Advertisement

ಜೋಯಿತಾ ಬ್ಯೂಟಿ ಪಾರ್ಲರ್‌

01:23 PM Aug 30, 2017 | |

ಆತ ಸಿಟ್ಟಿನಿಂದ ಕಿಡಿಕಿಡಿಯಾಗಿದ್ದ. ಎದುರಿಗಿದ್ದ ಹೆಂಡತಿಗೆ ಮನಬಂದಂತೆ ಹೊಡೆಯುತ್ತಾ “ಹೇಳು, ಡೌರೀನ ಯಾವತ್ತು ತಂದ್ಕೊಡ್ತೀಯ?’ ಎಂದು ಪ್ರಶ್ನೆ ಹಾಕಿದ್ದ. ಈ ಅಮಾಯಕಿ- “ಅದು ಎಲ್ಲಿ ಸಿಗುತ್ತೆ ಹೇಳ್ರಿ, ಹೋಗಿ ತಂದುಕೊಡ್ತೀನಿ ಎಂದಿದ್ದಳು’…

ಅಮ್ಮನ ಸೀರೆಯನ್ನು ಮರದ ಕೊಂಬೆಗಳಿಗೆ ಕಟ್ಟಿಕೊಂಡು ಜೋಕಾಲಿ ಆಡಿದ್ದು, ಕುಂಟೋ ಬಿಲ್ಲೆ ಆಡುವಾಗ ಎಡವಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದು, ನವಿಲುಗರಿಯನ್ನು ಪುಸ್ತಕದ ಮಧ್ಯೆ ಅಡಗಿಸಿಟ್ಟು ಅದು ಮರಿ ಹಾಕಿದೆಯಾ ಎಂದು ಗಂಟೆಗೊಮ್ಮೆ ಕದ್ದು ನೋಡಿದ್ದು, ಮಾವಿನಕಾಯಿ ಕೀಳಲು ಹುಡುಗರೊಂದಿಗೆ ಹೋಗಿ ಅಮ್ಮನ ಕೈಗೆ ಸಿಕ್ಕುಬಿದ್ದು ಪೆಟ್ಟು ತಿಂದದ್ದು, ಓದಲು ಕುಳಿತಿದ್ದಾಗಲೇ ಕಳ್ಳ ಪೊಲೀಸ್‌ ಆಟವಾಡಿ ಎಂಜಾಯ್‌ ಮಾಡಿದ್ದು… ಬಾಲ್ಯ ಎಂದಾಕ್ಷಣ ಎಲ್ಲರಿಗೂ ಇಂಥ ಮಧುರ ಪ್ರಸಂಗಗಳೇ ನೆನಪಾಗುತ್ತವೆ ತಾನೆ?  ಆದರೆ, ನನ್ನ ಬದುಕಲ್ಲಿ ಇಂಥ ಯಾವ ಘಟನೆಯೂ ನಡೆಯಲಿಲ್ಲ. ಬಾಲ್ಯವೆಂಬುದು ನನ್ನ ಪಾಲಿಗೆ ನರಕದಂತೆ ಮಾತ್ರ ಕಾಣಿಸಿತು. ನೆರೆಹೊರೆಯವರು, ಬಂಧುಗಳು, ತೀರಾ ಆಕಸ್ಮಿಕವಾಗಿ ಎದುರಾದವರು… ಇವರ್ಯಾರೂ ನನ್ನಲ್ಲಿ ಒಂದು ಮಧುರ ಅನುಭೂತಿಯನ್ನು ಉಂಟುಮಾಡಲೇ ಇಲ್ಲ. ಬಾಲ್ಯದಲ್ಲಿ ನನ್ನೊಳಗೆ ಸಾವಿರ ಕನಸುಗಳ, ಸಾವಿರ ಬಣ್ಣಗಳ ಚಿತ್ರವಿತ್ತು. ಎದುರಾದ ದುಷ್ಟರೆಲ್ಲಾ ಅದನ್ನು ಪರಪರನೆ ಹರಿದು ಹಾಕಿ ಹೋಗಿಬಿಟ್ಟರು. ನನ್ನೆದೆಯೊಳಗೆ ನವಿಲಿತ್ತು. ಅದು ಕುಣಿಯಲು ಸಿದ್ಧವಾದಾಗಲೇ ಸುತ್ತಲೂ ಇದ್ದ ಮಂದಿ ನಿರ್ದಯವಾಗಿ ಪುಕ್ಕಗಳನ್ನು ಕಿತ್ತುಹಾಕಿ ಬಿಟ್ಟರು.

