Advertisement
ಸಾಹಸ ಮನೋವೃತ್ತಿ, ದೇಶ ಸೇವಾ ಮನೋಭಾವ ಇರುವ ಪ್ರತಿಯೊಬ್ಬ ಯುವಕ, ಯುವತಿಯರ ಕನಸು ಒಂದೇ. ಅದು ಭಾರತೀಯ ರಕ್ಷಣಾ ಪಡೆಯನ್ನು ಸೇರಬೇಕು ಎಂಬುದು. ಸೇನಾಧಿಕಾರಿಯ ಹುದ್ದೆ ದೊರಕಿಸಿಕೊಡುವ ಘನತೆ, ಗಾಂಭೀರ್ಯ ಮತ್ತು ಸಮಾಜದಲ್ಲಿ ಇದಕ್ಕೆ ದೊರಕುವ ಗೌರವ ಇದಕ್ಕೆ ಮುಖ್ಯ ಕಾರಣ. ಸೇನೆಗೆ ಸೇರಬೇಕು ಅನ್ನೋದನ್ನೇ ದೊಡ್ಡ ಕನಸಾಗಿಟ್ಟುಕೊಂಡು ಕೂತರೆ ಪ್ರಯೋಜನ ಇಲ್ಲ. ಕನಸನ್ನು ನನಸಾಗಿಸಿಕೊಳ್ಳುವ ಮಾರ್ಗದ ನೀಲನಕ್ಷೆ ದೊರಕಿಸಿಕೊಳ್ಳುವುದು ಮುಖ್ಯ. ಹೇಗೆ ಸೇರಬೇಕು? ಯಾವ ಹಂತದಲ್ಲಿ ಆಯ್ಕೆ ಆದರೆ ಒಳಿತು, ಸೇವಾ ನಿಬಂಧನೆಗಳೇನು? ಅಲ್ಲಿನ ಜೀವನ ಶೈಲಿ ಏನು? ಇದನ್ನೆಲ್ಲ ಅರಿತುಕೊಂಡರೆ ಸೇನೆ ಸೇರುವುದು ಸಾಧ್ಯ.
Related Articles
Advertisement
ತಾಂತ್ರಿಕ ಹುದ್ದೆಗೆ ಕಡ್ಡಾಯವಾಗಿ ಪಿಯುಸಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ, ಇಂಗ್ಲೀಷ್ ಓದಿರಬೇಕು. ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು. ಇದೇ ತಾಂತ್ರಿಕ ವಿಭಾಗದಲ್ಲಿ ನರ್ಸಿಂಗ್ ಅಸಿಸ್ಟೆಂಟ್, ವೆಟರ್ನರಿ ನರ್ಸಿಂಗ್ ಅಸಿಸ್ಟೆಂಟ್ ಅನ್ನೋ ಹುದ್ದೆಗಳೂ ಇವೆ. ಇದಕ್ಕಾದರೆ, ಪಿಯುಸಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ವಿಷಯಗಳನ್ನು ಅಧ್ಯಯನ ಮಾಡಿರಬೇಕು. ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು. ಬಿ.ಎ, ಬಿ.ಎಸ್‌ಸಿ, ಐ.ಟಿ, ಬಿ.ಸಿ.ಎ, ಎಂ.ಸಿ.ಎ, ಎಂಎಸ್.ಸಿ ಓದಿದವರಿಗೆ ಹವಿಲ್ದಾರ್‌ಗಳಾಗಬಹುದು.
ಹೀಗೆ, ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗಳಿಗೆ ಪ್ರತ್ಯೇಕ ಪರೀಕ್ಷೆಗಳಿರುತ್ತವೆ. ವಿಜ್ಞಾನ ವಿಭಾಗದ ಪಿ.ಯು. ಸಿ ವಿದ್ಯಾರ್ಥಿಗಳು ಟೆಕ್ನಿಕಲ್ ಎಂಟ್ರಿ ಸ್ಕೀಮ್‌ನಲ್ಲಿ ಭೂ ಸೇನೆ ಅಥವಾ ನೌಕಾಸೇನೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಪದವಿಮುಗಿಯುತ್ತಿದ್ದಂತೆಯೇ ಅಧಿಕಾರಿಯಾಗಿ ಸೇವೆಗೆ ಇಳಿಯಬಹುದು. ಈ ಬಗೆಯ ಪ್ರವೇಶ ಪಡೆದವರಿಗೆ ಯು.ಪಿ.ಎಸ್.ಸಿ. ಪರೀಕ್ಷೆ ಕೂಡ ಬೇಕಾಗಿಲ್ಲ. ಅಲ್ಲದೆ ಖಡಕ್ ವಾಸ್ಲಾದ ಎನ್.ಡಿ.ಎ. ಯಲ್ಲಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಸೇರಲು ಯು.ಪಿ.ಎಸ್.ಸಿ. ಪರೀಕ್ಷೆ ನಡೆಸುತ್ತದೆ.
