Advertisement

ವನ್ಯ ಸಂಪತ್ತು, ಹುಲಿಗಳ ಸಂರಕ್ಷಣೆಗೆ ಕೈಜೋಡಿಸಿ

01:45 PM Jul 30, 2018 | Team Udayavani |

ಮೈಸೂರು: ಹುಲಿಗಳ ಸಂರಕ್ಷಣೆಯಿಂದ ಅರಣ್ಯ ಸಂಪತ್ತನ್ನು ರಕ್ಷಿಸಬಹುದಾಗಿದ್ದು, ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸಿ ವನ್ಯಸಂಪತ್ತಿನ ರಕ್ಷಣೆಗೆ ಶ್ರಮಿಸಬೇಕಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಪಿ.ಎಸ್‌. ಸೋಮಶೇಖರ್‌ ಅಭಿಪ್ರಾಯಪಟ್ಟರು.

Advertisement

ನಗರದ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿರುವ ಆಂಪಿಥಿಯೇಟರ್‌ನಲ್ಲಿ ಭಾನುವಾರ ಆಯೋಜಿಸಲಾಗಿದ್ದ “ವಿಶ್ವ ಹುಲಿ ದಿನ’ ದ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಹುಲಿಗಳ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದೆ.

ಈ ಹಿನ್ನೆಲೆಯಲ್ಲಿ ಹುಲಿ ಸಂತತಿಯನ್ನು ರಕ್ಷಿಸಿದರೆ ಇಡೀ ಪರಿಸರವನ್ನು ಕಾಪಾಡಿದಂತಾಗುತ್ತದೆ. ಆದ್ದರಿಂದ ಅಳಿವಿನಂಚಿನ ಅಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ಹೇಳಿದರು. 

ದೇಶದಲ್ಲಿ ಅಕ್ರಮ ವ್ಯಾಪಾರಕ್ಕಾಗಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹುಲಿ ಬೇಟೆಯಾಡುವವರ ಸಂಖ್ಯೆ ಹೆಚ್ಚಾಗತೊಡಗಿತ್ತು. ಇದರಿಂದ ರಾಜಸ್ಥಾನದ ಸಾರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಧ್ಯ ಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ಮೇಲೆ ದುಷ್ಪರಿಣಾಮ ಬೀರಿತು.

ಇದರಿಂದ ಬೇಟೆಗಾರರ ಹಾವಳಿ ತಡೆಗಟ್ಟಿ, ಹುಲಿಗಳ ರಕ್ಷಣೆಗೆ ಟೈಗರ್‌ ಟಾಸ್ಕ್ ಫೋರ್ಸ್‌ ರಚಿಸಲಾಯಿತು. ಇದೀಗ ದೇಶದಲ್ಲಿ 50 ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದು, ರಾಜ್ಯದಲ್ಲಿ ಪ್ರತಿವರ್ಷದ ಹುಲಿಗಳ ಗಣತಿ ನಡೆಸಲಾಗುತ್ತಿದೆ. ಅದರಂತೆ 2006ರಲ್ಲಿ 1411, 2010ರಲ್ಲಿ 1706 ಹಾಗೂ 2014ರಲ್ಲಿ 2226 ಹುಲಿಗಳು ಕರ್ನಾಟಕದಲ್ಲಿ ಕಂಡುಬಂದಿತ್ತು ಎಂದು ಮಾಹಿತಿ ನೀಡಿದರು.

Advertisement

ಯೂತ್‌ಕ್ಲಬ್‌ಗ ಚಾಲನೆ: ಇದೇ ಸಂದರ್ಭದಲ್ಲಿ ಚಾಮರಾಜೇಂದ್ರ ಮೃಗಾಲಯದ ಯೂತ್‌ಕ್ಲಬ್‌ಗ ನಟ ದರ್ಶನ್‌ ತೂಗುದೀಪ್‌ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟ ದರ್ಶನ್‌, ಕೇವಲ ಪ್ರಾಣಿಗಳನ್ನು ಸಾಕಿ ಸಲುಹಿದವರು ಮಾತ್ರ ಪ್ರಾಣಿ ಪ್ರಿಯರಲ್ಲ. ಬದಲಿಗೆ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಪ್ರಾಣಿಗಳಿಗೆ ಅನುಕೂಲವಾಗುವ ಪರಿಸರ ಉಳಿಸಿಕೊಡುವವರು ನಿಜವಾದ ಪ್ರಾಣಿ ಪ್ರಿಯರಾಗಿದ್ದಾರೆ ಎಂದು ಪ್ರಾಣಿ ಪ್ರಜ್ಞೆ, ಪರಿಸರ ಕಾಳಜಿಯ ಬಗ್ಗೆ ತಿಳಿಸಿಕೊಟ್ಟರು. 

ಆಕರ್ಷಿಸಿದ 3ಡಿ ಹುಲಿ: ಕಾರ್ಯಕ್ರಮದ ಅಂಗವಾಗಿ ನಂಜನಗೂಡಿನ ಕಲಾವಿದ ಅನಿಲ್‌ಕುಮಾರ್‌ ಭೋಗಶೆಟ್ಟಿ ಅವರು ಮೃಗಾಲಯದ ಮುಂಭಾಗದ ಬಿಡಿಸಿದ್ದ 3ಡಿ ಹುಲಿ ಚಿತ್ರ ಹಾಗೂ ಅನಾಮಾರ್ಫಿಕ್‌ ಆರ್ಟ್‌ನಲ್ಲಿ ಬಿಡಿಸಿದ್ದ ಹುಲಿ ಚಿತ್ರ ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ಆಗಮಸಿದ್ದ ನಟ ದರ್ಶನ್‌ 3ಡಿ ಹುಲಿ ಹಾಗೂ ಅನಾಮಾರ್ಫಿಕ್‌ ಆರ್ಟ್‌ನಲ್ಲಿ ಬಿಡಿಸಿದ್ದ ಹುಲಿಯ ಚಿತ್ರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಎಪಿಸಿಸಿಎಫ್ ವಿಜಯ್‌ ಕುಮಾರ್‌ ಗೋಗಿ, ಎಪಿಸಿಸಿಎಫ್ ಮತ್ತು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ಕಾರ್ಯದರ್ಶಿ ಅಜಿತ್‌ ಎಂ.ಕುಲಕರ್ಣಿ ಇನ್ನಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next