Advertisement

ಈ ಸಂದರ್ಭದಲ್ಲಿ ನನಗಿದ್ದ ದೊಡ್ಡ ಸಂಭ್ರಮವೆಂದರೆ, ನನ್ನ ಶಾಲೆ. ಅಲ್ಲಿ ಎಲ್ಲ ಸಂಕಟವನ್ನೂ ಮರೆತು ಬಿಡುತ್ತಿದ್ದೆ. ಅವತ್ತೂಂದು ದಿನ ಪಿಕ್‌ನಿಕ್‌ಗೆ ಹೋಗೋಣ. ಮನೇಲಿ ವಿಷಯ ತಿಳಿಸಿ, ಒಂದು ದಿನಕ್ಕೆ ಆಗುವಷ್ಟು ಡ್ರೆಸ್‌ ತಗೊಂಡು ಬನ್ನಿ ಎಂದು ಅಧ್ಯಾಪಕರು ಹೇಳಿದರು. ಮನೆಗೆ ಬಂದವಳೇ- ನನ್ನ ಫ್ರೆಂಡ್ಸೆಲ್ಲಾ ಪಿಕ್‌ನಿಕ್‌ಗೆ ಹೋಗ್ತಿದಾರೆ. ನಾನೂ ಹೋಗ್ತೀನೆ, ಕಳಿಸಿಕೊಡಿ ಎಂದು ಪ್ರಾರ್ಥಿಸಿದೆ. ಹೆತ್ತವರು, ಏನೊಂದೂ ಮಾತನಾಡದೆ ಸುಮ್ಮನಾದರು.

ಹೀಗೇ ಐದಾರು ದಿನಗಳು ಕಳೆದವು. ಪಿಕ್‌ನಿಕ್‌ ಹೋಗುವ ದಿನ ಹತ್ತಿರಾಗುತ್ತಾ ಬಂತು. ನನ್ನ ತರಗತಿಯ ಹುಡುಗಿಯರು ಒಬ್ಬೊಬ್ಬರೇ ಹಣ ಪಾವತಿಸಿ ಹೆಸರು ದಾಖಲಿಸುತ್ತಿದ್ದರು. ನಮ್ಮ ಮನೆಯಲ್ಲಿ ಒಂದು ಹೊತ್ತಿನ ಅನ್ನ ಸಂಪಾದನೆಯೂ ಕಷ್ಟವಿತ್ತು. ಹಾಗಾಗಿ, ಅಪ್ಪ- ಅಮ್ಮನ ಮೂಡ್‌ ಚೆನ್ನಾಗಿರುವ ಸಂದರ್ಭದಲ್ಲಿ ಮಾತ್ರ ಹಣ ಕೇಳುವುದೆಂದು ನಿರ್ಧರಿಸಿ ನಾನು ಮೌನವಾಗಿದ್ದೆ. ಅದೊಂದು ಮಧ್ಯಾಹ್ನ, ಅಮ್ಮ ಇದ್ದಕ್ಕಿದ್ದಂತೆಯೇ ಬೇಗ ಬೇಗ ಬಟ್ಟೆ ಹಾಕ್ಕೋ, ಹೋಗೋಣ ಎಂದು ಹೊಸ ಬಟ್ಟೆಗಳನ್ನು ಮುಂದಿಟ್ಟಳು. ಪಿಕ್‌ನಿಕ್‌ನ ಕನಸಿನಲ್ಲೇ ಮುಳುಗಿದ್ದ ನಾನು, “ಟೂರ್‌ಗೆ ಕಳಿಸ್ತೀಯ ಅಲ್ವೇನಮ್ಮ?’ ಎಂದು ಆಸೆಯಿಂದ ಕೇಳಿದೆ. ಬೇಗ ರೆಡಿಯಾಗು ಮಗಳೇ, ಟೈಮ್‌ ಆಗುತ್ತೆ ಎಂದಳು ಅಮ್ಮ. ಅಬ್ಟಾ, ಕಡೆಗೂ ಕನಸು ನನಸಾಯಿತು ಎಂಬ ಸಡಗರದಲ್ಲಿ ಚಕಚಕನೆ ಸಿದ್ಧಳಾಗಿ ಜಿಂಕೆಯಂತೆ ಜಿಗಿದಾಡುತ್ತಾ ಅಮ್ಮನೊಂದಿಗೆ ಹೊರಟೆ. ನನ್ನೊಂದಿಗೆ ಕುಟುಂಬದವರೆಲ್ಲಾ ಹೊರಟು ನಿಂತರು. ಓಹ್‌, ಇವರೆಲ್ಲಾ ನನ್ನನ್ನು ಬೀಳ್ಕೊಡಲು ಬರುತ್ತಿದ್ದಾರೆ ಎಂದು ಊಹಿಸಿಕೊಂಡು ಖುಷಿಪಟ್ಟೆ.

