ಟೆಹರಾನ್ : ಚಬಹಾರ್ ಬಂದರು ಯೋಜನೆಯ ಭಾಗೀದಾರನಾಗುವಂತೆ ಇರಾನ್ ಪಾಕಿಸ್ಥಾನವನ್ನು ಕೇಳಿಕೊಂಡಿರುವುದಾಗಿ ಪಾಕಿಸ್ಥಾನೀ ಮಾದ್ಯಮ ವರದಿ ಮಾಡಿದೆ.
ಭೂ-ರಾಜಕೀಯ ಕಾರಣಗಳಿಗಾಗಿ ಇರಾನಿನ ಚಬಹಾರ್ ಬಂಧರು ಯೋಜನೆಯಲ್ಲಿ ಭಾರತ ಶಾಮೀಲಾಗಿರುವುದನ್ನು ವಿರೋಧಿಸುತ್ತಲೇ ಬಂದಿರುವ ಪಾಕಿಸ್ಥಾನ, ತನ್ನ ವ್ಯೂಹಾತ್ಮಕ ಮಹತ್ವದ ಗÌದರ್ ಬಂದರಿಗೆ, ಚಬಹಾರ್ ಬಂದರಿನಿಂದ ಬೆದರಿಕೆ ಇದೆ ಎಂದು ಪದೇ ಪದೇ ಹೇಳಿಕೊಂಡು ಬಂದಿತ್ತು.
ಇದೀಗ ಚಬಹಾರ್ ಬಂದರು ಯೋಜನೆಯಲ್ಲಿ ಸೇರಿಕೊಳ್ಳುವಂತೆ ಇರಾನ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಾಕಿಗೆ ಉಭಯ ಸಂಕಟ ತಲೆದೋರಿದೆ. ಇರಾನ್ ಜತೆಗಿನ ತನ್ನ ವಿದೇಶೀ ನೀತಿಗೆ ಸಂಬಂಧಿಸಿದಂತೆ ಪಾಕ್ ಈಗ ಒತ್ತಡಕ್ಕೆ ಗುರಿಯಾಗಿದೆ ಎಂದು ಪಾಕ್ ಮಾಧ್ಯಮಗಳು ಹೇಳಿವೆ.
ಇರಾನ್ ವಿದೇಶ ಸಚಿವ ಜವಾದ್ ಝರೀಫ್ ಅವರು ಈಚೆಗೆ ಕೈಗೊಂಡಿದ್ದ ಮೂರು ದಿನಗಳ ಪಾಕ್ ಭೇಟಿಯ ವೇಳೆ “ನೀವು ಚಬಹಾರ್ ಬಂದರು ಯೋಜನೆಯಲ್ಲಿ ಸೇರಿಕೊಳ್ಳಿ; ನೀವೂ ಅದರ ಲಾಭ ಪಡೆಯಿರಿ’ ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಚಬಹಾರ್ ಯೋಜನೆಗೆ ಪಾಕಿಸ್ಥಾನವೂ ಸೇರಬೇಕೆಂಬ ಇರಾನ್ ಆಶಯದಲ್ಲಿ ಭಾರತದ ವಿರುದ್ಧ ದೀರ್ಘಕಾಲದಿಂದ ಈ ಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ತಪ್ಪು ಅಭಿಪ್ರಾಯ ಹೊಂದಿರುವುದನ್ನು ನಿವಾರಿಸುವ ಯತ್ನವೂ ಅಡಗಿದೆ ಎಂದು ಪಾಕ್ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.
ಚಬಹಾರ್ ಬಂದರು ಯೋಜನೆಯಲ್ಲಿ ಭಾರತ ದೀರ್ಘ ಕಾಲದಿಂದ ಇರಾನ್ ಜತೆಗೆ ಸೇರಿಕೊಂಡಿದೆ. ಕಾರಣ ಈ ಬಂದರಿನ ಮೂಲಕ ಭಾರತಕ್ಕೆ ಅಫ್ಘಾನಿಸ್ಥಾನಕ್ಕೆ ಮತ್ತು ಮಧ್ಯ ಏಶ್ಯಕ್ಕೆ ನೇರ ಪ್ರವೇಶ ಸಿಗುತ್ತದೆ ಎಂಬುದೇ ಪಾಕಿಸ್ಥಾನ,ಭಾರತದ ವಿರುದ್ಧ ಅಪಸ್ವರ ಎತ್ತುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.