Advertisement

ಜಾಧವ್‌ಗಾಗಿ ಜಂಟಿ ಹೋರಾಟ, ಸರ್ಕಾರದ ಜೊತೆ ಕೈಜೋಡಿಸುವುದಾಗಿ ಘೋಷಣೆ

03:45 AM May 22, 2017 | Harsha Rao |

ನವದೆಹಲಿ/ಇಸ್ಲಾಮಾಬಾದ್‌: ಪರಸ್ಪರ ಕಚ್ಚಾಡುತ್ತ ಶೀತಲ ಸಮರದಲ್ಲಿ ಮುಳುಗಿದ್ದ ಪಾಕಿಸ್ತಾನದ ಸರ್ಕಾರ ಮತ್ತು ಸೇನೆ ಇದೀಗ ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಕೈಜೋಡಿಸಲು ಮುಂದಾಗಿವೆ. ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಂಟಿ ಹೋರಾಟ ನಡೆಸುವುದಾಗಿ ಭಾನುವಾರ ಪಾಕ್‌ ಸೇನೆ ಘೋಷಿಸಿದೆ.

Advertisement

ಅದರಂತೆ, ಪಾಕ್‌ ಸರ್ಕಾರದ ಜೊತೆಗೆ ಸೇನೆಯೂ ನ್ಯಾಯಾಲಯದಲ್ಲಿ ಜಾಧವ್‌ ಶಿಕ್ಷೆಯ ಪರವಾಗಿ ವಾದಿಸಲಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನ್ಯಾಷನಲ್‌ ಅಸೆಂಬ್ಲಿ ಸ್ಪೀಕರ್‌ ಸರ್ದಾರ್‌ ಅಯಾಝ್ ಸಾದಿಕ್‌, “ಇದು ನಾವು ಒಗ್ಗಟ್ಟಾಗಬೇಕಾದ ಸಮಯ. ದೇಶದ ಹಿತಾಸಕ್ತಿಯಿಂದ ಸೇನೆ ಮತ್ತು ಸರ್ಕಾರ ಜಂಟಿ ಹೋರಾಟ ನಡೆಸಲಿದೆ,’ ಎಂದಿದ್ದಾರೆ. ಆದರೆ, ಸೇನೆಯು ಸರ್ಕಾರಕ್ಕೆ ಯಾವ ರೀತಿ ಸಹಾಯ ಮಾಡಲಿದೆ ಎಂಬ ಬಗೆಗಿನ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಜಾಧವ್‌ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಕೂಡ ಪಾಕಿಸ್ತಾನದ ಸೇನಾ ನ್ಯಾಯಾಲಯ. ಆದರೆ, ಪಾಕ್‌ನಲ್ಲಿ ಸೇನೆಯು ಅತ್ಯಂತ ಬಲಿಷ್ಠವಾಗಿದ್ದು, ಸರ್ಕಾರದ ವಿರುದ್ಧ ಮೂರು ಬಾರಿ ಕ್ಷಿಪ್ರಕ್ರಾಂತಿ ನಡೆಸಿದೆ. ಪ್ರಧಾನಿ ನವಾಜ್‌ ಷರೀಫ್ ಮತ್ತು ಸೇನೆಯ ನಡುವಿನ ಸಂಬಂಧ ಕೂಡ ಅಷ್ಟಕ್ಕಷ್ಟೆ. ಇತ್ತೀಚೆಗೆ ಇವರ ನಡುವಿನ ಬಿಕ್ಕಟ್ಟು ಜಗಜ್ಜಾಹೀರೂ ಆಗಿತ್ತು. ಆದರೆ, ಈಗ ಜಾಧವ್‌ ವಿಚಾರದಲ್ಲಿ ಸೇನೆ-ಸರ್ಕಾರ ಒಂದಾಗಿರುವುದು ವಿಶೇಷ.

ಭಾರತೀಯ ಪ್ರಜೆ ಬಂಧನ:
ಸೂಕ್ತ ಪ್ರಯಾಣ ದಾಖಲೆಗಳನ್ನು ಹೊಂದಿಲ್ಲ ಎಂಬ ಕಾರಣಕ್ಕಾಗಿ ಭಾರತೀಯ ನಾಗರಿಕರೊಬ್ಬರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಮುಂಬೈ ನಿವಾಸಿಯಾದ ಶೇಖ್‌ ನಬಿ ವಿರುದ್ಧ ವಿದೇಶಿಯರ ಕಾಯ್ದೆ 1946ರ ಅನ್ವಯ ಕೇಸು ದಾಖಲಿಸಲಾಗಿದ್ದು, ಇಸಾಮಾಬಾದ್‌ನ ಕೋರ್ಟ್‌ ಅವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ‡. ಜಾಧವ್‌ ಗಲ್ಲಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ತಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ, ಭಾರತೀಯನ ಬಂಧನದ ಕುರಿತು ನಮಗಿನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಪಾಕ್‌ನಲ್ಲಿರುವ ಭಾರತೀಯ ಹೈಕಮಿಷನ್‌ ತಿಳಿಸಿದೆ.