“ಅಯ್ಯೋ, ಇದೇನಾಗಿ ಹೋಯ್ತು? ನಾನು ಬಂದಿದ್ದಾದ್ರೂ ಎಲ್ಲಿಗೆ’ ಎಂದು ಪ್ರಶ್ನಿಸುವ ಮೊದಲೇ ನನ್ನ ಮದುವೆ ಆಗಿಹೋಗಿತ್ತು, ಆಗಿನ್ನೂ ನನಗೆ ಕೇವಲ 12 ವರ್ಷ. ಮದುವೆ ಎಂಬುದರ ಅರ್ಥವಿರಲಿ, ಯವ್ವನ ಎಂದರೆ ಏನು ಎಂಬುದರ ಅರ್ಥವೂ ನನಗೆ ಆಗಿರಲಿಲ್ಲ. ಅಂಥ ಸಂದರ್ಭದಲ್ಲೇ- “ಅಡ್ಜಸ್ಟ್‌ ಮಾಡಿಕೊಂಡು ಜೀವನ ಮಾಡು’ ಎಂದು ಹೇಳಿ ನನ್ನ ಹೆತ್ತವರು ಹೋಗಿಬಿಟ್ಟರು.

ಮೊದಲ ಒಂದು ವಾರ ವಿಶೇಷವೇನೂ ನಡೆಯಲಿಲ್ಲ. ಆದರೆ, ಎರಡನೇ ವಾರವೇ ನನ್ನ ಗಂಡ ನನ್ನನ್ನು ಮನಬಂದಂತೆ ಥಳಿಸಿದ. ಮಧ್ಯೆ ಮಧ್ಯೆ ವರದಕ್ಷಿಣೆ ತಂದ್ಕೊಡು ಎಂದು ಅಬ್ಬರಿಸುತ್ತಿದ್ದ. ಅವತ್ತಿನ ಸಂದರ್ಭದಲ್ಲಿ ವರದಕ್ಷಿಣೆ ಎಂದರೆ ಏನೆಂದೇ ನನಗೆ ಗೊತ್ತರಲಿಲ್ಲ. ಆ ನಂತರದಲ್ಲಿ, ವಿನಾಕಾರಣ ಜಗಳ ತೆಗೆಯುವುದು ಮತ್ತು ದನಕ್ಕೆ ಹೊಡೆದಂತೆ ಹೊಡೆಯುವುದು ನನ್ನ ಗಂಡನ ಚಾಳಿಯಾಯಿತು. ಈ ಮಧ್ಯೆ ಒಂದೊಂದು ದಿನ ಮಾತ್ರ ಅವನು ತುಂಬಾ ಒಳ್ಳೆಯವನಂತೆ ಕಾಣಿಸಿಕೊಳ್ಳುತ್ತಿದ್ದ. ನನ್ನನ್ನು ರಮಿಸುತ್ತಿದ‌. ಇದೆಲ್ಲಾ ತಿಂಗಳಲ್ಲಿ ಐದಾರು ದಿನಗಳಷ್ಟೇ. ಉಳಿದ ದಿನಗಳಲ್ಲಿ ನಾನು ಗೋಳಾಡುತ್ತಿದ್ದರೂ ಲೆಕ್ಕಿಸದೆ ಹೊಡೆಯುವುದಷ್ಟೇ ಅವನ ಕೆಲಸವಾಗಿತ್ತು. ವರದಕ್ಷಿಣೆ ಯಾವತ್ತು ಕೊಡ್ತೀಯಾ? ಹೇಳು, ವರದಕ್ಷಿಣೆ ಯಾವಾಗ ತಂದುಕೊಡ್ತೀಯ? ಎಂಬುದೇ ಅವನ ಪ್ರಶ್ನೆಯಾಗಿರುತ್ತಿತ್ತು. ನಾನು ಅದೆಂಥ ಪೆದ್ದಿಯಾಗಿದ್ದೆ ಅಂದರೆ, ವರದಕ್ಷಿಣೆ ಎಂದರೆ ಅಂಗಡಿಯಲ್ಲಿ ಸಿಗುವ ವಸ್ತುವೇನೋ ಎಂದು ಭಾವಿಸಿ- ಅದು ಎಲ್ಲಿ ಸಿಗುತ್ತೆ ಹೇಳ್ರಿ, ಹೋಗಿ ತಂದುಕೊಡ್ತೇನೆ. ನಿಮ್ಮ ದಮ್ಮಯ್ಯ ಕಣ್ರೀ. ನೋವಾಗುತ್ತೆ, ಹೊಡೆಯಬೇಡಿ ಎಂದು ಬೇಡಿಕೊಳ್ಳುತ್ತಿದ್ದೆ. 

