ನನ್ನ ಬಾಳಿಗೆ ಮುಂಜಾವಿನ ಸೂರ್ಯನ ಕಿರಣಗಳಂತೆ ಬಂದವನು ನೀನು. ಒಂಟಿತನಕ್ಕೆ ಪೂರ್ಣವಿರಾಮವಿಡುವ ಸಮಯ ಬಂದಿತೆಂದು ಸಂತಸಪಟ್ಟಿದ್ದೆ, ಆದರೆ ಈಗ, ಅದೇ ಒಂಟಿತನದ ಬದುಕು ನನ್ನನ್ನು ಮತ್ತೆ ಕರೆಸಿಕೊಂಡಿದೆ.
ನೀ ಜೊತೆಯಲ್ಲಿ ಇದ್ದರೆ ಜಗತ್ತನ್ನೇ ಎದರಿಸಬಲ್ಲೆ ಎನ್ನುವ ಮೊಂಡು ಧೈರ್ಯ, ಪ್ರತಿಸಲ ನನ್ನೊಂದಿಗೆ ನನ್ನವನಾಗಿ ಇದ್ದು ಬದುಕದಾರಿಯಲ್ಲಿ ಜೊತೆಯಾಗುವೆ ಎಂಬ ದೃಢ ನಂಬಿಕೆ ನಿನ್ನನ್ನು ಹಿಂದು, ಮುಂದು ನೋಡದೆ ನಂಬುವಂತೆ ಮಾಡಿತ್ತು. ಆದರೆ, ಅದೇಕೆ ನಿನ್ನನ್ನು ಅಷ್ಟೊಂದು ನಂಬಿದ್ದೆ ಎಂದು ನನಗೂ ಗೊತ್ತಿಲ್ಲ. ನೀನು ನನ್ನಿಂದ ಮರೆಯಗಬಹುದು ಎಂಬ ಸಣ್ಣ ಕಲ್ಪನೆ ಕೂಡ ಇರಲಿಲ್ಲ, ಎಂದಾದರೊಮ್ಮೆ, ನೀನು ನನ್ನಿಂದ ದೂರವಾಗಬಹುದೆಂದು ಕನಸಲ್ಲೂ ಊಹಿಸಿರಲಿಲ್ಲ. ಆದರೆ, ನೀನು ಕಾರಣವಲ್ಲದ ಕಾರಣ ಹೇಳಿ ಬಿಟ್ಟುಹೋದೆ. ಅದಕ್ಕೆ ನನ್ನದೇನು ಆಕ್ಷೇಪವಿಲ್ಲ. ಸಂಬಂಧಗಳು ಬೇಡವಾದಾಗ ಹುಲ್ಲು ಕಡ್ಡಿ ತಾಗಿದರೂ, ಕೂಡ ಅದೂ ಒಂದು ಸ್ಪಷ್ಟ ಕಾರಣವೇ ಆಗಿ ದೂರವಾಗಲು ಕಾರಣವಾಗಬಹುದು.
ಆದರೆ, ನೀನು ಕೇವಲ ನಿನ್ನ ಹೇಳಿಕೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ದೂರವಾಗಿದ್ದು ಮನಸಿನ್ನು ಘಾಸಿಗೊಳಿಸಿದೆ. ಒಂದು ದಿನವಾದರೂ ನನಗೆ ನನ್ನದೇ ಆದ ಕುಟುಂಬವಿದೆ, ಅವರಿಗೂ ನನ್ನ ಅವಶ್ಯಕತೆ ಇದೆ ಎಂದು ನೀನು ಯೋಚಿಸಿದ್ದರೆ ಇಂದು ನಾವಿರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಪ್ರತಿದಿನ ನಿನ್ನ ಇಷ್ಟದಂತೆಯೇ ನಡೆದುಕೊಳ್ಳುತ್ತಿದ್ದ ನಾನು, ಒಂದು ದಿನವಷ್ಟೇ ನಿನಗೆ ಎದುರಾಡಿದ್ದಕ್ಕೆ ನಿನ್ನಿಂದ ದೂರ ಆಗಿಬಿಟ್ಟೆಯಲ್ಲ; ಅದು ಎಷ್ಟು ಸರಿ?
ನಿನ್ನೊಂದಿಗಿನ ನೆನಪುಗಳು ಪ್ರತಿನಿಮಿಷ ನನ್ನನ್ನು ಚುಚ್ಚಿ ಸಾಯುವಂತೆ ಮಾಡುತ್ತಿವೆ. ನೀ ಬಿಟ್ಟು ಹೋದ ಜಾಗ ಇಂದಿಗೂ ನಮ್ಮಿಬ್ಬರ ಒಂದಾಗುವಿಕೆಗೆ ಕಾಯುತ್ತಿದೆ. ಆ ಜಾಗಕ್ಕೆ ಹೋದಾಗ ಸುತ್ತಲಿನ ಪರಿಸರ ನಿಮ್ಮ ಕೋಳಿಜಗಳವನ್ನು ಸರಿಪಡಿಸಿಕೊಂಡು ಒಂದಾಗಬಾರದೇ ಎಂದು ಪಶ್ನಿಸುತ್ತಿದ್ದಂತೆ ಭಾಸವಾಗುತ್ತದೆ. ಅದಕ್ಕೆ ಏನೆಂದು ಉತ್ತರಿಸಲಿ?
ಒಂಟಿಯಾಗಿ ಸಾಗುವುದೇನೂ ನನಗೆ ಹೊಸತಲ್ಲ. ಆದರೆ, ಇಷ್ಟು ದಿನ ನಿನಗೆ ಹೊದಿಕೊಂಡಿದ್ದ ಮನಸ್ಸು ಇಂದು ಅಳುತ್ತಿದೆ. ನಿನ್ನ ಹಳೇ ಬದುಕಿನ ದಾರಿಗೆ ಮತ್ತೆ ಹೊರಟೆಯಲ್ಲಾ ಎಂದು. ಎಷ್ಟೆಂದು ಸಂತೈಸಲಿ ನಾನಾದರೂ? ಅದೂ ಕೂಡ ನಿನ್ನಂತಯೇ ನನ್ನ ಮಾತು ಕೇಳುತ್ತಿಲ್ಲ.
ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡು ಬದುಕುತ್ತಿದ್ದ ನನ್ನ ಬಾಳಿಗೆ ಮುಂಜಾವಿನ ಸೂರ್ಯನ ಕಿರಣಗಳಂತೆ ಬಂದವನು ನೀನು. ಒಂಟಿತನಕ್ಕೆ ಪೂರ್ಣವಿರಾಮವಿಡುವ ಸಮಯ ಬಂದಿತೆಂದು ಸಂತಸಪಟ್ಟಿದ್ದೆ, ಆದರೆ ಈಗ, ಅದೇ ಒಂಟಿತನದ ಬದುಕು ನನ್ನನ್ನು ಮತ್ತೆ ಕರೆಸಿಕೊಂಡಿದೆ. ನನ್ನೊಂದಿಗೆ ಇರುವಷ್ಟು ದಿನ ನೀಡಿದ ಪ್ರೀತಿ, ಕಾಳಜಿ ಇವೆಲ್ಲದಕ್ಕೂ ನನ್ನ ಮನಃಪೂರ್ವಕ ಧನ್ಯವಾದ.
– ಪವಿತ್ರಾ ಭಟ್