Advertisement

ಶಕ್ತಿ ಪ್ರಾಜೆಕ್ಟ್ ಯಶಸ್ವಿಗೆ ಕೈ ಜೋಡಿಸಿ

01:33 PM Nov 23, 2018 | Team Udayavani |

ದಾವಣಗೆರೆ: ಶಕ್ತಿ ಪ್ರಾಜೆಕ್ಟ್‌ನಡಿ ಇನ್ನೂ ಹತ್ತು ದಿನಗಳಲ್ಲಿ ದಾವಣಗೆರೆ ಜಿಲ್ಲೆಯಿಂದ 2 ಲಕ್ಷ ಸದಸ್ಯರ ಸದಸ್ಯತ್ವ ನೋಂದಣಿ ಮಾಡಿಸಲು ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕುಗಳ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮನವಿ ಮಾಡಿದ್ದಾರೆ.

Advertisement

ಗುರುವಾರ, ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಾದ್ಯಂತ ಪ್ರತಿಯೊಬ್ಬ ಕಾರ್ಯಕರ್ತನನ್ನು ಬಲಗೊಳಿಸಲು ಹಾಗೂ ಅವರ ಅಭಿಪ್ರಾಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಶಕ್ತಿ ಪ್ರಾಜೆಕ್ಟ್ಗೆ ಚಾಲನೆ ನೀಡಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆ ಜಿಲ್ಲೆಯಲ್ಲಿ 2 ಲಕ್ಷ ನೋಂದಣಿ ಸದಸ್ಯತ್ವ ಮಾಡಿಸಲು ಸೂಚಿಸಿರುವ ಗುರಿ ಮುಟ್ಟಲಿಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಕೈಜೋಡಿಸಬೇಕು ಎಂದರು.

ಎಸ್‌.ಎಂ.ಎಸ್‌ ಮೂಲಕ ಶಕ್ತಿ ಪ್ರಾಜೆಕ್ಟ್ಗೆ ಸದಸ್ಯತ್ವ ಮಾಡಿಸಲು ಮೊದಲು ಮತದಾರನ ಗುರುತಿನ ಚೀಟಿ ಸಂಖ್ಯೆಯನ್ನು ಮೊಬೈಲ್‌ ನಂ: 70450-06100ಗೆ ದಾಖಲಿಸಬೇಕು. ಆಗ ಸದಸ್ಯತ್ವ ಯಶಸ್ವಿ ಆದ ಬಗ್ಗೆ ಮಾಹಿತಿ ಬರುತ್ತದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ತಾಲೂಕಿನ 250 ಬೂತ್‌ಗಳಿಗೆ 10 ಅಧ್ಯಕ್ಷರನ್ನು ನೇಮಕ ಮಾಡಿದ್ದು, ಆಯಾಯ ಬೂತ್‌ಗಳಲ್ಲಿ ಪದಾಧಿಕಾರಿಗಳು ನಿತ್ಯ ಮನೆ ಮನೆಗಳಿಗೆ ಭೇಟಿ ನೀಡಿ, ಸದಸ್ಯತ್ವ ಮಾಡಿಸಬೇಕು. ತಾಲೂಕು ಪದಾಧಿಕಾರಿಗಳು ಒಂದು ಬೂತ್‌ಗೆ ಕನಿಷ್ಠ 50 ಜನರ ಸದಸ್ಯತ್ವ ಮಾಡಿಸಬೇಕು ಎಂದು ಕೋರಿದರು. 

3 ರಿಂದ 4 ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಬಿಜೆಪಿಯವರು ಹಣ, ಹೆಂಡ ಹಂಚಿ ಅಧಿಕಾರಕ್ಕೆ ಬರುವ ಹುನ್ನಾರ ನಡೆಸುತ್ತಿದ್ದಾರೆ. ಬಿಜೆಪಿಯು ಆರ್‌ಎಸ್‌ಎಸ್‌ ಮೂಲಕ ಪ್ರಚೋದನಾ ಹೇಳಿಕೆ ನೀಡುವ ಕೆಲಸ ಮಾಡುತ್ತಿದೆ. ರಾಮಮಂದಿರ ನಿರ್ಮಾಣದ ಸೋಗಲ್ಲಿ ಕೋಮುಗಲಭೆ ಸೃಷ್ಟಿಸುವ ಉದ್ದೇಶವೇ ಹೊರತು ಮಂದಿರ ಕಟ್ಟೋದಲ್ಲ. ನರೇಂದ್ರ ಮೋದಿ ಅವರದ್ದು ಬರೀ ಜನರನ್ನು ಮರಳು ಮಾಡುವ ಕೆಲಸ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಟ ಏನೂ ನಡೆಯುವುದಿಲ್ಲ ಎಂದರು.