Advertisement

ಈ ನಡುವೆಯೇ ನಾನು ಹೆಣ್ಣು ಮಗುವಿನ ತಾಯಿಯಾದೆ. ಕೇವಲ 13 ವರ್ಷಕ್ಕೇ, ಉಳಿದ ಹೆಣ್ಣು ಮಕ್ಕಳೆಲ್ಲ ದೊಡ್ಡವರಾಗುವ ವಯಸ್ಸಿಗೇ ನಾನು ತಾಯಿಯೇ ಆಗಿಬಿಟ್ಟಿದ್ದೆ. ಆಗಲೂ ಅಷ್ಟೇ. ನನ್ನ ಹೆತ್ತವರು, ಹೀಗೆ ಬಂದು ಹಾಗೆ ಹೋಗಿಬಿಟ್ಟರು. ನಮಗೇ ತಿನ್ನಲು ಗತಿಯಿಲ್ಲ, ಏನ್ಮಾಡೋದು ಮಗಳೇ..! ಎಂದು ಕಣ್ಣೀರು ಹಾಕಿಯೇ ಹೋದರು. ಆನಂತರದಲ್ಲಿ, ನನ್ನ ಗಂಡನ ಕ್ರೌರ್ಯ ಮತ್ತಷ್ಟು ಹೆಚ್ಚಿತು. ನೋವಿನ ಸಂಗತಿಯೆಂದರೆ- ನನ್ನ ಅತ್ತೆ ಮಾವ ನನ್ನನ್ನು ಬಿಡಿಸಿಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿರಲಿಲ್ಲ. ಕೇಳಿದಷ್ಟು  ವರದಕ್ಷಿಣೆ ತಂದುಕೊಡೋದಾದ್ರೆ ಅವಳು ಮನೇಲಿ ಇರಲಿ. ಇಲ್ಲಾಂದ್ರೆ ಅವಳನ್ನೂ, ಆ ದರಿದ್ರ ಮಗುವನ್ನೂ ಆಚೆಗೆ ನೂಕು ಎಂದು ಅವರು ಕೂತಲ್ಲಿಂದಲೇ ಆದೇಶ ಹೊರಡಿಸುತ್ತಿದ್ದರು.

