Advertisement

ಉತ್ತರ ಕರ್ನಾಟಕದ ವಿಶಿಷ್ಟ ಆಚರಣೆ ಜೋಕುಮಾರ ಹಬ್ಬ

05:39 PM Sep 22, 2020 | Karthik A |

ವಿಶೇಷವಾಗಿ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಗಣೇಶ ಬಂದು ಹೋದ ಅನಂತರ ಗಂಗಾಮತದ ವಂಶಸ್ಥರಾದ ಅಂಬಿಗರು, ಮಡಿವಾಳರು, ಬಾರಿಕೇರರು, ತಳವಾರರು, ವಾಲ್ಮೀಕಿ ಜನಾಂಗ, ಕೋಲಕಾರ, ಕಬ್ಬಲಿಗರ, ಅಂಬಿಗರ ಹೆಣ್ಮಕ್ಕಳು, ಬೇವಿನ ಸೊಪ್ಪು ತುಂಬಿದ ಬುಟ್ಟಿಯಲ್ಲಿ ಮಣ್ಣಿನ ಮೂರ್ತಿಯೊಂದನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ದವಸ ಧಾನ್ಯಗಳನ್ನು ಪಡೆಯುತ್ತಾರೆ.

Advertisement

ಇದು ಉತ್ತರ ಕರ್ನಾಟಕದಲ್ಲಿ ಆಚರಣೆ­ಯಲ್ಲಿರುವ ಜೋಕುಮಾರನ ಹಬ್ಬ. ಈತನ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ. ಇದು ಭಾದ್ರಪದ ಶುದ್ದ ನವಮಿಯಿಂದ ಪೌರ್ಣಿಮೆಯವರೆಗೂ ಅಂದರೆ ಏಳು ದಿನಗಳವರೆಗೆ ಆಚರಿಸುವ ಜಾನಪದ ಹಬ್ಬವಾಗಿದೆ.

ಜೋಕುಮಾರನನ್ನು ಕುಂಬಾರರ ಮನೆಯ ಮಣ್ಣಿನಲ್ಲಿ ಮಾಡುತ್ತಾರೆ. ಅಗಲ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿ, ಜನನೇಂದ್ರಿಯವುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ಹೆಣ್ಮಕ್ಕಳು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಾರೆ. ಜೋಕುಮಾರನ ಹುಟ್ಟು, ಸಾವು, ಪುಂಡತನ, ಕಾಮ ಹೀಗೆ ಇತರೆ ಅವನ ಸ್ವಭಾವಗಳ ಕುರಿತಾದ ಹಾಡುಗಳನ್ನು ರಾಗ ಬದ್ಧವಾಗಿ ಹಾಡುತ್ತಾರೆ.

ಮನೆ ಮುಂದೆ ಬಂದ ಜೋಕುಮಾರನಿಗೆ ಮನೆಯವರು ಮನೆಯಲ್ಲಿರುವ ಚಿಕ್ಕಾಡ, ಗುಂಗಾಡ(ಸೊಳ್ಳೆ), ತಿಗಣೆಗಳೆಲ್ಲವೂ ನಿನ್ನೊಂದಿಗೆ ಹೋಗಲಿ ಎಂದು ಇವನಿಗೆ ಮೆಣಸಿನ ಕಾಯಿ ಉಪ್ಪು ನೀಡುತ್ತಾರೆ. ಅಲ್ಲದೇ ಜೋಳ, ಆಹಾರ ಪದಾರ್ಥಗಳನ್ನು ನೀಡಿ ಪೂಜಿಸುತ್ತಾರೆ. ಉತ್ತಮ ಮಳೆ ನೀಡಿ ಸಮೃದ್ಧವಾದ ಬೆಳೆ ನೀಡೆಂದು ಬೇಡಿಕೊಳ್ಳುತ್ತಾರೆ. ಜೋಕುಮಾರನನ್ನು ಹೊತ್ತ ಹೆಣ್ಣುಮಕ್ಕಳು ರೈತರಿಗೆ ಪುನಃ ಜೋಕುಮಾರನ ಪ್ರಸಾದವೆಂದು ಅಂಬಲಿಯನ್ನು ಕೊಡುವರು. ಇದನ್ನೇ ರೈತರು ತಮ್ಮ ಹೊಲಗಳಿಗೆ ಹೋಗಿ ಚರಗವೆಂದು ಚೆಲ್ಲುತ್ತಾರೆ. ಈ ಸಂಪ್ರದಾಯ ಇಂದಿಗೂ ಅಂಬಲಿಚರಗವೆಂದು ಪ್ರಸಿದ್ಧಿಯಿದೆ.

