Advertisement

ತುಂಡ್‌ ಹೈಕ್ಳ ಜಂಟಿ ಸಾಹಸ

10:13 AM Jan 19, 2020 | Lakshmi GovindaRaj |

ಇಲ್ಲಿಯವರೆಗೆ ಸಂಭಾಷಣೆಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ “ಶ್ರೀ ಭರತ ಬಾಹುಬಲಿ’ ಚಿತ್ರ ಈ ವಾರ ತೆರೆಗೆ ಬಂದಿದೆ. ಅಂದಹಾಗೆ, ಚಿತ್ರದ ಹೆಸರು “ಶ್ರೀ ಭರತ ಬಾಹುಬಲಿ’ ಅಂತಿದ್ದರೂ, ಇತಿಹಾಸ-ಪುರಾಣಗಳಲ್ಲಿ ಬರುವ ಭರತ-ಬಾಹುಬಲಿಗೂ, ಈ ಚಿತ್ರದಲ್ಲಿರುವ ಭರತ-ಬಾಹುಬಲಿಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನೋಡೋಕೆ ಸಿಗೋದು ಪಕ್ಕಾ ನಮ್ಮ-ನಿಮ್ಮ ನಡುವೆ ಇರುವ ಭರತ-ಬಾಹುಬಲಿ ಅನ್ನೋ ತುಂಡ್‌ ಹೈಕ್ಳು.

Advertisement

ಚಿಕ್ಕ ವಯಸ್ಸಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಕಳೆದು ಹೋಗುವ ಪುಟ್ಟ ಹುಡುಗಿ ಶ್ರೀ ವಿದೇಶಿ ದಂಪತಿಗಳ ಕೈಗೆ ಸಿಕ್ಕು ವಿದೇಶ ಸೇರಿಕೊಳ್ಳುತ್ತಾಳೆ. ಅಲ್ಲೆ ಬೆಳೆದು ದೊಡ್ಡವಳಾಗುವ ಶ್ರೀಗೆ ಪದೇ ಪದೇ ಬೀಳುವ ಕನಸೊಂದು ಆಕೆಯನ್ನು ನಿಜ ಜೀವನದಲ್ಲಿ ಮತ್ತೆ ತನ್ನ ಹೆತ್ತವರನ್ನು ಹುಡುಕಿಕೊಂಡು ಭಾರತಕ್ಕೆ ಬರುವಂತೆ ಮಾಡುತ್ತದೆ. ಮತ್ತೂಂದೆಡೆ ಹಳ್ಳಿಯಲ್ಲಿ ಅವರಿವರಿಗೆ ಟೋಪಿ ಹಾಕಿಕೊಂಡು ಆರಾಮಾಗಿ ಓಡಾಡಿಕೊಂಡಿರುವ ಭರತ, ಬಾಹುಬಲಿ ಅನ್ನೋ ತುಂಡ್‌ ಹೈಕ್ಳು ಈ ಹುಡುಗಿಯ ಕಣ್ಣಿಗೆ ಬೀಳುತ್ತಾರೆ.

ಈ ಹುಡುಗರನ್ನು ಬಳಸಿಕೊಂಡು ಶ್ರೀ ತನ್ನ ಪೋಷಕರನ್ನು ಹುಡುಕಲು ಯಶಸ್ವಿಯಾಗುತ್ತಾಳಾ? ಶ್ರೀ ಹೆತ್ತವರ ಹುಡುಕಾಟದಲ್ಲಿ ಭರತ-ಬಾಹುಬಲಿಯ ಪಾತ್ರವೇನು ಅನ್ನೋದೆ “ಶ್ರೀ ಭರತ ಬಾಹುಬಲಿ’ ಚಿತ್ರದ ಕಥೆ. ಅದೆಲ್ಲವನ್ನೂ ಒಂದಷ್ಟು ಕಮರ್ಶಿಯಲ್‌ ಅಂಶಗಳನ್ನು ಇಟ್ಟುಕೊಂಡು ತೆರೆಮೇಲೆ ತಂದಿದೆ ನಿರ್ದೇಶಕ ಮಂಜು ಮಾಂಡವ್ಯ ಆ್ಯಂಡ್‌ ಟೀಮ್‌. ಚಿತ್ರದ ಹೆಸರೇಹೇಳುವಂತೆ ಶ್ರೀ, ಭರತ ಮತ್ತು ಬಾಹುಬಲಿ ಅನ್ನೋ ಮೂರು ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಚಿತ್ರದ ಮೊದಲರ್ಧ ಒಂದಷ್ಟು ತರಲೆ, ಅನಪೇಕ್ಷಿತ ಹಾಸ್ಯ ದೃಶ್ಯಗಳು ಚಿತ್ರದ ವೇಗಕ್ಕೆ ಅಲ್ಲಲ್ಲಿ ಬ್ರೇಕ್‌ ಹಾಕುತ್ತ ಸಾಗುವುದರಿಂದ ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಆದರೆ ದ್ವಿತಿಯಾರ್ಧದ ನಂತರ ಚಿತ್ರಕಥೆ ಒಂದಷ್ಟು ಗಂಭೀ ರವಾಗಿ ನೋಡುಗರನ್ನು ಹಿಡಿದು ಕೂರಿಸುತ್ತದೆ. ನಿರ್ದೇಶಕರು ಮೊದ ಲರ್ಧದ ನಿರೂಪಣೆ ಕೊಂಚ ಬಿಗಿಯಾಗಿಸಿದ್ದರೆ, ಚಿತ್ರ ನೋಡುಗರಿಗೆ ಇನ್ನಷ್ಟು ಪರಿಣಾಮಕಾರಿ ಯಾಗುವ ಸಾಧ್ಯತೆಗಳಿದ್ದವು.