ನನ್ನ ವಯಸ್ಸು ತುಂಬಾ ಚಿಕ್ಕದಿತ್ತು ನಿಜ. ಆದರೆ, ಮಗಳನ್ನು ಕಂಡಾಕ್ಷಣ ಏನೇನೋ ಸಂಭ್ರಮ ಜೊತೆಯಾಗುತ್ತಿತ್ತು. ಮಗಳಿಗೆ ತುಂಬಾ ಚೆಂದದ ಹೆಸರಿಡಬೇಕು ಎಂಬ ಆಸೆಯಾಯಿತು. ಅದೊಂದು ದಿನ ತವರಿಗೆ ಬಂದವಳೇ ನೇರವಾಗಿ ನಾನು ಓದುತ್ತಿದ್ದ ಶಾಲೆಗೆ ಹೋದೆ. ಅಲ್ಲಿದ್ದ ನನ್ನ ಮೆಚ್ಚಿನ ಅಧ್ಯಾಪಕಿಗೆ ನಡೆದಿದ್ದನ್ನೆಲ್ಲಾ ಹೇಳಿದೆ. ನಂತರ ‘ನನ್ನ ಬದುಕಂತೂ ಹಾಳಾಗಿಹೋಯ್ತು ಮೇಡಂ. ನನಗೆ ಬಂದಂಥ ಯಾವ ಕಷ್ಟವೂ ಈ ಮಗುವಿಗೆ ಬಾರದಿರಲಿ ಎಂದು ಹಾರೈಸಿ. ನನ್ನ ಮಗಳಿಗೆ ಚೆಂದದ ಹೆಸರು ಕಟ್ಟಿ’ ಎಂದು ಪ್ರಾರ್ಥಿಸಿದೆ. ಮಗುವನ್ನು ಎತ್ತಿಕೊಂಡು, ಅದರ ಹಣೆಗೆ ಮುತ್ತಿಟ್ಟು, ನಂತರ ಅದನ್ನೇ ಒಮ್ಮೆ ದಿಟ್ಟಿಸಿ ನೋಡಿದ ಮೇಡಂ ಹೇಳಿದರು; ಜೋಯಿತಾ… ಇದು ನಿನ್ನ ಮಗಳು ಹೆಸರು. “ಜೋಯಿತಾ ಅಂದ್ರೆ ಯಶಸ್ಸು, ಗೆಲವು, ಸಕ್ಸಸ್‌ ಎಂದೆಲ್ಲಾ ಅರ್ಥವಿದೆ. ನಾಳೆಯಿಂದಲೇ ನಿನಗೂ ನಿನ್ನ ಮಗಳಿಗೂ ಯಶಸ್ಸು ಜೊತೆಯಾಗುತ್ತೆ. ಒಳ್ಳೆಯದಾಗಲಿ, ಹೋಗಿ ಬಾ…’

ತವರಿನಿಂದ ನಾನು ಬರಿಗೈಲಿ ಬಂದಿದ್ದನ್ನು ನೋಡಿ ನನ್ನ ಗಂಡ ಕಿಡಿಕಿಡಿಯಾದ. ಅವತ್ತು ಮತ್ತೆ ಮನಬಂದಂತೆ ಹೊಡೆದು, ತೊಲಗಾಚೆ ಎಂದು ಅಬ್ಬರಿಸಿ, ಮಗುವಿನ ಸಮೇತ ನನ್ನನ್ನು ಮನೆಯಿಂದ ಆಚೆ ನೂಕಿ ಬಿಟ್ಟ. ಪೆಟ್ಟುಗಳಿಂದ ಆಗಿದ್ದ ನೋವು, ಹಸಿವು, ಉಳಿಯಲು ಸ್ಥಳವಿಲ್ಲ ಎಂಬ ಅಭದ್ರತೆ, ಭಯ, ಭವಿಷ್ಯದ ಬಗ್ಗೆ ಏನೇನೂ ಗೊತ್ತಿಲ್ಲದ ಸಂಕಟದ ಮಧ್ಯೆಯೇ ಊರಾಚೆಗಿದ್ದ ಮರದ ಕೆಳಗೆ ಆ ರಾತ್ರಿ ಕಳೆದೆ. ಮಗು ನನ್ನನ್ನು ಅವುಚಿಕೊಂಡೇ ನಿದ್ರೆ ಹೋಗಿತ್ತು.

