Advertisement
ರಬಕವಿಯ ಬನಹಟ್ಟಿಗೆ ಬಂದು ನಂದು ಅಣ್ಣಾ ಯಾರು ಅಂತ ಕೇಳಿ?‘ಏನಾಗಬೇಕಿತ್ತು, ಏನಾದರೂ ಸಹಾಯ ಬೇಕಿತ್ತ?’ ಹೀಗಂತ ಒಂದು ಯುವ ತಂಡವೇ ನಿಮ್ಮನ್ನು ಕೇಳಿದರೆ ಆಶ್ಚರ್ಯವಿಲ್ಲ. ಈ ನಂದು ಅಣ್ಣಾ ಅಂದರೆ ಮತ್ಯಾರು ಅಲ್ಲ ಅದೇ ಊರಿನ ಶಿವಾನಂದ ಗಾಯಕವಾಡ ಅಂತ. ನಂದು ಅಣ್ಣಾಯ ಎಂಬುದು, ಊರಿನವರು ಅವರಿಗಿಟ್ಟ ಪ್ರೀತಿ ಹೆಸರು.
Related Articles
ಸ್ಮಶಾನ ಎಂದ ಕೂಡಲೇ ಜನಕ್ಕೆ ಏನೋ ಭಯ. ಆದರೆ ನಂದು ತಂಡಕ್ಕೆ ಅದಿಲ್ಲ. ಸ್ಥಳೀಯ ನಗರಸಭೆ, ಪುರಸಭೆ ನೆರವಿನಿಂದ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಬನಹಟ್ಟಿ ಸ್ಮಶಾನ, ರಬಕವಿ, ಮಹಾಲಿಂಗಪುರ, ತೇರೆದಾಳ, ರಾಂಪುರ… ಹೀಗೆ ಸುತ್ತ ಮುತ್ತಲ ಗ್ರಾಮದಲ್ಲಿರುವ ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಬಂದಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಹೋಗಿ ನೋಡಿ, ಸ್ಥಳೀಯ ಸದಸ್ಯರಿಗೆ ಉಸ್ತುವಾರಿ ವಹಿಸಿದ್ದಾರಂತೆ. ಹೀಗಾಗಿ, ನೆಟ್ಟ ಗಿಡಗಳಲ್ಲಿ ಶೇ.80ರಷ್ಟು ಚಿಗುರಿ ದೊಡ್ಡದಾಗಿದೆಯಂತೆ.
Advertisement
ಇದಲ್ಲದೆ, ರಬಕವಿಯ ಕಷ್ಣಾ ನದಿ ತಟವನ್ನು ಶುದ್ಧಿಗೊಳಿಸಿದ್ದೂ ಉಂಟು. ಪ್ರತಿ ಭಾನುವಾರ ತಂಡದ ಸದಸ್ಯರನ್ನು ಸೇರಿಸಿಕೊಂಡು ಪ್ರವಾಸಿಗರು ಬಿಸಾಕಿದ ವಸ್ತುಗಳನ್ನು ಒಂದೆಡೆ ಕಲೆ ಹಾಕಿ ನದಿಯ ತೀರವನ್ನು ಸ್ವತ್ಛ ಮಾಡಿ, 25 ಟನ್ ನಷ್ಟು ತ್ಯಾಜ್ಯಗಳನ್ನು ಹೊರಹಾಕಿದ್ದಾರೆ. ಸ್ವಚ್ಛ ಮಾಡಿ ಸುಮ್ಮನೆ ಬಿಟ್ಟು ಬಂದಿಲ್ಲ. ಆಗಾಗ ಹೋಗಿ, ಅಲ್ಲಿ ಬಂದು ಹೋಗುವವರಿಗೆ ‘ಇಲ್ಲೆಲ್ಲ ಕಸ ಹಾಕಬಾರದು, ನದಿಗೆ ಕಸ ಎಸೆದರೆ ಮತ್ತೆ ನಮ್ಮ ಮನೆಗೆ ವಾಪಸ್ಸು ಬರುತ್ತದೆ’ ಅಂತೆಲ್ಲ ಸ್ವತ್ಛತೆಯ ಪಾಠ ಮಾಡುತ್ತಾರೆ.
ನಂದಣ್ಣನ ತಂಡ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯ ಮಾಡುವ ಸಂಕಲ್ಪ ತೊಟ್ಟಿದೆ. ಇದಕ್ಕಾಗಿ ಈಗಾಗಲೇ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ, ಕಳೆದ ವರ್ಷ ಸಮೀಪದ ಹಳಿಂಗಳಿಯ ಭದ್ರಗಿರಿ ಬೆಟ್ಟದಲ್ಲಿ ಲಕ್ಷಾಂತರ ಸಿಸಿಗಳನ್ನು ನೆಟ್ಟು ಬಂದಿದ್ದಾರೆ.
