Advertisement
“ಒಂಟಿತನ’ ಈ ಪದದಲ್ಲಿಯೇ ನೋವಿನ ಸೆಲೆ ಇದೆ. “ಏಕಾಂಗಿ’ ಎಂಬ ಪದದಲ್ಲಿ ಹೋರಾಟದ ಸ್ಫೂರ್ತಿ ಕಂಡರೂ ಅದು ಸಹ ಹೆಚ್ಚು ಪ್ರತಿಪಾದಿಸುವುದು ಬೇಸರವನ್ನೇ. ಒಂಟಿಯಾಗಿರುವುದು ಬದುಕಿನಲ್ಲಿ ದುಃಖ ತರುತ್ತದೆ ಎಂಬ ಭಾವನೆ ಅನೇಕರಲ್ಲಿ ಇದ್ದರೂ ಈ ಬದುಕು ಖುಷಿಯನ್ನು ತಂದುಕೊಡುತ್ತದೆ ಎನ್ನುತ್ತಾರೆ ಸಂಶೋಧಕರು.ಒಂಟಿ ಬಾಳ್ವೆ ನಡೆಸುತ್ತಿರುವವರು ಕಡಿಮೆ ಸಂತುಷ್ಟಿಯವರು ಎನ್ನುವುದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹತ್ತಾರು ವರ್ಷಗಳ ಕಾಲ ಏಕಾಂಗಿಯಾಗಿ ಬದುಕುವವರು ಎಲ್ಲರಂತೆ ಸಂತಸದಿಂದ ಇರಬಲ್ಲರು ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಒಂಟಿಯಾಗಿರುವುದು ಸಂಬಂಧಗಳ ನಡುವೆ ಹುಟ್ಟಿಕೊಳ್ಳುವ ಸಂಘರ್ಷ, ಉದ್ವೇಗ, ಒತ್ತಡಗಳಿಂದ ಮುಕ್ತಿ ನೀಡುತ್ತದೆ ಎನ್ನುವುದು ಏಕಾಂಗಿತನದಲ್ಲಿರುವವರ ಅಭಿಮತ. ಅದೇ ರೀತಿ ಕೌಟುಂಬಿಕ ಬಂಧನ ಬಯಸದ ಮಂದಿಯಲ್ಲಿ ಸಾಮಾಜಿಕವಾಗಿ ದೊಡ್ಡ ಗುರಿ ಹೊಂದಿದವರು ಸಂಬಂಧಗಳ ಏರಿಳಿತಗಳ ಕುರಿತು ಚಿಂತಿಸುವುದಿಲ್ಲ. ಆದರೆ ಒಂಟಿ ಬದುಕು ಅವರಲ್ಲಿ ಕ್ರಮೇಣ ಬೇಸರ ಹುಟ್ಟಿಸುತ್ತದೆ. ಅಧಿಕ ವಿಚ್ಛೇದನ ಪ್ರಕರಣಗಳು, ದೂರವಿರುವ ಹೆತ್ತವರು, ಮಕ್ಕಳು, ಗುರಿ ಈಡೇರಿಕೆಗೆ ತಡ ವಿವಾಹ ಮುಂತಾದ ಕಾರಣದಿಂದ ಒಂಟಿಯಾಗಿರುವವರ ಸಂಖ್ಯೆ ಹೆಚ್ಚುತ್ತಿದೆ.