ಮರುದಿನದಿಂದ, ಅದುವರೆಗೂ ನೋಡಿರದಿದ್ದ ಹೊಸದೊಂದು ಪ್ರಪಂಚವನ್ನು, ಹೊಸ ಬಗೆಯ ಜನರನ್ನು ನೋಡಿದೆ. ನಾನು ಹಾಲುಗಲ್ಲದ ಮಗುವಿನೊಂದಿಗೆ ರಸ್ತೆ ಬದಿಯಲ್ಲೇ ಬಾಳಬೇಕಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ದಾರಿ ಹುಡುಕಬೇಕಿತ್ತು. ಪರಿಚಯದ ಹಲವರ ಮುಂದೆ ದೈನೇಸಿಯಂತೆ ಪ್ರಾರ್ಥಿಸಿದೆ. ಅನ್ನ, ಆಶ್ರಯ ಬೇಕೆಂದು ಬೇಡಿಕೊಂಡೆ. ಆಗ, ಪರಿಚಿತರೆಲ್ಲಾ ಕಂಡೂ ಕಾಣದಂತೆ ಹೋಗಿಬಿಟ್ಟರು. ಸ್ವಾರಸ್ಯವೇನು ಗೊತ್ತೇ? ಅದೇ ಸಂದರ್ಭದಲ್ಲಿ, ನನಗೆ ಪರಿಚಯವೇ ಇಲ್ಲದಿದ್ದ ಜನ ಸಹಾಯ ಮಾಡಿದರು. ಅನ್ನ ಕೊಟ್ಟರು. ಆಶ್ರಯ ಕೊಟ್ಟರು. ಮಗುವಿಗೂ- ನನಗೂ ಬಟ್ಟೆಗಳನ್ನೂ ಕೊಟ್ಟರು. ಒಳ್ಳೆಯವರು ಇರುವ ಕಡೆಯಲ್ಲಿ ಕೇಡಿಗರೂ ಇರಲೇಬೇಕಲ್ಲವೆ? ಅಂಥವರು ದಿನವೂ ಎದುರಾಗತೊಡಗಿದರು. ತಿನ್ನುವಂತೆ ನೋಡುವುದು, ಕಣ್ಣು ಹೊಡೆಯುವುದು, ಬರಿ¤àಯಾ ಎಂದು ಕರೆಯುವುದು, ಇದ್ದಕ್ಕಿದಂತೆಯೇ ಡಿಕ್ಕಿ ಹೊಡೆಯುವುದು, ಮೈಸವರುವುದು, ಇಂಥ ಕಿರಿಕಿರಿಗಳೆಲ್ಲ “ಉಸಿರಾಟದಷ್ಟೇ ಸಹಜವಾಗಿ’ ನನ್ನ ಪಾಲಿಗೆ ಬಂದವು. ಆಗೆಲ್ಲಾ ನನ್ನ ಗಂಡನೇ ಹೀಗೆಲ್ಲಾ ವೇಷಧರಿಸಿ ಬಂದನೇನೋ ಅನ್ನಿಸಿಬಿಡುತ್ತಿತ್ತು. ಅಷ್ಟೆ: ಹೆದರಿಕೆ, ಗಾಬರಿ, ದಿಗ್ಭ್ರಮೆಯಿಂದ ಕಿಟಾರನೆ ಕಿರುಚಿಕೊಳ್ಳುತ್ತಿದ್ದೆ. ನನ್ನ ಕರ್ಕಶ ಧ್ವನಿಗೆ ಬೆಚ್ಚಿ ಮಗುವೂ ಜೋರಾಗಿ ಅಳಲು ಆರಂಭಿಸುತ್ತಿತ್ತು. ನಮ್ಮ ಈ ಅನಿರೀಕ್ಷಿತ ವರ್ತನೆಗೆ ಕಂಗಾಲಾಗುತ್ತಿದ್ದ ಕಾಮುಕರು ಪರಾರಿಯಾಗುತ್ತಿದ್ದರು.

ಕಷ್ಟ, ಕಣ್ಣೀರು, ಹತಾಶೆ, ಅವಮಾನಗಳ ನಡುವೆಯೇ ದಿನಗಳು ಉರುಳಿದವು. ಈ ವೇಳೆಗೆ, ಮನೆಮನೆಯಲ್ಲಿ ಕಸಗುಡಿಸುತ್ತ, ಪಾತ್ರೆ ತೊಳೆಯುತ್ತಾ ಹೊಟ್ಟೆ- ಬಟ್ಟೆಗೆ ದಾರಿ ಮಾಡಿಕೊಂಡಿದ್ದೆ. ಈ ಕೆಲಸದ ಮಧ್ಯೆಯೇ ಆ ಮನೆಗಳ ಹೆಂಗಸರ ತಲೆಬಾಚುವ ಕೆಲಸವನ್ನೂ ಮಾಡಬೇಕಿತ್ತು. ಆ ಸಂದರ್ಭದಲ್ಲಿಯೇ ಅವರು ಮೇಕಪ್‌ ಮಾಡಿಕೊಳ್ಳುವುದನ್ನು ಸೂಕ್ಷ್ಮವಾಗಿ ಗಮನಿಸಿದೆ. ಎಲ್ಲ ಕಷ್ಟಗಳ ಮಧ್ಯೆಯೂ ನಾನು ಮಾಡಿದ ಒಳ್ಳೆಯ ಕೆಲಸ ಅಂದರೆ, ಶಾಲೆಗೆ ಸೇರಿಕೊಂಡಿದ್ದು, ಒಂದೊಂದೇ ತರಗತಿ ಮುಗಿಸುತ್ತಿದ್ದಂತೆ, ಹೊಸದೊಂದು ಪ್ರಪಂಚವೇ ಕಣ್ಮುಂದೆ ತೆರೆದುಕೊಳ್ಳಲಾರಂಭಿಸಿತು.