Advertisement

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಕಿಶ್‌ ಬಾನು ಮಾತನಾಡಿ, ಶಕ್ತಿ ಪ್ರಾಜೆಕ್ಟ್… ದೇಶದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ಜನರು ತಮ್ಮ ಸಮಸ್ಯೆ, ಸಲಹೆ, ಸಿಗದ ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಉತ್ತಮ ಅವಕಾಶ ಇದಾಗಿದೆ. ಈ ಪ್ರಾಜೆಕ್ಟ್ ಮೂಲಕ ಎಲ್ಲಾ ಜಿಲ್ಲೆ, ತಾಲೂಕುಗಳ ಕೆಪಿಸಿಸಿ ಸಂಪರ್ಕ ಮತ್ತಷ್ಟು ಸಮೀಪ ಆಗಲಿದೆ ಎಂದರು. 

ಮಹಿಳಾ ಕಾರ್ಯಕರ್ತರು ಅಷ್ಟಾಗಿ ಕಾರ್ಯಪ್ರವೃತವಾಗಿಲ್ಲ. ಎಲ್ಲಾ ಮಹಿಳಾ ಕಾರ್ಯಕರ್ತರು ಕ್ರಿಯಾಶೀಲರಾಗಬೇಕು.
ಸ್ವಸಹಾಯ ಸಂಘಗಳ ಗುಂಪುಗಳ ಮಹಿಳೆಯರಿಗೆ ಪಕ್ಷದ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಿ ಸದಸ್ಯತ್ವ ಮಾಡಿಸಬೇಕು. ಬ್ಲಾಕ್‌ ಅಧ್ಯಕ್ಷರು ಯಾರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸುತ್ತಾರೋ ಅವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವಂತಪ್ಪ, ಕೆ.ಎಚ್‌. ಓಬಳಪ್ಪ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಇಕ್ಭಾಲ್‌ ಅಹಮದ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಕಾರ್ಯದರ್ಶಿ ಎ. ನಾಗರಾಜ್‌, ಬಿ.ಎಚ್‌. ವೀರಭದ್ರಪ್ಪ, ನಂಜಾನಾಯ್ಕ, ಪ್ರಕಾಶ್‌ ಪಾಟೀಲ್‌ ಇತರರು ಇದ್ದರು ಅಮಾಯಕ ರೈತರ ಬಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು, ಹಸಿರು ಶಾಲು ಹಾಕಿಕೊಂಡು ರೈತರೊಂದಿಗೆ ದಬ್ಟಾಳಿಕೆಯಿಂದ ಮರಳು ತುಂಬುವ ಪ್ರಯತ್ನ ಮಾಡಿದ್ದಾರೆ. ಆದರೆ, ಯಾವೊಬ್ಬ ರೈತನಿಗೂ ಒಂದು ಪುಟ್ಟಿ ಮರಳು ಕೊಡಿಸಲಾಗಿಲ್ಲ. ಸುಮ್ಮನೆ ಅಮಾಯಕ 70 ಜನ ರೈತರ ಮೇಲೆ ಕೇಸ್‌ ಹಾಕುವಂತೆ ಮಾಡಿದ್ದಾರೆ.

ಯಾವುದೇ ರೀತಿ ಕಾನೂನು ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂಬುದಾಗಿ ಪ್ರಮಾಣ ವಚನ ಸ್ವೀಕರಿಸಿ, ಅದನ್ನೆಲ್ಲಾ ಗಾಳಿಗೆ ತೂರಿ ಕಾನೂನು ಉಲ್ಲಂಘಿಸುವ ಇಂತಹವರಿಗೆ ಶಾಸಕಗಿರಿ ಏಕೆ ಬೇಕು, ನಾಚಿಕೆ ಆಗುವುದಿಲ್ಲವೇ? ಇದೆಲ್ಲಾ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸಿ ಮೋಸ ಮಾಡುವ ತಂತ್ರಗಾರಿಕೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಇದೇ ಸಂದರ್ಭದಲ್ಲಿ ಶಾಸಕ ರೇಣುಕಾರ್ಚಾರ ವಿರುದ್ಧ ಹರಿಹಾಯ್ದರು. ಈ ಹಿಂದೆ ಹಿಂದೂ ಮಹಾಗಣಪತಿ ಹೆಸರಲ್ಲಿ ಎಲ್ಲೂ ಗಣಪತಿ ಪ್ರತಿಷ್ಠಾಪಿಸಿರಲಿಲ್ಲ. ಈ ಬಾರಿ ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಿ, ವೀಕ್ಷಣೆಗೆ ಶುಲ್ಕ ವಿಧಿಸಿ, ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿದೆ. ಭಕ್ತಿ ಪ್ರಧಾನವಾದ ಹಬ್ಬವನ್ನು ಪಕ್ಷದ ಸಂಘಟನೆ ಬಳಸಿಕೊಳ್ಳಲಾಗಿದೆ. ಎಲ್ಲೆಲ್ಲೂ ಕೇಸರಿ ಬಾವುಟ ಹಾರಾಡುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next