ಒಂಟಿತನ ಹೋಗಲಾಡಿಸಲು ಬಾಳ ಸಂಗಾತಿಯ ಆಯ್ಕೆಗೆ ದೊಡ್ಡ ಕಸರತ್ತನ್ನೇ ನಡೆಸಬೇಕಾಗುತ್ತದೆ. ಮದುವೆ ಅನ್ನುವುದು ಒಂದೆರಡು ದಿನದ್ದಲ್ಲ, ಅದೊಂದು ಜೀವನದ ಕೊನೆಯವರೆಗೂ ನಡೆಯುವ ಸರ್ಕಸ್. ಇದಕ್ಕೆ ಎಲ್ಲರೂ ತಮ್ಮದೇ ಆದ ಕನಸು ಕಟ್ಟಿರುತ್ತಾರೆ. ಮದುವೆ ಆಗಬೇಕೆಂಬ ತೀವ್ರವಾದ ಬಯಕೆ ಇದ್ದೂ ಆಗದವರು ಒಂದು ಕಡೆಯಾದರೆ, ಮದುವೆ ವ್ಯವಸ್ಥೆಯನ್ನೇ ಧಿಕ್ಕರಿಸಿ ಒಂಟಿಯಾಗಿ ಬದುಕಿದವರು ನಮ್ಮ ಸಮಾಜದಲ್ಲಿ ಹಲವು ಮಂದಿ ಇದ್ದಾರೆ. ಏರುವ ವಯಸ್ಸಿನ ಚಿಂತೆ ಇಲ್ಲ, ಆರುವ ಪ್ರೀತಿಯ ಕನವರಿಕೆಯೂ ಇಲ್ಲ. ಅನಗತ್ಯ ಎಂದೆನಿಸುವ ಮಟ್ಟಿಗೆ ಹೆಗಲೇರುವ ಜವಾಬ್ದಾರಿಯಿಂದ ದೂರ ಉಳಿದು ಒಂಟಿಯಾಗಿರುವ ಬ್ಯಾಚುಲರ್‌ಗಳು ಪಾಪ್ಯುಲರ್ ಆಗುತ್ತಿದ್ದಾರೆ. ಬದುಕಿನ ಮುಸ್ಸಂಜೆ
ಪ್ರತಿಯೊಬ್ಬರ ಜೀವನದ ಮಹತ್ತರ ಮಜಲು “ಬದುಕಿನ ಮುಸ್ಸಂಜೆ’. ಇದು ಒಂದು ರೀತಿಯಲ್ಲಿ ಶಾಪವೂ ಹೌದು, ವರವೂ ಹೌದು. ನೌಕರಿಯಿಂದ ನಿವೃತ್ತನಾದೆ, ಮತ್ತೆ ಕೆಲಸ ಇಲ್ಲ ಅಂತ ನೋವು ಪಡುವುದು ಒಂದು ಕಡೆಯಾದರೆ, ಇನ್ನು ದೈನಂದಿನ ಚಟುವಟಿಕೆಗೆ ಮನಸ್ಸು, ದೇಹ ಒಗ್ಗಿಕೊಳ್ಳದೆ ಮನಸ್ಸು ಹಿಡಿತಕ್ಕೆ ಸಿಗದ ತೊಳಲಾಟದಲ್ಲಿ ಸಿಲುಕುವುದು ಮತ್ತೂಂದು ಕಡೆ. ಇನ್ನು ಕೆಲವರು ತಮ್ಮನ್ನು ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಕ್ರಿಯಾಶೀಲತೆಯಲ್ಲಿ ತನು-ಮನಗಳೆರಡೂ ಇದ್ದರೆ ಆ ಸಮಯ ಹೊರೆ ಅನ್ನಿಸುವುದಿಲ್ಲ. ಒಂಚೂರೂ ಎಡರು -ತೊಡರಾದರೂ ಇನ್ನುಳಿದ ಜೀವನ ನರಕಸದೃಶವಾಗುತ್ತದೆ.
Related Articles
Advertisement
ಕಾಯುವಿಕೆ ದಿನದ ಚಟುವಟಿಕೆಯ ಆಶಾಕಿರಣ ಇಳಿ ವಯಸ್ಸಿನ ಮನಸ್ಸು ಪಾರ್ಕ್ ಬೆಂಚ್‌ನ ಅಂಚಿನಲ್ಲಿ ಕುಳಿತು ಸುಂದರ ಸಮಯವನ್ನು ಒಂಟಿಯಾಗಿ ಅನುಭವಿಸುತ್ತಿರುತ್ತದೆ. ಕೆಲವರು ಹೊರಗಿನ ಕೆಲಸ ಇಲ್ಲದಿದ್ದಾಗ ಚಹಾದ ಅಂಗಡಿಯಲ್ಲಿ ಗೆಳೆಯರ ದಂಡು ಬರುತ್ತದೆ ಎಂದು ಗಂಟೆಗಟ್ಟಲೆ ಕಾಯುತ್ತಿರುತ್ತಾರೆ. ಅವರ ಕಾಯುವಿಕೆ ಅವರ ದಿನದ ಚಟುವಟಿಕೆಯ ಆಶಾಕಿರಣ. ಮನೆಯಲ್ಲಿ ಸಿಗದ ಸಂತೋಷ ಹೊರಗಡೆ ಸಿಗುವುದಲ್ಲ ಎಂಬ ಸಂತಸ ಅವರಿಗೆ. ಮಗನ ಬಳಿ ಏನು ಹೇಳಲೂ ಮನಸ್ಸು ಒಪ್ಪದು. ಯಾಕೆಂದರೆ ಸ್ವಾಭಿಮಾನದ ಮನಸ್ಸು ಕೆಣಕುತ್ತಿರುತ್ತದೆ.
“ಸಂಗಾತಿಯಾದರೂ ಇದ್ದರೆ’ ಅಂತ ಮನಸ್ಸು ಒಮ್ಮೊಮ್ಮೆ ಅದರತ್ತ ಸೆಳೆಯುತ್ತಿರುತ್ತದೆ. - ಜಯಾನಂದ ಅಮೀನ್, ಬನ್ನಂಜೆ