ಎನ್.ಡಿ.ಎ. ಅತ್ಯುತ್ತಮ ದರ್ಜೆಯ ಶಿಕ್ಷಣ, ತರಬೇತಿ ನೀಡುವುದರ ಜೊತೆಗೆ ಜೆ.ಎನ್.ಯು ಇಂದ ವಿಜ್ಞಾನ ಅಥವಾ ಮಾನವಶಾಸ್ತ್ರಗಳ ವಿಭಾಗದಲ್ಲಿ ಪದವಿ ಪಡೆಯಲೂ ಅವಕಾಶ ಮಾಡಿಕೊಡುತ್ತದೆ. ಇದಲ್ಲದೆ ಮೂವತ್ತು ಬಗೆಯ ಪಠ್ಯೇತರ ವಿಷಯಗಳಲ್ಲಿ ತೊಡಗಿಕೊಳ್ಳಲು ಇಲ್ಲಿ ಪೋ›ತ್ಸಾಹ ದೊರೆಯುತ್ತದೆ. ಏರೊ-ಮಾಡೆಲಿಂಗ್, ಗಾಲ್ಫ್, ಗ್ಲೆಡಿಂಗ್, ಸೈಲಿಂಗ್, ವಿಂಡ್‌ಸರ್ಫಿಂಗ್, ಖಗೋಳ ವಿಜ್ಞಾನ ಮೊದಲಾದ ಆಸಕ್ತಿಕರ ಪಠ್ಯೇತರ ವಿಷಯಗಳ ವಿದ್ಯಾರ್ಥಿಗಳು ಇದರಲ್ಲಿ ತೊಡಗಿಕೊಳ್ಳಬಹುದು. ಇನ್ನು ಪದವೀಧರ ವಿದ್ಯಾರ್ಥಿಗಳಿಗೆ ಸಿ.ಡಿ.ಎಸ್.ಸಿ (ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್) ಮೂಲಕ ರೆಗ್ಯುಲರ್ ಅಥವಾ ಎಸ್.ಎಸ್.ಸಿ (ಶಾರ್ಟ್ ಸರ್ವಿಸ್ ಕಮೀಷನ್ಡ್ ಆಫೀಸರ್) ಆಗಿ ಸೇರಲು ಅವಕಾಶವಿದೆ.
ರೆಗ್ಯುಲರ್ ಕಮೀಷನ್ಡ್ ಅಧಿಕಾರಿಗಳಿಗೆ ಡೆಹ್ರಾಡೂನಿನ ಪ್ರತಿಷ್ಠಿತ ಸೈನಿಕ ತರಬೇತಿ ಕೇಂದ್ರ ಐ.ಎಮ್.ಎ (ಇಂಡಿಯನ್ ಮಿಲಿಟರಿ ಅಕಾಡೆಮಿ) ತರಬೇತಿ ನೀಡುತ್ತಾರೆ. ಇದರಲ್ಲಿ ಎಸ್.ಎಸ್.ಸಿ. ಆಯ್ಕೆ ಯಾದವರಿಗೆ ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡಿ, ಐದು ವರ್ಷಗಳ ಅವಧಿಯ ಸೇವೆಗೆ ಅವಕಾಶ ನೀಡಲಾಗುತ್ತದೆ. ಈ ಅವಧಿಯ ಬಳಿಕ ಅವರು ಹುದ್ದೆಗೆ ರಾಜೀನಾಮೆ ನೀಡಿ ಹೊರಬರಬಹುದು ಅಥವಾ ಮತ್ತೆ ಐದು ವರ್ಷಕ್ಕೆ ನವೀಕರಿಸಬಹುದು ಅಥವಾ ಇಚ್ಛೆಪಟ್ಟಲ್ಲಿ ಖಾಯಂ ಸೇನಾಧಿಕಾರಿಯಾಗಿಯೂ ಆಗಿ ಮುಂದುವರೆಯಬಹುದು.
