ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ನಗರ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸರು ಹಾಗೂ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಜಂಟಿಯಾಗಿ ಶನಿವಾರ ರಾತ್ರಿಯಿಡಿ ವಿಶೇಷ ಕಾರ್ಯಾಚರಣೆ ನಡೆಸಿದರು.
ವಿಶೇಷವಾಗಿ ಹೊಂಡಾ ಆಕ್ಟಿವಾ, ಪಲ್ಸರ್ ಬೈಕ್‌ಗಳನ್ನು ತಡೆದು ತಪಾಸಣೆ ನಡೆಸಿದರು. ಈ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ವ್ಯಕ್ತಿಗಳು ಹಾಗೂ ಅವರ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಯಿತು. ನಂತರ ಅವರ ಪೂರ್ವಾಪರ ವಿಚಾರಿಸಿ ವಾಹನಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಬಿಡುಗಡೆ ಮಾಡಿದರು. ಇದರೊಂದಿಗೆ ನಗರದಲ್ಲಿರುವ ನೂರಾರು ಹೊಯ್ಸಳ, ಚಿತಾ ಹಾಗೂ ಇತರೆ ವಾಹನಗಳು ಎಲ್ಲೆಡೆ ಗಸ್ತು ತಿರುಗುತ್ತಿದ್ದವು. ಈ ವಿಶೇಷ ಕಾರ್ಯಾಚರಣೆ ವೇಳೆ 499ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ, ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಹೇಳಿದರು.
120ಕ್ಕೂ ಹೆಚ್ಚು ಕಡೆ ನಾಕಾಬಂದಿ: ಪ್ರತಿ ಶನಿವಾರ ಎಲ್ಲ ವಲಯಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಆದರೆ, ಈ ಬಾರಿ ನಗರದೆಲ್ಲೆಡೆ ಸುಮಾರು 120ಕ್ಕೂ ಹೆಚ್ಚು ಪ್ರಮುಖ ಪ್ರದೇಶಗಳಲ್ಲಿ ನಾಕಾಬಂದಿ ಹಾಕಲಾಯಿತು. ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಎಲ್ಲ ನಾಕಾಬಂದಿ ಸ್ಥಳಗಳಿಗೆ ಖುದ್ದು ಭೇಟಿ ನೀಡಿ, ಅಧಿಕಾರಗಳ ಜತೆ ಕಾರ್ಯಾಚರಣೆ ಬಗ್ಗೆ ಚರ್ಚಿಸಿದರು. ಈ ವೇಳೆ ಕೆಲ ವಾಹನ ಸವಾರರರನ್ನು ಸ್ವತಃ ಆಯುಕ್ತರೇ ವಿಚಾರಣೆ ನಡೆಸಿದರು.
ಸರ, ವಾಹನ ಕಳ್ಳರ ಮೇಲೆ ನಿಗಾ: ಕಳವು ಮಾಡಿದ ವಾಹನಗಳಿಂದಲೇ ಆರೋಪಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಪದೇ ಪದೆ ಅಪರಾಧ ಪ್ರಕರಣಗಳಲ್ಲಿ ತೊಡಗುವ, ರಾತ್ರಿ ವೇಳೆ ಮಾತ್ರ ಸುಲಿಗೆ, ದರೋಡೆ ಮುಂತಾದ ಕೃತ್ಯಗಳನ್ನು ನಡೆಸುವವರಿಗೆ ಈ ಕಾರ್ಯಾಚರಣೆ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
Advertisement
ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್, ಸಿಸಿಬಿ, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಎಲ್ಲ ಡಿಸಿಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಸೇರಿ ಎಲ್ಲ ಹಂತದ ಸಿಬ್ಬಂದಿ ಶನಿವಾರ ರಾತ್ರಿ 11 ಗಂಟೆಯಿಂದ ಮುಂಜಾನೆ ನಾಲ್ಕು ಗಂಟೆವರೆಗೂ ತಮ್ಮ ವ್ಯಾಪ್ತಿಗಳಲ್ಲಿ ಗಸ್ತು ತಿರುಗಿದರು. ನಗರದ ಎಲ್ಲ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸಿದರು.
Related Articles
ಡಿಸ್‌ಪ್ಲೇ ಕಾರ್ಡ್ ಇಲ್ಲದ 63 ಆಟೋ ಜಪ್ತಿ:
ನಗರ ಸಂಚಾರ ಪೊಲೀಸರು ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕ, ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಡಿಸ್‌ಪ್ಲೇ ಕಾರ್ಡ್ ಇಲ್ಲದೆ ಆಟೋ ಚಾಲನೆ ಮಾಡುತ್ತಿದ್ದ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು 63 ಆಟೋ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
Advertisement