ಈಗ, ನನ್ನ ಪದವಿ ಮುಗಿದಿದೆ! ಮಗಳು ಸ್ಕೂಲಿಗೆ ಹೋಗುತ್ತಿದ್ದಾಳೆ. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ನಾನಿದ್ದೇನೆ. ಅದರಲ್ಲೇ ಒಂದು ಚಿಕ್ಕ ಪೋರ್ಷನ್‌ನಲ್ಲಿ ನನ್ನ ಶಾಪ್‌ ಇದೆ. ಅದರ ಹೆಸರು ಜೋಯಿತಾ ಬ್ಯೂಟಿಪಾರ್ಲರ್‌! ಹಿಂದೆ ಶ್ರೀಮಂತ ಮಹಿಳೆಯರು ಮೇಕಪ್‌ ಮಾಡಿಕೊಳ್ಳುತ್ತಿದ್ದುದನ್ನು ನೋಡಿದ್ದೆನಲ್ಲ, ಅದೇ ನೆನಪನ್ನು ಜೊತೆಗಿಟ್ಟುಕೊಂಡೇ ದುಡಿಯುತ್ತಿದ್ದೇನೆ. ಕೈ ತುಂಬಾ ಕೆಲಸ, ಹೊಟ್ಟೆ ತುಂಬಾ ಊಟ, ಕಣ್ತುಂಬಾ ನಿದ್ರೆ ಇದಿಷ್ಟೂ ನನ್ನದಾಗಿದೆ. ಈಗ ನನ್ನ ಬಂಧುಗಳಾಗಲು ನೂರಾರು ಜನ ಸಿದ್ಧರಿದ್ದಾರೆ. ಕೆಲವರಂತೂ “ಹೊಸ ಬದುಕು ಶುರುಮಾಡಬಾರಾª?’ ಅನ್ನುತ್ತಿದ್ದಾರೆ. “ಹೊಸ ಬದುಕು? ಹಂಗಂದ್ರೆ ಏನು?’ ಎಂದು ತಿರುಗಿ ಕೇಳುತ್ತೇನೆ. ಇನ್ನೊಂದು ಮದುವೆ ಆಗೋದು, ಗಂಡನ ಜೊತೆ ನೆಮ್ಮದಿಯಾಗಿ ಬಾಳ್ಳೋದು ಎಂಬ ಉತ್ತರ ಬರುತ್ತದೆ. ಮೊದಲ ಮದುವೆಯಲ್ಲಿ ಆಗಿರುವ ಗಾಯಗಳೇ ವಾಸಿಯಾಗಿಲ್ಲ. ಹೀಗಿರುವಾಗ ಮತ್ತೂಂದು ಅನಾಹುತಕ್ಕೆ ಮೈ ಒಡ್ಡಬೇಡ ಎಂದು ಒಳ ಮನಸ್ಸು ಪಿಸುಗುಡುತ್ತದೆ. ಮನಸಿನ ಮಾತಿಗೆ ಕಿವಿಗೊಟ್ಟು ಪಾರ್ಲರ್‌ ಸೇರಿಕೊಳ್ಳುತ್ತೇನೆ. ಸಂತೋಷ, ಸಮಾಧಾನ, ಸಂಪಾದನೆ, ಸಂತೃಪ್ತಿ ಮತ್ತು ಸುಖ ನಿದ್ರೆಯನ್ನು ದಯಪಾಲಿಸುವ ಆ ಕೆಲಸ, ನನ್ನನ್ನು ಬಾಚಿ ತಬ್ಬಿಕೊಳ್ಳುತ್ತದೆ…

(ಬಾಂಗ್ಲಾದೇಶದ ಪ್ರಸಿದ್ಧ ಛಾಯಾಗ್ರಾಹಕ ಜಿಎಂಬಿ ಆಕಾಶ್‌, ಸೈಮಾ ಎಂಬ ಸಾಧಕಿಯ ಕುರಿತು ಬರೆದ ಬರಹದ ವಿಸ್ತೃತ ಭಾವಾನುವಾದ)

ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next