ಅಲ್ಪಾಯುಷಿಯಾದ ಜೋಕುಮಾರ್‌ನನ್ನು ಮುಂದಿನ ಹುಣ್ಣಿಮೆಯ ದಿನ ರಾತ್ರಿ ಊರಿನ ಹರಿಜನಕೇರಿಯಲ್ಲಿಟ್ಟು ಈತನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತಾ ಹಾಡುತ್ತಾರೆ. ಹೆಣ್ಮಕ್ಕಳ ಸೆರಗು ಮುಳ್ಳಿಗೆ ತಾಗುತ್ತದೆ. ಜೋಕುಮಾರನೇ ಸೀರೆ ಎಳೆದನೆಂದು ಗಂಡಸರು ಆತನನ್ನು ಒನಕೆಯಿಂದ ಹೊಡೆಯುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ಉತ್ತಮ ಮಳೆಗಾಲವೆಂದು, ಬೋರಲು ಬಿದ್ದರೆ ಬರಗಾಲವೆಂದು ಹಳ್ಳಿಗಳಲ್ಲಿ ನಂಬುತ್ತಾರೆ. ಅನಂತರ ರುಂಡ-ಮುಂಡಗಳನ್ನು ಅಗಸರು ಊರಿಮುಂದಿನ ಹಳ್ಳ ಅಥವಾ ಕೆರೆ ಒಯ್ದು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಮುಚ್ಚಿ ಬರುತ್ತಾರೆ.

Advertisement

ಆಗ ಜೋಕುಮಾರನು ನರಳುತ್ತಾನೆ ಇದರಿಂದ ತಮಗೆ ಅಪಾಯವಾಗುವುದು ಎಂದು ಅಗಸರು ಮೂರು ದಿನಗಳ ಕಾಲ ತಮ್ಮ ಬಟ್ಟೆ ಒಗೆಯುವ ಕಾಯಕವನ್ನು ನಿಲ್ಲಿಸುತ್ತಾರೆ. ನಾಲ್ಕನೇ ದಿನ ಆತನನ್ನು ಸಂತೈಸಲು ಕರ್ಮಾದಿ ಕಾಯಕ ಮಾಡುತ್ತಾರೆ. ಜೋಕುಮಾರ ಸತ್ತು ಪರಮಾತ್ಮನ ಹತ್ತಿರ ಹೋಗಿ ಭೂಲೋಕದಲ್ಲಿ ಮಳೆ ಬೆಳೆ ಸರಿ ಇಲ್ಲ ಅವರಿಗೆ ಮಳೆಯ ಆವಶ್ಯಕತೆ ಇದೆ ಎಂಬ ವರದಿ ಮಾಡುತ್ತಾನೆ. ಆದ್ದರಿಂದ ಜೋಕುಮಾರ ಮಳೆ ಕೊಡಿಸುವ ದೇವರು ಎಂಬ ನಂಬಿಕೆ.

ಸಂತಾನ ಭಾಗ್ಯವಿಲ್ಲದವರು ಜೋಕುಮಾರನ ಬಾಯಿಗೆ ಬೆಣ್ಣೆ ಹಚ್ಚಿದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು ಎಂಬ ನಂಬಿಕೆ. ಜತೆಗೆ ದನಕರುಗಳಿಗೆ ಯಾವುದೇ ರೋಗ ಬಾರದೆಂದು ಜೋಕುಮಾರನ ಬುಟ್ಟಿಯಲ್ಲಿನ ಬೇವಿನ ತಪ್ಪಲವನ್ನು ಹಕ್ಕಿಯಲ್ಲಿ (ಕೊಟ್ಟಿಗೆ) ಸುಟ್ಟು ಹೋಗೆ ಹಾಕುತ್ತಾರೆ. ಇಂದಿನ ಆಧುನಿಕತೆಯ ಜೀವನ ಶೈಲಿಯಲ್ಲಿ ಹಬ್ಬಗಳ ಆಚರಣೆಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತಿರುವುದು ವಿಷಾದಕರ. ಪ್ರಸ್ತುತ ದಿನಗಳಲ್ಲಿ ಜೋಕುಮಾರ ಹಬ್ಬ ವಿಶಿಷ್ಟ ಆಚರಣೆ ಉ.ಕ. ಭಾಗದಲ್ಲಿ ಇಂದಿಗೂ ಜೀವಂತವಾಗಿದೆ. ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಇಂದಿನ ಆಧುನಿಕತೆಯಲ್ಲಿಯೂ ಸಹ ಇಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ.

  ಮಲ್ಲಿಕಾರ್ಜುನ ಮ. ಶಿವಳ್ಳಿ, ಕೆ.ಎಲ್‌.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ, ಹುಬ್ಬಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next