ಪುತ್ತೂರು : ಇಪ್ಪತ್ತನಾಲ್ಕು ವರ್ಷಗಳಿಂದ ಸಾವಿರಾರು ಸಾಹಿತ್ಯ ಸಂಶೋಧನಾತ್ಮಕ ಚಟುವಟಿಕೆ ಗಳ ತಾಣವಾಗಿದ್ದ ಪುತ್ತೂರು ಪರ್ಲಡ್ಕದ ಶಿಕ್ಷಣ ಸಿದ್ಧಾಂತಿ ಡಾ| ಸುಕುಮಾರ ಗೌಡ ಅವರ ಕನಸಿನ ಕೂಸು ಶಿಕ್ಷಣ ಅಧ್ಯಯನ ಕೇಂದ್ರ ಮಕ್ಕಳ ಮಂಟಪ ಇದೀಗ ಇತಿಹಾಸದ ಪುಟ ಸೇರಿದೆ.
ವಿಶೇಷವೆಂದರೆ ಲಂಡನ್ ವಿವಿ ಮುದ್ರಣಗೊಳಿಸಿದ ಲರ್ನರ್ ಲರ್ನರ್ ಪುಸ್ತಕ ಸಿದ್ಧಗೊಂಡಿದ್ದು ಈ ಮಕ್ಕಳ ಮಂಟಪದಲ್ಲಿಯೇ.
1995ರಲ್ಲಿ ಪರ್ಲಡ್ಕ ಸಮೀಪ ಪ್ರಾರಂಭಗೊಂಡ ಈ ಶಿಕ್ಷಣ ಅಧ್ಯಯನ ಕೇಂದ್ರ ಕಳೆದ ಎಪ್ರಿಲ್ ತಿಂಗಳಿನಿಂದ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಇಲ್ಲಿ ನಡೆಯುತ್ತಿದ್ದ ಪುಸ್ತಕ ವಿಮರ್ಶೆ, ಸಾಹಿತ್ಯ ಚಟುವಟಿಕೆ, ಪಿಎಚ್‌ಡಿ, ಎಂಫಿಲ್ ಅಧ್ಯಯನ ವಿದ್ಯಾರ್ಥಿಗಳು, ಸದಾ ಲವಲವಿಕೆಯ ತಾಣ ಈಗ ತೆರೆಯ ಮರೆಗೆ ಸರಿದಿದೆ. ಕಡಲತೀರದ ಭಾರ್ಗವ ಡಾ| ಶಿವರಾಮ ಕಾರಂತರು ಉದ್ಘಾಟಿಸಿದ ಈ ಅಧ್ಯಯನ ಕೇಂದ್ರ ಸಾವಿರಾರು ವಿದ್ಯಾರ್ಥಿಗಳ, ಸಾಹಿತಿ ಸಂಶೋಧಕರ ನೆಚ್ಚಿನ ತಾಣವಾಗಿತ್ತು.
ಸಂಶೋಧಕರ ಜ್ಞಾನ ಭಂಡಾರ
ಸಂಶೋಧನ ಅಧ್ಯಯನ ಯೋಗ್ಯವಾದ ಪುಸ್ತಕಗಳ ಭಂಡಾರವೇ ಇಲ್ಲಿದ್ದು, ರಾಜ್ಯದ ಬೆರಳೆಣಿಕೆ ಪುಸ್ತಕ ಭಂಡಾರಗಳ ಪೈಕಿ ಇದೂ ಒಂದೆನಿಸಿದೆ. ಶಿಕ್ಷಣ ಅಧ್ಯಯನ ಕೇಂದ್ರವಾಗಿ ರೂಪುಗೊಂಡಿದ್ದ ಮಕ್ಕಳ ಮಂಟಪ ಇಂಗ್ಲಿಷ್ ಭಾಷಾ ಜ್ಞಾನದಲ್ಲಿ ಸಂಶೋಧನೆ ನಡೆಸುವ ಸಂಶೋಧನ ವಿದ್ಯಾರ್ಥಿಗಳಿಗೆ ಜ್ಞಾನ ಭಂಡಾರವಾಗಿತ್ತು. ಲರ್ನರ್ ಲರ್ನರ್ ಪುಸ್ತಕ ಇಲ್ಲಿ ಸಿದ್ದಗೊಂಡು, ಅದನ್ನು ಲಂಡನ್ ವಿವಿ ಮುದ್ರಿಸಿತು.
ಸಾಹಿತ್ಯ ಸಾಧನೆ
ಕೆನಡಾದಲ್ಲಿ ಭಾಷಾ ವಿಜ್ಞಾನದಲ್ಲಿ ಪಿ.ಎಚ್.ಡಿ. ಮಾಡಿ ಅಧ್ಯಯನ-ಅಧ್ಯಾಪನ ನಡೆಸಿದ ಡಾ| ಸುಕುಮಾರ ಗೌಡ ಅವರು ಮೂಲತಃ ಸುಳ್ಯ ತಾಲೂಕಿನವರಾದರೂ ಪುತ್ತೂರಿನಲ್ಲಿಯೇ ನೆಲೆಸಿದ್ದರು. ಇವರ ಪ್ರಾಬ್ಲೆಮ್ಸ್ ಆ್ಯಂಡ್ ಪ್ರೋಸ್ಪೆಕ್ಟ್ ಆಫ್ ಅವರ್ ಎಜುಕೇಶನ್ ಎನ್ನುವ ಪುಸ್ತಕವನ್ನು ಡಾ| ಶಿವರಾಮ ಕಾರಂತ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಪ್ರಖ್ಯಾತ ಶಿಕ್ಷಣ ತಜ್ಞ ಡಾ| ಎ.ಎಸ್. ನೀಲ್ ಅವರ ಸಮ್ಮರ್ ಹೀಲ್ ಅನ್ನು ಡಾ| ಸುಕುಮಾರ ಗೌಡ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಈ ಎಲ್ಲ ಕಾರ್ಯಗಳು ನಡೆದದ್ದು ಮಕ್ಕಳ ಮಂಟಪದಲ್ಲಿ. ಇಂತಹ ಮಹಾನ್ ಆಂಗ್ಲಭಾಷಾ ತಜ್ಞ ಡಾ| ಸುಕುಮಾರ ಗೌಡ ಅವರೇ ಸ್ಥಾಪಿಸಿದ ಮಕ್ಕಳ ಮಂಟಪ ಇದೀಗ ಅವರ ಕಣ್ಣಮುಂದೆಯೇ ಅವಸಾನದತ್ತ ಸಾಗಿದೆ.
– ಪ್ರವೀಣ್ ಚೆನ್ನಾವರ