Advertisement
ನಗರದಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆಗೆ ನಿಷೇಧವಿದೆ. ಆದರೆ, ಈ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಇದರಿಂದಾಗಿ ಹೊಟೇಲ್‌ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳ ಮೂಲಕ ಆಹಾರ ಕಟ್ಟಿಕೊಡುವುದು ಸಾಮಾನ್ಯವಾಗಿದೆ. ಬಳಸಿದ ಪ್ಲಾಸ್ಟಿಕ್ ಚೀಲಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇವೆಲ್ಲವೂ ಗೋವುಗಳ ಉದರ ಸೇರಿ ಪ್ರಾಣ ತೆಗೆಯುತ್ತಿವೆ.
Related Articles
ನಗರದ ರಸ್ತೆ, ಹೆದ್ದಾರಿ ಬದಿಯಲ್ಲಿ ಹುಲ್ಲು ಪೊದೆಗಳ ಬದಲು ಇಂಟರ್‌ಲಾಕ್ ಕಾಂಕ್ರೀಟ್ ಹಾಸಲಾಗಿದೆ. ಅದರ ಮೇಲೆ ಪ್ಲಾಸ್ಟಿಕ್ ರಾಶಿ ಸಾಮಾನ್ಯ. ನಗರದಲ್ಲಿ ಈಗ ಗೋವುಗಳೇ ಅಪರೂಪ. ಬೀಡಾಡಿ ಗೋವುಗಳು ಮಾತ್ರ ಈ ವಿಷಕಾರಿ ಪ್ಲಾಸ್ಟಿಕ್ ಸೇವಿಸಿ ರೋಗಗಳಿಂದ ಬಳಲಿ ಕೊನೆಗೆ ಅಸುನೀಗುತ್ತಿವೆ. ಇದರೊಂದಿಗೆ ನಗರದ ಸ್ವಚ್ಛತೆಗೂ ಇದರಿಂದ ಹಾನಿಯಾಗುತ್ತಿದೆ. ಬಳಸಿದ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಹವ್ಯಾಸವನ್ನು ಜನರು ಮರೆತಂತಿದೆ. ಜಾನುವಾರುಗಳಿಗೆ ಈ ಬಗ್ಗೆ ಅರಿವಿಲ್ಲದಿರಬಹುದು ಆದರೆ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ನಾಗರಿಕರು ಈ ಬಗ್ಗೆ ಚಿಂತಿಸಬೇಕಾಗಿದೆ.
Advertisement
ಪ್ಲಾಸ್ಟಿಕ್ ನಿಷೇಧ ಹೆಸರಿಗೆ ಮಾತ್ರನಗರದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು ಎನ್ನುವ ನಿಯಮ ಹೆಸರಿಗೆ ಮಾತ್ರ ಇದ್ದಹಾಗಿದೆ. ನಗರದ ಎಲ್ಲ ಪ್ರಮುಖ ಹೊಟೇಲ್, ಅಂಗಡಿ ಮುಂಗಟ್ಟುಗಳಲ್ಲಿ ಪಾಸ್ಟಿಕ್ ಚೀಲಗಳನ್ನೇ ಬಳಸಲಾಗುತ್ತಿದೆ. ಬಳಸಿದ ಪ್ಲಾಸ್ಟಿಕ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಪರಿಣಾಮ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕಠಿನ ಕ್ರಮ ಜರಗಿಸಿದರೆ ಇಂತಹ ಅಮಾಯಕ ಪ್ರಾಣಿಗಳು ಬಲಿಯಾಗುವುದು ತಪ್ಪುತ್ತದೆ. ಪ್ಲಾಸ್ಟಿಕ್ ಉತ್ಪಾದನೆ ನಿಷೇಧಿಸಿ
ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದರ ಜತೆಗೆ ಮೂಕ ಪ್ರಾಣಿಗಳಿಗೂ ಹಾನಿಯಾಗುತ್ತಿರುವುದು ಶೋಚನೀಯ. ಸರಕಾರದ ಪ್ಲಾಸ್ಟಿಕ್ ನಿಷೇಧಾಜ್ಞೆಯ ಮಧ್ಯೆಯೂ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ವ್ಯಾಪಕವಾಗುತ್ತಿರುವುದು ನಾಗರಿಕ ಸಮಾಜದಲ್ಲಿ ಉತ್ತಮ ಬೆಳವಣಿಗೆಯಲ್ಲ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಯನ್ನು ಮೂಲದಲ್ಲಿಯೇ ನಿಷೇಧಿಸಬೇಕಾಗಿದೆ.
– ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಠ ಅರಿವು ಮೂಡಬೇಕು
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅಪಾಯ ಹಾಗೂ ಅದನ್ನು ಎಲ್ಲೆಂದರಲ್ಲಿ ಎಸೆದರೆ ಪ್ರಾಣಿಗಳ ಜೀವಕ್ಕೆ ಆಗುವ ತೊಂದರೆ ಬಗ್ಗೆ ಜನರಿಗೆ ಅರಿವು ಮೂಡಬೇಕು. ಅದನ್ನು ಹೊರತುಪಡಿಸಿ ಯಾವುದೇ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಏನೂ ಪ್ರಯೋಜನವಿಲ್ಲ.
– ಡಾ| ಎಸ್. ಮೋಹನ್,
ಉಪ ನಿರ್ದೇಶಕರು, ಪಶು ಪಾಲನಾ ಇಲಾಖೆ ಪ್ರಜ್ಞಾ ಶೆಟ್ಟಿ