Advertisement
ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಕಳ್ಳರನ್ನು ಹಿಡಿಯುವ ರೀತಿಯಲ್ಲಿ, ಯಾರಿಗೂ ಕಾಣದಂತೆ ರಸ್ತೆಯ ಮರೆಯಲ್ಲಿ ನಿಂತು ವಾಹನ ಸವಾರರನ್ನು ಹಿಡಿದು ತೊಂದರೆ ಕೊಡುವುದು ಬೇಡ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯಕ್ತ ಪಿ.ಹರಿಶೇಖರನ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
Related Articles
Advertisement
ಪಾರ್ಕಿಂಗ್ ಪಾಲಿಸಿಯಲ್ಲಿ ದಂಡ ವಸೂಲಾತಿಯೇ ಮುಖ್ಯವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿರುವ ಹರಿಶೇಖರನ್, ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಮ್ಮ ಅಧೀನ ಸಿಬ್ಬಂದಿಗೆ ತಾಕೀತು ಮಾಡುವಂತೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅನಗತ್ಯ ಬ್ಯಾರಿಕೇಡ್ ಹಾಕಬೇಡಿ: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಹಾಗೂ ಸಂಚಾರ ನಿಯಮಗಳ ಉಲ್ಲಂ ಸುವವರ ವಿರುದ್ಧ ನಡೆಸಲಾಗುವ ವಿಶೇಷ ಕಾರ್ಯಾಚರಣೆ ವೇಳೆ ಅನಗತ್ಯ ಬ್ಯಾರಿಕೇಡ್‌ಗಳನ್ನು ಹಾಕಬೇಡಿ. ಇದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗುವ ಸಾಧ್ಯತೆಯಿದೆ. ಜತೆಗೆ, ಈಗಾಗಲೇ ರಸ್ತೆ ಮಧ್ಯೆ ಅನಾವಶ್ಯಕ ಬ್ಯಾರಿಕೇಡ್‌ಗಳಿದ್ದರೆ ತೆರವುಗೊಳಿಸಿ ಎಂದು ಸಲಹೆ ನೀಡಿದ್ದಾರೆ.
ಆರೋಪ ಬಂದರೆ ಇನ್ಸ್‌ಪೆಕ್ಟರ್ ಮೇಲೆ ಕ್ರಮ: ಆಯಾ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟ್ರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಅವರ ಸಮಸ್ಯೆಗಳನ್ನು ಆಲಿಸಿ ಠಾಣಾ ಹಂತದಲ್ಲಿಯೇ ಪರಿಹರಿಸಬೇಕು. ತಮ್ಮ ಠಾಣೆಗೆ ಬೇಕಾದ ಮೂಲ ಸೌಕರ್ಯಗಳ ಬೇಡಿಕೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು. ಇದಲ್ಲದೆ, ತಮ್ಮ ಠಾಣೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಂಡು ಕೇಳಿದ ತಕ್ಷಣ ಒದಗಿಸಬೇಕು.
ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಅಗತ್ಯವಿರುವ ಪರಿಕರಗಳ ಸಂಬಂಧ ಪ್ರಸ್ತಾವನೆ ಸಲ್ಲಿಸಬೇಕು. ಠಾಣೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಅನಗತ್ಯ ಕಿರುಕುಳ ನೀಡುತ್ತಿರುವ ವಿಚಾರ ಗಮನಕ್ಕೆ ಬಂದರೆ ಠಾಣಾ ಇನ್ಸ್‌ಪೆಕ್ಟರ್‌ಗಳೇ ನೇರ ಹೊಣೆಯೆಂದು ಪರಿಗಣಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಆಫ್ರಿಕನ್ನರ ಮೇಲೆ ಕಣ್ಣಿಡಿ: ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ ಸಿಬ್ಬಂದಿಯಂತೆ, ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿ ವಿದ್ಯಾರ್ಥಿಗಳು, ಪ್ರಮುಖವಾಗಿ ಆಫ್ರಿಕನ್ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿಟ್ಟುಕೊಂಡಿರಬೇಕು. ವಿದೇಶಿ ವಿದ್ಯಾರ್ಥಿಗಳು ಸಂಚಾರ ನಿಯಮ ಉಲ್ಲಂ ಸಿದರೆ ಅಥವಾ ಅವರಿಗೆ ಅಪರಾಧ ಕೃತ್ಯಗಳ ಹಿನ್ನೆಲೆಯಿದ್ದರೆ ಅವರ ಬಗ್ಗೆ ಹೆಚ್ಚು ನಿಗಾ ವಹಿಸರಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಸಂಚಾರ ಪೊಲೀಸರು ಮತ್ತಷ್ಟು “ಜನಸ್ನೇಹಿ’ಯಾಗಿ ಕಾರ್ಯನಿರ್ವಹಿಸಲು ಸೂಚನೆಗಳನ್ನು ನೀಡಲಾಗಿದೆ. ಜತೆಗೆ, ರಸ್ತೆ ತಿರುವು, ಮರೆಯಲ್ಲಿ ನಿಂತು ವಾಹನ ಸವಾರರನ್ನು ಹಿಡಿಯಬೇಡಿ ಎಂದೂ ಸೂಚನೆ ನೀಡಲಾಗಿದೆ.-ಪಿ.ಹರಿಶೇಖರನ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ * ಮಂಜುನಾಥ್ ಲಘುಮೇನಹಳ್ಳಿ