ಸೊಲ್ಲಾಪುರ: ಸಂಸ್ಕಾರಯುತ ಸಮಾಜ ನಿರ್ಮಿಸಲು ಮಠ-ಮಂದಿರಗಳ ಜಿರ್ಣೋದ್ಧಾರ ಕಾರ್ಯ ಮಹತ್ವದ್ದಾಗಿದ್ದು, ಈ ಕಾರ್ಯದಲ್ಲಿ ಎಲ್ಲರೂ ತನು, ಮನ, ಧನದಿಂದ ಸಹಭಾಗಿಯಾಗಬೇಕೆಂದು ಶಾಸಕ ಸಿದ್ಧರಾಮ ಮ್ಹೇತ್ರೆ ಹೇಳಿದರು.
ಅಕ್ಕಲಕೋಟ ತಾಲೂಕಿನ ತೋಳನೂರ ಗ್ರಾಮದ ಶ್ರೀ ಗಂಗಾಧರ ಸ್ವಾಮೀಜಿ ಮಠದ ಜೀರ್ಣೋದ್ಧಾರ ಮಹೋತ್ಸವದ ದಿನ ಹಮ್ಮಿಕೊಳ್ಳಲಾಗಿದ್ದ 1001 ಸುಹಾಸಿನಿಯರಿಗೆ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ ತನು, ಮನ, ಧನದಿಂದ ಸಹಕಾರ ನೀಡಲು ಬದ್ಧನಾಗಿದ್ದೇನೆ. ಇಂಥ ಧಾರ್ಮಿಕ ಕಾರ್ಯಗಳನ್ನು ಸರಾಗವಾಗಿ ನಡೆಸಲು ಗ್ರಾಮಸ್ಥರು ಮುಂದಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಆದರದ ಸ್ಥಾನವಿದ್ದು, ಅವರ ಉಡಿತುಂಬುವ ಕಾರ್ಯ ಆಯೋಜನೆ ಮಾಡಿದ ಸಂಯೋಜಕರಿಗೆ ಅಭಿನಂದನೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಸಚೀನ ಕಲ್ಯಾಣಶೆಟ್ಟಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ನಮ್ಮ ಮನಸ್ಸು ಪವಿತ್ರವಾಗುತ್ತದೆ. ಶ್ರೀಮಠದ ಜೀರ್ಣೋದ್ಧಾರ ಕಾರ್ಯದಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಅಧ್ಯಕ್ಷ ಸುರೇಖಾ ಹೋಳಿಕಟ್ಟಿ ಮಾತನಾಡಿ, ಎಲ್ಲಿ ಸ್ತ್ರೀಯರಿಗೆ ಮಾನ, ಸನ್ಮಾನ ಇರುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ನಾವು ಸ್ತ್ರೀಯರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಅಕ್ಕಲಕೋಟದ ನಗರಾಧ್ಯಕ್ಷೆ ಶೋಭಾತಾಯಿ ಖೇಡಗಿ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಚನ್ನಮಲ್ಲ ಮಹಾ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಪ್ರಮುಖ ಅತಿಥಿಗಳಾಗಿ ಬಿಜೆಪಿ ಅಕ್ಕಲಕೋಟ ತಾಲೂಕಾಧ್ಯಕ್ಷ ಸಚೀನ ಕಲ್ಯಾಣಶೆಟ್ಟಿ, ಸುರೇಖಾ ಹೋಳಿಕಟ್ಟಿ ಹಾಗೂ ಮತ್ತಿತರರು ಇದ್ದರು.
ಶರಣಪ್ಪಾ ಫುಲಾರಿ ನಿರೂಪಿಸಿದರು, ಸಿದ್ಧರಾಮ ತೆಗ್ಗೆಳ್ಳಿ ವಂದಿಸಿದರು. ತೋಳನೂರ ಗ್ರಾಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 1001 ಸುಹಾಸಿನಿಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ 3000 ಮಹಿಳೆಯರಿಗೆ ಕರಿಗಡಬು ಮತ್ತು ತುಪ್ಪದೂಟ ಬಡಿಸಲಾಯಿತು.