ಜೋರ್ಡಾನ್: ಆದಾಯ ಮೂಲವಿಲ್ಲದೇ ಕಂಗಾಲಾಗಿದ್ದ ಜೋರ್ಡಾನ್‌ನಲ್ಲಿ ಆರ್ಥಿಕತೆಗೆ ಜೀವ ತುಂಬಲು ಸರಕಾರವು ಲಾಕ್‌ಡೌನ್ ನ್ನು ಸಡಿಲಗೊಳಿಸಿದೆ.
ಈ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿದ್ದು, ಜನರು ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ದೇಶದಲ್ಲಿ ಆರ್ಥಿಕ ಕ್ಷೇತ್ರದ ಕುಸಿತದ ತಲ್ಲಣ ಎದ್ದಿದ್ದು, ಮುಂಜಾಗ್ರತೆಯ ಕ್ರಮವಾಗಿ ಎಚ್ಚೆತ್ತು ಕೊಂಡಿರುವ ಸರಕಾರವು, ಸೀಮಿತ ಕಾರ್ಮಿಕರನ್ನು ಬಳಸಿಕೊಂಡು ಉದ್ಯಮಗಳನ್ನು ನಡೆಸಲು ಸೂಚಿಸಿದೆ.
ಈ ಕುರಿತು ಸ್ವತ: ಕೈಗಾರಿಕೆ ಮತ್ತು ವ್ಯಾಪಾರ ಸಚಿವ ತಾರಿಕ್ ಹಮೌ¾ರಿ ಘೋಷಣೆ ಮಾಡಿದ್ದು, ಕೈಗಾರಿಕಾ ಘಟಕಗಳು ಉತ್ಪಾದನೆಯನ್ನು ಪುನರಾರಂಭಿಸಬಹುದು ಎಂದಿದ್ದಾರೆ. ಅಂಗಡಿ ಮುಂಗಟ್ಟುಗಳ ಮಾಲಕರು, ಉದ್ಯಮಿಗಳು ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ವ್ಯಾಪಾರದಲ್ಲಿ ತೊಡಗಿಕೊಳ್ಳಲು ಆದೇಶಿಸಿದ್ದಾರೆ.
ಹಾಗಾಗಿ ಕೈಗಾರಿಕ ಘಟಕಗಳು, ವಾಣಿಜೋದ್ಯಮಗಳೂ ಕಾರ್ಯ ನಿರ್ವಹಿಸಲು ತೊಡಗಿವೆ. ಕಡಿಮೆ ಮಟ್ಟದ ಸಿಬಂದಿ ಮತ್ತು ಕಟ್ಟುನಿಟ್ಟಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿವೆ. ನೈರ್ಮಲ್ಯ ಮತ್ತು ಶುಚಿತ್ವಕ್ಕೆ ಒತ್ತು ನೀಡುತ್ತಿವೆ ಎನ್ನಲಾಗುತ್ತಿದೆ. ಮುಂದಿನ ಹಂತವಾಗಿ ಸಾರ್ವಜನಿಕ ಸಾರಿಗೆಯೂ ಆರಂಭವಾಗಲಿದ್ದು, ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಿದ್ದು, ರಾತ್ರಿಯ ವೇಳೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.
ಪ್ರಾರಂಭಿಕ ಹಂತದಲ್ಲಿಯೇ ಸೋಂಕು ನಿಯಂತ್ರಣ ಕುರಿತಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡ ಪ್ರಧಾನಿ ಒಮರ್‌ಅಲ್-ರಜಾ ಅವರ ಕಾರ್ಯವೈಖರಿಗೆ ಪ್ರಶಂಸೆಯೂ ವ್ಯಕ್ತವಾಗಿದೆ. ಆದರೆ ದೇಶ ಶಾಲಾ-ಕಾಲೇಜುಗಳ ತೆರೆಯುವಿಕೆ ಕುರಿತು ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲಿಯವರೆಗೂ ಜೋರ್ಡಾನ್ ಅಲ್ಲಿ 460 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 9 ಜನರು ಮೃತಪಟ್ಟಿದ್ದಾರೆ.