ಕಾಲಿಯಾ ಕೇಸನ್ನೂ ಐಸಿಜೆಗೆ ಒಯ್ಯಿರಿ
1999ರ ಕಾರ್ಗಿಲ್‌ ಯುದ್ಧದ ವೇಳೆ ಪಾಕಿಸ್ತಾನದ ಸೇನೆಗೆ ಸೆರೆಸಿಕ್ಕಿ ಹತರಾದ ಭಾರತೀಯ ಯೋಧ ಸೌರಭ್‌ ಕಾಲಿಯಾ ಪ್ರಕರಣವನ್ನೂ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯುವಂತೆ ಹಿಮಾಚಲಪ್ರದೇಶದ ನಿವೃತ್ತ ಸೈನಿಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಯುದ್ಧದ ವೇಳೆ ಕಾಲಿಯಾರನ್ನು ಬಂಧಿಸಿದ್ದ ಪಾಕ್‌ ಸೇನೆಯು, ಅವರಿಗೆ ಚಿತ್ರಹಿಂಸೆ ನೀಡಿತ್ತು. ನಂತರ ಅವರ ಛಿದ್ರಗೊಂಡ ದೇಹವನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಜಾಧವ್‌ರಂತೆ ಕಾಲಿಯಾಗೂ ನ್ಯಾಯ ಸಿಗಬೇಕೆಂದರೆ, ಈ ಪ್ರಕರಣವನ್ನೂ ಐಸಿಜೆಗೆ ಕೊಂಡೊಯ್ಯಬೇಕು ಎಂದು ನಿವೃತ್ತ ಯೋಧರು ಆಗ್ರಹಿಸಿªದಾರೆ.

ಎಲ್‌ಒಸಿ ಎನ್‌ಕೌಂಟರ್‌: ಮೂವರು ಯೋಧರು ಹುತಾತ್ಮ
ಶ್ರೀನಗರ:
ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಕ ಒಳನುಸುಳಲು ಯತ್ನಿಸಿದ ಉಗ್ರರೊಂದಿಗೆ ಶನಿವಾರ ಆರಂಭವಾಗಿದ್ದ ಗುಂಡಿನ ಚಕಮಕಿ, ಶೋಧ ಕಾರ್ಯಾಚರಣೆ ಭಾನುವಾರ ಮುಕ್ತಾಯವಾಗಿದೆ. ನಾಲ್ವರು ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿದೆ. ಆದರೆ, ಕಾರ್ಯಾಚರಣೆ ವೇಳೆ ಹುತಾತ್ಮರಾದ ಯೋಧರ ಸಂಖ್ಯೆ ಮೂರಕ್ಕೇರಿದೆ. ಶನಿವಾರವೇ ಇಬ್ಬರು ಯೋಧರು ಅಸುನೀಗಿದ್ದರು ಹಾಗೂ ಇಬ್ಬರು ಉಗ್ರರನ್ನು ಕೊಲ್ಲಲಾಗಿತ್ತು. ಭಾನುವಾರ ಮತ್ತಿಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಈ ವೇಳೆ ಮತ್ತೂಬ್ಬ ಯೋಧ ಕೂಡ ಹುತಾತ್ಮರಾದರು ಎಂದು ಸೇನೆ ತಿಳಿಸಿದೆ.

Advertisement

ಮತ್ತೂಂದು ಸರ್ಜಿಕಲ್‌ ದಾಳಿಯ ಸುಳಿವು
ಪದೇ ಪದೆ ಕಾಲು ಕೆರೆದುಕೊಂಡು ಬರುತ್ತಿರುವ ಪಾಕ್‌ ವಿರುದ್ಧ ಭಾರತವು ಮತ್ತೂಂದು ಸರ್ಜಿಕಲ್‌ ದಾಳಿಗೆ ಸಿದ್ಧವಾಗುತ್ತಿದೆಯೇ? ಹೌದು ಎಂಬಂತಹ ಸುಳಿವನ್ನು ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಹಾಗೂ ಜಿತೇಂದ್ರ ಸಿಂಗ್‌ ನೀಡಿದ್ದಾರೆ. ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದ ಸದಾನಂದಗೌಡ ಅವರು, ಪಾಕ್‌ಗೆ ತಕ್ಕ ಪಾಠ ಕಲಿಸುತ್ತೇವೆ, ಆದರೆ ಅದು ಯಾವ ರೀತಿಯಲ್ಲಿ ಎಂದು ಹೇಳುವುದಿಲ್ಲ ಎಂದಿದ್ದಾರೆ. ಹಾಗೆಯೇ, ಖಾಸಗಿ ಸಮಾವೇಶವೊಂದರಲ್ಲಿ ಮಾತನಾಡಿದ ಜಿತೇಂದ್ರ ಸಿಂಗ್‌ ಅವರು, “ಕಳೆದ ವರ್ಷ ಸರ್ಜಿಕಲ್‌ ದಾಳಿ ನಡೆಸುವಾಗ ನಾವೇನು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದೆವೇ? ಇಲ್ಲ ತಾನೇ. ಎಲ್ಲವೂ ಮುಗಿದ ಮೇಲಷ್ಟೇ ಮಾಹಿತಿ ಹೊರಹಾಕಿದ್ದಲ್ಲವೇ? ಅದೇ ರೀತಿ, ನಮ್ಮ ಯೋಜನೆಯೇನು ಎಂಬುದನ್ನು ಈಗಲೇ ಬಹಿರಂಗಪಡಿಸುವುದಿಲ್ಲ. ಫ‌ಲಿತಾಂಶವನ್ನು ನೀವೇ ನೋಡುತ್ತೀರಿ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next