Advertisement

ಕನಿಷ್ಠ ಮೂಲಸೌಕರ್ಯಗಳೇ ಇಲ್ಲದ ಜೋಪಡಿ

12:46 AM Jun 23, 2020 | Sriram |

ಕಬಕ: ಕೂಲಿ ಕೆಲಸವೇ ಬದುಕಿಗೆ ದಾರಿ ಆಗಿರುವ ಅಂಗವಿಕಲ ಮಗು ಇರುವ ಕುಟುಂಬವೊಂದು ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಜೀವನ ಸಾಗಿಸುತ್ತಿರುವ ಕರುಣಾಜನಕ ಕಥೆಯಿದು!

Advertisement

ಕಬಕ ಗ್ರಾ.ಪಂ. ನಿಂದ ಮೂರು ಕಿ.ಮೀ. ದೂರದಲ್ಲಿರುವ ನೆಕ್ಕರಾಜೆ ಬೈಪದವು ರುಕ್ಮ-ಶಾಂತಿ ದಂಪತಿ ಹಾಗೂ ಅವರ ಮೂರೂವರೆ ವರ್ಷ ಪ್ರಾಯದ ಅಂಗವಿಕಲ ಪುತ್ರಿ ವಾಸಿಸುತ್ತಿರುವ ಜೋಪಡಿಯ ಸ್ಥಿತಿ ತೀರಾ ಶೋಚನಿಯವಾದುದು.

ಈ ಕುಟುಂಬಕ್ಕೆ ಆಸ್ತಿ ಪಾಲು ರೂಪದಲ್ಲಿ ಸಿಕ್ಕಿದ್ದು ಜೋಪಡಿ. ಕಳೆದ ಎರಡು ವರ್ಷಗಳಿಂದ ಇಲ್ಲೆ ವಾಸ. ಒಂದೆಡೆ ಸರಿಯಾಗಿ ಕಾಲು ಚಾಚಿ ಮಲಗಲು ಸಾಧ್ಯವಿಲ್ಲದ ಸ್ಥಿತಿ. ಮಳೆ ನೀರು ಬಾರದಂತೆ ತಪ್ಪಿಸಿಕೊಳ್ಳಲು ತೆಂಗಿನ ಗರಿ, ಪ್ಲಾಸ್ಟಿಕ್‌ ಹೊದಿಸಲಾಗಿದೆ. ಅದು ಗಾಳಿ ಮಳೆಗೆ ಅಡಿಗಡಿಗೆ ಅಲುಗಾಡುತ್ತಿದೆ. ಕನಿಷ್ಠ ಮನೆಗಾದರೂ ಸ್ವಲ್ಪ ಜಾಗ ಕೊಡಿ ಎಂದು ಜಾಗ ಹೊಂದಿರುವ ಸೋದರನಿಗೆ ವಿನಂತಿಸಿದರೂ ಆ ಕುಟುಂಬ ಒಪ್ಪಿಗೆ ನೀಡಿಲ್ಲ ಎನ್ನುತ್ತಾರೆ ಮನೆ ಮಂದಿ.

ಅಂಗವಿಕಲ ಮಗಳು
ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಮೂರೂವರೆ ವರ್ಷದ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಬಂತು. ಅನಂತರ ಆಕೆ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾಳೆ. ಆಟವಾಡಿಕೊಂಡು ಇರಬೇಕಾದ ಪುಟಾಣಿಗೆ ಈಗ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಈಕೆಗೆ ಚಿಕಿತ್ಸೆ ನೀಡಲು ಆರ್ಥಿಕ ಶಕ್ತಿ ಇವರಿಗಿಲ್ಲ. ರುಕ್ಮ ಕೂಲಿನಾಲಿ ಮಾಡಿ ಸಿಗುವ ಹಣ ಊಟಕ್ಕೂ ಸಾಕಾಗುವುದಿಲ್ಲ.

ಒಂದೆಡೆ ಮನೆಯಿಲ್ಲ, ಇನ್ನೊಂದೆಡೆ ಪುತ್ರಿಯ ಆರೋಗ್ಯ ಸರಿಯಿಲ್ಲ. ಪತ್ನಿ ಕೆಲಸಕ್ಕೆ ಹೋಗಲು ಸಾಧ್ಯವೇ ಇಲ್ಲ. ಕಾರಣ ಈ ಮಗುವನ್ನು ನೋಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದ್ದರೂ ಈ ಮಗುವಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯವೂ ಸಿಕ್ಕಿಲ್ಲ. ಇಂತಹ ಸ್ಥಿತಿಯಲ್ಲಿ ಬದುಕುವುದು ಹೇಗೆ ಎನ್ನುತ್ತಾರೆ ರುಕ್ಮ. ಕನಿಷ್ಠ ಮೂಲ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕೂಡ ಇಲ್ಲಿಲ್ಲ.

Advertisement

ಅಂಗವಿಕಲರ ನಿಧಿಯಿಂದ ಅನುದಾನ ಮಂಜೂರು
ಈ ಕುಟುಂಬದ ಪರಿಸ್ಥಿತಿ ಕಂಡಾಗ ನೋವಾಗುತ್ತದೆ. ಇವರಿಗೆ ಮೂರು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಚಿಂತನೆ ಇದೆ. ಇದರಲ್ಲಿ 1.40 ಲಕ್ಷ ರೂ. ಅಂಗವಿಕಲರ ನಿಧಿಯಿಂದ ಮಂಜೂರು ಮಾಡಲಾಗಿದೆ. ಉಳಿದ ಹಣವನ್ನು ದಾನಿಗಳ ಮೂಲಕ ಸಂಗ್ರಹಿಸಿ ಬಡ ಕುಟುಂಬಕ್ಕೆ ಸೂರು ನೀಡುವ ಕನಸು ನಮ್ಮದು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎನ್ನುತ್ತಾರೆ ಕಬಕ ಗ್ರಾ.ಪಂ. ಅಧ್ಯಕ್ಷೆ ಪ್ರೀತಾ ಮತ್ತು ಪಿಡಿಒ ಆಶಾ.

ಸರಕಾರದ ಮನೆ
ಪಡೆಯಲು ದಾಖಲೆ ಇಲ್ಲ !
ಕಬಕ ಗ್ರಾ.ಪಂ. ಈ ಕುಟುಂಬಕ್ಕೆ ಸೂರು ನೀಡಲು ಪ್ರಯತ್ನ ಮಾಡಿದರೂ ಸರಕಾರದಿಂದ ಅನುದಾನ ಪಡೆಯಲು ಬೇಕಾದ ಭೂ ದಾಖಲೆಗಳು ಕೂಡ ಇವರ ಬಳಿ ಇಲ್ಲ. ಡಿಸಿ ಮನ್ನಾ ಭೂಮಿಯಲ್ಲಿ ಈ ಕುಟುಂಬಕ್ಕೆ 5 ಸೆಂಟ್ಸ್‌ ನೀಡಿ ಮನೆ ನಿರ್ಮಿಸಲು ಪ್ರಯತ್ನ ನಡೆದರೂ ಅದು ಸಾಧ್ಯವಾಗಿಲ್ಲ. ದಲಿತ ಸೇವಾ ಸಮಿತಿ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ನಿವೇಶನಕ್ಕಾಗಿ ಮನವಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next