ ಸರ್ವಸ್ವ ತ್ಯಾಗ ಮಾಡಿದ ತಂದೆ-ತಾಯಿ ಹಾಗೂ ಪೋಷಕರ ಶಾಪ ತಟ್ಟಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಆದರ್ಶವಾಗಿ ವೃತ್ತಿಯ ಘನತೆ-ಗೌರವ ಕಾಪಾಡಬೇಕು ಎಂದು ತಿಳಿಸಿದರು.
‘ನವಲೂರು ಸವಿನೀರು’ ಸ್ಮರಣ ಸಂಚಿಕೆ, ಶಿವೇಶ್ವರ ದೊಡಮನಿ ಜೀವನ ಮತ್ತು ಸಾಹಿತ್ಯ ಗ್ರಂಥ, ವೆಂಕಟೇಶ ಘಂಟೆನ್ನವರ ‘ದೀಪದ ಹಕ್ಕಿ’ ಕವನ ಸಂಕಲನ, ಡಾ| ಅಶೋಕ ಮತ್ತಿಕಟ್ಟಿ ‘ಆರೋಗ್ಯಕ್ಕಾಗಿ ಆಚಾರಗಳು’ ಕೃತಿಗಳು ಬಿಡುಗಡೆಗೊಂಡವು.
ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಬಿಇಒ ಎ.ಎ. ಖಾಜಿ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಸಿ.ಜಿ. ಹಿರೇಮಠ, ಮಂಜುನಾಥ ಕಟ್ಟಿ, ಸುನಿತಾ ಕಟ್ಟಿ, ಬಿ.ವೈ. ಬಿರಕಿ, ಮುಖ್ಯಾಧ್ಯಾಪಕ ವೈ.ಎಚ್. ಹಿತ್ತಲಮನಿ ಇದ್ದರು.