ಬೆಂಗಳೂರು: ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿಯ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೇಯರ್ ಎಂ. ಗೌತಮ್‌ಕುಮಾರ್ ಸೂಚನೆ ನೀಡಿದರು.
ಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ರಸ್ತೆ, ಕೆರೆ, ಕಾಲುವೆಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಳೆ ಅನಾಹುತಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅವಶ್ಯಕವಾಗಿದೆ. ಹೀಗಾಗಿ, ಒಳಚರಂಡಿ ನೀರು ಎಲ್ಲೆಲ್ಲಿ ರಾಜಕಾಲುವೆ ಮೂಲಕ ಕೆರೆಗೆ ಸೇರುತ್ತಿದೆ ಎಂಬುದನ್ನು ಜಲಮಂಡಳಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ವರದಿ ಸಿದ್ಧಪಡಿಸಿ ಕೂಡಲೆ ಪರ್ಯಾಯ ಮಾರ್ಗ ನಿರ್ಮಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.
ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ನೀರು ಹೀರುವ ಯಂತ್ರಗಳನ್ನು ಅಳವಡಿಸಬೇಕು. ಈ ಮೂಲಕ ಬಡಾವಣೆಗಳಲ್ಲಿ ಮಳೆ ನೀರು ನಿಲ್ಲದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 88.6 ಕಿ.ಮೀ ಮುಖ್ಯರಸ್ತೆಯಿದ್ದು, ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿರುವ ಪಾದಚಾರಿ ಮಾರ್ಗ, ಕಾಲುವೆ ಹಾಗೂ ರಸ್ತೆ ಗುಂಡಿಗಳನ್ನು ಶೀಘ್ರ ದುರಸ್ತಿಪಡಿಸಬೇಕಿದೆ. ಈ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಅಧಿಕಾರಿಗಳು ಶಿಸ್ತಿನಿಂದ ಕೆಲಸ ಮಾಡಬೇಕು. ಯಾರೊಬ್ಬರೂ ಸಬೂಬು ನೀಡುವಂತಿಲ್ಲ ಎಂದು ಸೂಚನೆ ನೀಡಿದರು.
ಇನ್ನು ಮಳೆಯಿಂದ ಅನಾಹುತಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ತ್ವರಿತವಾಗಿ ಕೆಲಸ ಪ್ರಾರಂಭವಾಗಬೇಕು. ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ಪಟ್ಟಿ ಸಿದ್ಧ ಮಾಡಿ, ಕೂಡಲೆ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದರು.
ಬೇಗೂರು ರಸ್ತೆ ವಿಸ್ತರಣೆ ಪ್ರಕ್ರಿಕೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಅಭಿವೃದ್ಧಿ ಹಕ್ಕು ಹಸ್ತಾಂತರ (ಟಿಡಿಆರ್) ಪತ್ರಗಳನ್ನು ಆಸ್ತಿ ಮಾಲೀಕರಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕೂಡಲೆ ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭಿಸುವಂತೆ ಆದೇಶಿಸಿದರು.
ಉಪ ಮೇಯರ್ ರಾಮ್‌ಮೋಹನ್ ರಾಜ್, ಪಾಲಿಕೆ ಸ್ಥಳೀಯ ಸದಸ್ಯರಾದ ಅರಕೆರೆ ವಾರ್ಡ್ ಭಾಗ್ಯಲಕ್ಷ್ಮೀ ಮುರಳಿ, ಜರಗನಹಳ್ಳಿ ವಾರ್ಡ್ ಬಿ.ಎಂ.ಶೋಭ, ಹೊಂಗಸಂದ್ರ ವಾರ್ಡ್ ಭಾರತಿ ರಾಮಚಂದ್ರ, ವಲಯ ಜಂಟಿ ಆಯುಕ್ತರು, ಮುಖ್ಯ ಇಂಜಿನಿರ್ಯ, ರಾಜಕಾಲುವೆ ವಿಭಾಗದ ಮುಖ್ಯ ಇಂಜಿನಿರ್ಯ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.