ನೆರೆ ಪ್ರವಾಹಕ್ಕೆ ಸ್ಪಂದನೆಉತ್ತರ ಕರ್ನಾಟಕದ ಕಷ್ಣಾ ಹಾಗೂ ಘಟಪ್ರಭಾ ನದಿಗಳ ಪ್ರವಾಹ ಉಂಟಾದಾಗ ನಂದಣ್ಣನ ಟೀಂ ಸುಮ್ಮನೆ ಕೂರಲಿಲ್ಲ. ವಾರ ಪೂರ್ತಿ ಇರುವ ಕೆಲಸ ಬಿಟ್ಟು ಸಂತ್ರಸ್ಥರ ನೆರವಿಗೆ ನಿಂತಿತು. ಪ್ರವಾಹ ಪೀಡಿತ ಗ್ರಾಮಗಳಿಗೆ. ತೆರಳಿ ಸುಮಾರು 15 ದಿನಗಳ ಕಾಲ ಅಲ್ಲಿನ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಅಲ್ಲದೇ ಅವರಿಗೆ ಊಟ ವಸತಿ ಕಲ್ಪಿಸುವ ಹೊಣೆಯನ್ನೂ ಹೊತ್ತರು. ಅಷ್ಟೇ ಅಲ್ಲ; ನೆರೆ ನಿಂತ ಮೇಲೆ, ತಾವೂ ಕೈಯಿಂದ ಹಣ ಹಾಕಿ, ಬೇರೆಯವರಿಂದ ಸಂಗ್ರಹಿಸಿದ ಅವಶ್ಯಕ ವಸ್ತುಗಳನ್ನು ಸಂತ್ರಸ್ಥರ ಮನಗೆ ತಲುಪಿಸಿದ್ದಾರೆ. ಅಭಿಯಾನ
ದೇಶದ ಬಗ್ಗೆ ಅಭಿಮಾನ ಮೂಡಿಸುವುದೂ ಒಂದು ಬಗೆಯ ಸೇವೆ ಎಂದು ನಂದು ಅವರ ತಂಡ ನಂಬಿದೆ. ಹೀಗಾಗಿ, 306 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ರಾಷ್ಟ್ರ ಭಕ್ತಿಯ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ವಿವೇಕಾನಂದರ ಆದರ್ಶಗಳನ್ನು ಯುವಕರಿಗೆ ತಲುಪಿಸಬೇಕು ಅನ್ನೋದು ನಮ್ಮ ಧ್ಯೇಯ, ಆಸೆ ಎನ್ನುತ್ತಾರೆ ಶಿವಾನಂದ ಗಾಯಕವಾಡ. ಪಾಠ ಮಾಡ್ತಾರೆ
ಗಾಯಕವಾಡರಿಗೆ ಇನ್ನೊಂದು ಹುಚ್ಚಿದೆ. ಅದೇನೆಂದರೆ, ಬೆಳಗ್ಗೆ ಕೆಲಸಕ್ಕೆ ಹೋದರೆ, ಮಧ್ಯಾಹ್ನ ಊಟಕ್ಕೆ ಅಂತ ಮನೆಗೆ ಬರುತ್ತಾರೆ. ನಂತರ ಎರಡು ಗಂಟೆ ನಿದ್ದೆ ಮಾಡಿ, ಸಂಜೆ ಮತ್ತೆ ಕಚೇರಿಗೆ ಹೋಗಬಹುದು. ಗಾಯಕವಾಡರು ಹಾಗೇ ಮಾಡುವುದಿಲ್ಲ. ಊಟ ಮಾಡಿ, ನೇರ ಯಾವುದಾದರೂ ಶಾಲೆಗೆ ಹೋಗುತ್ತಾರೆ. ಅಲ್ಲಿ ಮಕ್ಕಳ ಜೊತೆ ಇದ್ದು, ಒಂದಷ್ಟು ದೇಶದ ಬಗ್ಗೆ ಪಾಠ ಮಾಡಿ ಬರುತ್ತಾರೆ. ಇದು ಅವರ ದಿನಚರಿ.
ಇನ್ನು ತಾಲೂಕಿನಲ್ಲಿ ಸೈನಿಕರ ಮನೆ ಹುಡುಕಿ, ದೀಪಾವಳಿ ಹಬ್ಬದ ಮೂರು ದಿನ ಅವರ ಮನೆಗೆ ಹೋಗಿ, ಸೈನಿಕರ ಕುಟುಂಬಕ್ಕೆ ಸಿಹಿ ಹಂಚಿ, ಅವರ ಮನೆ ಮುಂದೆ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರ ಗೀತೆ ಹೇಳಿಬರುವ ಸಂಪ್ರದಾಯವನ್ನೂ ಬೆಳೆಸಿದ್ದಾರೆ. – ಕಿರಣ ಶ್ರೀ ಶೈಲ ಆಳಗಿ