ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭಾನುವಾರ (ಏಪ್ರಿಲ್ 2) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಅಭಿಯಾನವನ್ನು ಪ್ರಾರಂಭಿಸಲಿದೆ. ಋತುವಿನ ತಮ್ಮ ಆರಂಭಿಕ ಮುಖಾಮುಖಿಗೆ ಸಜ್ಜಾಗುತ್ತಿರುವ ಉಭಯ ತಂಡಗಳು ಗಾಯದ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿವೆ.
2022 ರ ಐಪಿಎಲ್ ನಲ್ಲಿ ಪ್ಲೇಆಫ್ ತಲುಪಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ ಸಿಬಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ವೇಗಿ ಹೇಜಲ್ ವುಡ್ ಅವರು ಆರಂಭದ ಹಲವು ಪಂದ್ಯಗಳಿಗೆ ಅಲಭ್ಯವಾಗುತ್ತಿದ್ದು, ಇತ್ತೀಚೆಗಷ್ಟೇ ಕಾಲು ಮುರಿತದಿಂದ ಚೇತರಿಸಿಕೊಂಡಿರುವ ಮ್ಯಾಕ್ಸ್‌ವೆಲ್ ಎರಡನೇ ಪಂದ್ಯದಿಂದ ಆಯ್ಕೆಗೆ ಲಭ್ಯವಾಗಲಿದ್ದಾರೆ.
32 ವರ್ಷದ ಜೋಶ್ ಹ್ಯಾಜಲ್ ವುಡ್ ಈಗ ಅಕಿಲ್ಸ್ ಸಮಸ್ಯೆಯಿಂದ ರಿ ಹ್ಯಾಬಿಟ್ ಆಗುತ್ತಿದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಆಡಿರಲಿಲ್ಲ. ಐಪಿಎಲ್ ಗೆ ಪ್ರಯಾಣಿಸುವ ಮೊದಲು ಕ್ರಿಕೆಟ್ ಆಸ್ಟ್ರೇಲಿಯಾದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮಾಲೋಚಿಸಲಿದ್ದಾರೆ.
ಭಾರತದ ವಿರುದ್ಧ ಎರಡು ಏಕದಿನ ಪಂದ್ಯದಲ್ಲಿ ಆಡಿರದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಇನ್ನೂ ಕಾಲು ನೋವಿನಿಂದ ಗುಣಮುಖರಾಗುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ರಾತ್ರಿ ತಮ್ಮ ಉದ್ಘಾಟನಾ ಪಂದ್ಯಕ್ಕೆ ಸಿದ್ಧವಾಗಲು ಮ್ಯಾಕ್ಸ್ ವೆಲ್ ಆರ್ ಸಿಬಿಯೊಂದಿಗೆ ಜಿಮ್ ನಲ್ಲಿ ಸಾಕಷ್ಟು ಶಕ್ತಿ ಮತ್ತು ಕಂಡಿಷನಿಂಗ್ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಸೀಸ್ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲೂ ಗಾಯಾಳುಗಳ ಪಟ್ಟಿಯಿದ್ದು, ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಸಂಪೂರ್ಣ ಕೂಟದಿಂದ ಹೊರ ಬಿದ್ದಿದ್ದಾರೆ. ಆದರೆ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ಕೂಡ ಗಾಯದಿಂದ ಬಳಲುತ್ತಿದ್ದು, ಈ ಋತುವಿನ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಮುಖ್ಯ ಕೋಚ್ ಮಾರ್ಕ್ ಬೌಚರ್ ಖಚಿತಪಡಿಸಿದ್ದಾರೆ.