ಇನ್ನು ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಅಡಿಯಿಟ್ಟಿರುವ ಮಂಜು ಮಾಂಡವ್ಯ ನಿರ್ದೇಶನ ಮತ್ತು ನಟನೆ ಎರಡನ್ನೂ ಸಮಾನವಾಗಿ ನಿರ್ವಹಿಸಿದ್ದಾರೆ. ಚಿತ್ರದ ದ್ವಿತಿಯಾರ್ಧ ಮಂಜು ಮಾಂಡವ್ಯ ಮತ್ತು ನಾಯಕಿ ಸಾರಾ ಹರೀಶ್‌ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್‌ ಆಗಿದೆ. ನೋಡುಗರಿಗೆ ಚಿಕ್ಕಣ್ಣ ಕಾಮಿಡಿ ನಿರೀಕ್ಷಿತ ಮಜಾ ಕೊಡುವುದು ಕಷ್ಟ. ಉಳಿದಂತೆ ಚಿತ್ರದ ಇತರ ಕಲಾವಿದರು ನಿರ್ದೇಶಕರ ಅಣತಿಯಂತೆ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ.

Advertisement

ಚಿತ್ರದ ಛಾಯಾಗ್ರಹಣ, ಸಂಕಲನ ತೆರೆಮೇಲೆ ಚಿತ್ರದ ಅಂದವನ್ನು ಹೆಚ್ಚಿಸಿವೆ. ಮಣಿಕಾಂತ್‌ ಕದ್ರಿ ಸಂಗೀತದ ಎರಡು ಹಾಡುಗಳು ತಲೆದೂಗುವಂತಿವೆ. ಒಟ್ಟಾರೆ ಕೆಲವೊಂದು ತರ್ಕಗಳನ್ನು ಬದಿಗಿಟ್ಟು ನೋಡುವುದಾದರೆ, ಲವ್‌, ಕಾಮಿಡಿ, ಸೆಂಟಿಮೆಂಟ್‌, ಐಟಂ ಡ್ಯಾನ್ಸ್‌ ಹೀಗೆ ಎಲ್ಲ ಕಮರ್ಶಿಯಲ್‌ ಎಲಿಮೆಂಟ್ಸ್‌ನ್ನು ಇಟ್ಟುಕೊಂಡು ಬಂದಿರುವ “ಶ್ರೀ ಭರತ ಬಾಹುಬಲಿ’ಯಿಂದ ಕನಿಷ್ಟ ಮನರಂಜನೆಗೆ ಖಾತ್ರಿ ಎನ್ನಲು ಅಡ್ಡಿಯಿಲ್ಲ.

ಚಿತ್ರ: ಶ್ರೀ ಭರತ ಬಾಹುಬಲಿ
ನಿರ್ಮಾಣ: ಐಶ್ವರ್ಯ ಪ್ರೊಡಕ್ಷನ್ಸ್‌
ನಿರ್ದೇಶನ: ಮಂಜು ಮಾಂಡವ್ಯ
ತಾರಾಗಣ: ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಹರೀಶ್‌, ಶ್ರೀನಿವಾಸ ಮೂರ್ತಿ, ಭವ್ಯಾ, ಹರೀಶ್‌ ರಾಯ್‌, ಸೇತುರಾಮ್‌ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next