ಪದವೀಧರರು: ಇಂಜಿನಿಯರಿಂಗ್ ಪದವೀಧರರು ತಮ್ಮ ಪದವಿ ಓದಿನ ಅಂತಿಮ ವರ್ಷ ಅಥವಾ ಅಂದಿನ ವರ್ಷದಲ್ಲೇ ಎಸ್.ಎಸ್.ಬಿ. (ಸರ್ವೀಸ್ ಸೆಲೆಕ್ಷನ್ ಬೋರ್ಡ್) ಮೂಲಕ ಟೆಕ್ನಿಕಲ್ ಗ್ರಾಜುಯೇಟ್ ಸ್ಕೀಮ್‌ನಲ್ಲಿ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆಯೇ ರಕ್ಷಣಾ ಪಡೆಗೆ ಸೇರಬಹುದು. ಜೊತೆಗೆ, ಹಿಂದಿನ ಎರಡು ವರ್ಷದ ಸೇವಾ ಹಿರಿತನ ಗಳಿಸಿ ನೇರವಾಗಿ ಕ್ಯಾಪ್ಟನ್ ರ್‍ಯಾಂಕಿಗೆ ಸೇರ್ಪಡೆಯಾಗಬಹುದು. ಇದೇ ರೀತಿ ಎಸ್.ಎಸ್.ಬಿ. ಮೂಲಕ ಮಹಿಳಾ ಎಂಜಿನಿಯರಿಂಗ್ ಪದವೀಧರರು ಸೇನೆ ಸೇರಿ ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಹದಿನಾಲ್ಕು ವರ್ಷ ಸೇವೆ ಸಲ್ಲಿಸಬಹುದು.
ರಕ್ಷಣಾ ಪಡೆಗಳಲ್ಲಿನ ಸೇವೆ, ಇಂದು ಹೆಚ್ಚು ಹೆಚ್ಚು ಆಕಾಂಕ್ಷಿಗಳನ್ನು ಆಕರ್ಷಿಸುತ್ತಿದೆ. ಕ್ಷಿಪ್ರ ಪದೋನ್ನತಿ, ಹೆಚ್ಚಿನ ಸವಲತ್ತು, ಮನೆಯ ಅವಲಂಬಿತರಿಗೆ, ಪತ್ನಿ- ಮಕ್ಕಳಿಗೆ ವೈದ್ಯಕೀಯ ಸೇವೆ, ಮಕ್ಕಳಿಗೆ ಉತ್ತಮ ಶಿಕ್ಷಣ, ಒಳ್ಳೆಯ ವಸತಿಗೃಹ, ಭೋಜನಗೃಹ, ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯುವ ಕ್ಯಾಂಟೀನ್… ಈ ಎಲ್ಲ ಸವಲತ್ತುಗಳು, ರಕ್ಷಣಾಪಡೆಗಳಲ್ಲಿ ಸೇವೆ ಸಲ್ಲಿಸುವವರಿಗೆ ಲಭ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಶಿಫ್ಟ್ಗಳಲ್ಲಿ ದುಡಿದು, ದೇಹದ ಆರೋಗ್ಯ ಹಾಳುಗೆಡವಿಕೊಂಡು, ಒತ್ತಡ ಸಂಬಂಧಿತ ಖಾಯಿಲೆಗಳನ್ನು ಮೆತ್ತಿಕೊಳ್ಳುವುದಕ್ಕಿಂತ, ಶಿಸ್ತುಬದ್ಧ ಜೀವನ, ನಿಯಮಬದ್ಧ ವೃತ್ತಿ,
ಆರೋಗ್ಯಭರಿತ ಪೂರ್ಣ ಜೀವನ ನಡೆಸುವ ಅವಕಾಶ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವವರಿಗೆ ಇದೆ. ಮೂರು ಬಗೆಯ ರಕ್ಷಣಾ ಪಡೆಗಳಲ್ಲಿ ರಕ್ಷಣಾ ಕಾರ್ಯ, ಆಡಳಿತ ಕಾರ್ಯ, ವೈದ್ಯಕೀಯ ಸೇವೆ, ಇಂಜಿನಿಯರಿಂಗ್ ಸೇವೆ, ಶಿಕ್ಷಣ ವಿಭಾಗದ ಸೇವೆ, ನ್ಯಾಯಾಂಗ ವಿಭಾಗದ ಸೇವೆ (ಜೆ.ಎ.ಜಿ.) ಲಭ್ಯವಿದೆ. ಜಾತಿ, ಧರ್ಮ, ಮತ ಸಮುದಾಯಗಳ ಎಲ್ಲೆಕಟ್ಟಿನಾಚೆ ಕೇವಲ ದೈಹಿಕ, ವೈದ್ಯಕೀಯ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ರಕ್ಷಣಾಪಡೆಗಳಿಗೆ ಆಯ್ಕೆ ನಡೆಯುತ್ತದೆ. ಅಭಿಮಾನದ, ಶೌರ್ಯದ, ಕೆಚ್ಚೆದೆಯ ಸೇವೆ – ರಕ್ಷಣಾಪಡೆಗಳಲ್ಲಿನ ಸೇವೆ. ಅಂದ ಹಾಗೇ, ಸೇನೆ ಸೇರಲು ನೀವು ಸಿದ್ಧರಿದ್ದೀರಾ?!
ರಕ್ಷಣಾ ಪಡೆಗಳಲ್ಲಿನ ಪ್ರವೇಶಕ್ಕೆ ವಿವಿಧ ಪರೀಕ್ಷೆಗಳಿವೆ. ಆಯಾ ವಿಭಾಗಕ್ಕೆ ತಕ್ಕಂತೆ ಪ್ರಶ್ನೆಪತ್ರಿಕೆಗಳು ತಯಾರಾಗುತ್ತವೆ. ಇದರಲ್ಲಿ ನೆಗೆಟೀವ್ ಮಾರ್ಕ ಕೂಡ ಇರುತ್ತದೆ. ಹೀಗಾಗಿ, ತಪ್ಪು ಉತ್ತರಕ್ಕೆ ಗಳಿಸಿದ ಅಂಕ ಖೋತಾ ಆಗುತ್ತದೆ ಎಚ್ಚರ!
ಭೂಸೇನೆಸಿಪಾಯಿ- ಸಾಮಾನ್ಯ ಸೇವೆ ಪರೀಕ್ಷೆ.
ಸಿಪಾಯಿ- ತಾಂತ್ರಿಕ ಪರೀಕ್ಷೆ.
ಕ್ಲರ್ಕ್ / ಸ್ಟೋರ್ ಕೀಪರ್ ಪರೀಕ್ಷೆ.
ಸಿಪಾಯಿ ಶ್ರುಶೂಷೆ ಸೇವೆ.
ಸಿಪಾಯಿ ಟ್ರೇಡ್ಸ್‌ಮೆನ್ ಸಾಮಾನ್ಯ ಸೇವೆ ಮತ್ತು ನಿರ್ದಿಷ್ಟ ಸೇವೆ ಪರೀಕ್ಷೆ ನೌಕಾ ಸೇನೆ
ಭಾರತೀಯ ನೌಕಾದಳ ಪರೀಕ್ಷೆ (ಶಿಕ್ಷಣ, ಕಾನೂನು ಮತ್ತು ವ್ಯವಸ್ಥಾಪನಾ ವಿಭಾಗಗಳು)
ಭಾರತೀಯ ನೌಕಾದಳ ಪ್ರವೇಶ ಪರೀಕ್ಷೆ.
ಭಾರತೀಯ ನೌಕಾದಳ ನೇರ ಪ್ರವೇಶ ಪರೀಕ್ಷೆ (ಡಿಪ್ಲೊಮಾ ಪದವೀಧರರಿಗೆ)
ಭಾರತೀಯ ನೌಕಾದಳ ಡಾಕ್‌ಯಾರ್ಡ್ ಸೇವೆ – ಪ್ರವೇಶ ಪರೀಕ್ಷೆ.
ಭಾರತೀಯ ನೌಕಾದಳ ಸೈಲರ್ ಪರೀಕ್ಷೆ (ನೇರ ಪ್ರವೇಶ)
ಭಾರತೀಯ ನೌಕಾದಳ ಸೈಲರ್ ಮೆಟ್ರಿಕ್ ಪ್ರವೇಶ ನೇಮಕಾತಿ ಪರೀಕ್ಷೆ. ಭಾರತೀಯ ವಾಯು ಸೇನೆ
ತಾಂತ್ರಿಕ ಭಾಗದ ಸೇವೆಗೆ ಪರೀಕ್ಷೆ.
ತಾಂತ್ರಿಕವಲ್ಲದ ವಿಭಾಗಕ್ಕೆ (ನಾನ್ ಟೆಕ್ನಿಕಲ್) ಪರೀಕ್ಷೆ.
ಶಿಕ್ಷಣ ತರಬೇತುದಾರರ ಪರೀಕ್ಷೆ.
ಸಂಗೀತವಾದನ ಪರೀಕ್ಷೆ. ಅಧಿಕಾರಿಗಳ ಪರೀಕ್ಷೆ
ಭಾರತೀಯ ವಾಯುಸೇನೆ ಮಹಿಳಾ ಪೈಲಟ್ ತರಬೇತಿ ಪರೀಕ್ಷೆ.
ಭಾರತೀಯ ವಾಯುಸೇನೆ ಪೈಲಟ್ ಪರೀಕ್ಷೆ.
ಭಾರತೀಯ ವಾಯುಸೇನೆ ಏರೋನಾಟಿಕಲ್ ಇಂಜಿನಿಯರಿಂಗ್ ಅಧಿಕಾರಿಗಳ ಪರೀಕ್ಷೆ.
ಭಾರತೀಯ ವಾಯುಸೇನೆ ಅಧಿಕಾರಿಗಳ ಪರೀಕ್ಷೆ. ಹೆಚ್ಚಿನ ಮಾಹಿತಿಗೆ: https://www.indianarmy.nic.in * ಡಾ. ರಘು